ಮಂಡ್ಯ ರಾಜಕೀಯ; ಕುತೂಹಲ ಮೂಡಿಸಿದ ದರ್ಶನ್ ಪುಟ್ಟಣ್ಣಯ್ಯ ಪೋಸ್ಟ್!

ಮಂಡ್ಯ ಕ್ಷೇತ್ರದ ಸಂಸದೆ ಸುಮಲತಾ ಅಂಬರೀಶ್. 2019ರ ಲೋಕಸಭೆ ಚುನಾವಣೆಯಲ್ಲಿ ಬಿಜೆಪಿ ಬೆಂಬಲದೊಂದಿಗೆ ಪಕ್ಷೇತರ ಅಭ್ಯರ್ಥಿಯಾಗಿ ಚುನಾವಣಾ ಕಣಕ್ಕಿಳಿದು ಜಯಗಳಿಸಿದ್ದಾರೆ. ಈಗ ಅವರು ರಾಜ್ಯ ರಾಜಕೀಯಕ್ಕೆ ಬರುತ್ತಾರೆ ಎಂಬ ಸುದ್ದಿಗಳಿವೆ. ಇಂತಹ ಸಮಯದಲ್ಲಿ ಈ ಪೋಸ್ಟ್ ಹಾಕಿದ್ದಾರೆ.
ಫೇಸ್‌ಬುಕ್ ಪೋಸ್ಟ್ ಆತ್ಮೀ
ಯ ಕಾರ್ಯಕರ್ತ ಬಂಧುಗಳೇ ತಮಗೆ ಈ ಮೂಲಕ ತಿಳಿಸುವುದೇನೆಂದರೆ, ಸುಮಲತ ಅಂಬರೀಶ್ ಮತ್ತು ರೈತ ಸಂಘದ ಮಧ್ಯೆ ಕಂದಕ ಸೃಷ್ಟಿಯಾಗಿದೆ ಎಂದು ಪ್ರಕಟಿಸುತ್ತಿರುವುದು ಸತ್ಯಕ್ಕೆ ದೂರವಾದ ಅಂಶವಾಗಿದೆ. ಸುಮಲತಾ ಅಂಬರೀಶ್‌ರವರು ರಾಜ್ಯ ರಾಜಕಾರಣಕ್ಕೆ ಬರುವುದಾದರೆ ಅದು ಅವರ ವೈಯಕ್ತಿಕ ನಿಲುವು, ಸುಮಲತಾ ಅಂಬರೀಶ್‌ರವರು ರೈತ ಸಂಘ ಕೈಗೊಂಡಿರುವ ಪ್ರತಿಯೊಂದು ಹೋರಾಟಗಳಿಗೂ ಬೆಂಬಲ ಸೂಚಿಸಿದ್ದಾರೆ ಮತ್ತು ಜೊತೆಗೆ ನಿಂತಿದ್ದಾರೆ.
ಅವರ ಕಾರ್ಯ ವ್ಯಾಪ್ತಿಯಲ್ಲಿ ಸರ್ಕಾರದ ಗಮನ ಸೆಳೆಯುವ ಕೆಲಸವನ್ನು ಸಹ ಮಾಡಿರುತ್ತಾರೆ, ರೈತ ಸಂಘ ಮತ್ತು ಸುಮಲತಾ ಅಂಬರೀಶ್‍ರವರ ಮಧ್ಯ ಯಾವುದೇ ರೀತಿಯ ಬಿರುಕು ಮೂಡಿಲ್ಲ.ಈಗಾಗಲೇ ಸುಮಲತಾ ಅಂಬರೀಶ್‍ರವರು ಮೇಲುಕೋಟೆ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ರೈತ ಸಂಘದ ಕಾರ್ಯಕರ್ತರ ಸಭೆಯಲ್ಲಿ ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ನಮಗೆ ಬೆಂಬಲ ಸೂಚಿಸುವುದಾಗಿ ಈಗಾಗಲೇ ಘೋಷಣೆ ಮಾಡಿರುತ್ತಾರೆ, ಆದ್ದರಿಂದ ಕಾರ್ಯಕರ್ತರಲ್ಲಿ ಯಾವುದೇ ಗೊಂದಲ ಬೇಡ
ರೈತ ಸಂಘ ಮತ್ತು ಸುಮಲತಾ ಅಂಬರೀಶ್‌ರವರ ಮಧ್ಯೆ ಯಾವುದೇ ಬಿರುಕು ಮೂಡಿಲ್ಲ ಎಂದು ಈ ಮೂಲಕ ತಮಗೆ ಸ್ಪಷ್ಟೀಕರಣ ಕೊಡಲು ಬಯಸುತ್ತೇನೆ. ದರ್ಶನ್ ಪುಟ್ಟಣ್ಣಯ್ಯ, ಕರ್ನಾಟಕ ರಾಜ್ಯ ರೈತ ಸಂಘ ಎಂದು ಫೇಸ್‌ಬುಕ್ ಪೋಸ್ಟ್ ಹಾಕಿದ್ದು, ಸುಮಲತಾ ಅವರ ಜೊತೆ ಇರುವ ಫೋಟೋವನ್ನು ದರ್ಶನ್ ಪುಟ್ಟಣ್ಣಯ್ಯ ಶೇರ್ ಮಾಡಿದ್ದಾರೆ.
ದರ್ಶನ್ ಪುಟ್ಟಣ್ಣಯ್ಯ ಅಭ್ಯರ್ಥಿ ದರ್ಶನ್ ಪುಟ್ಟಣ್ಣಯ್ಯ ರೈತಸಂಘದ ನಾಯಕರಾಗಿದ್ದ, ಶಾಸಕರಾಗಿದ್ದ ಕೆ. ಎಸ್. ಪುಟ್ಟಣ್ಣಯ್ಯ ಪುತ್ರ. ವಿದೇಶದಲ್ಲಿ ವ್ಯಾಸಂಗ ಮುಗಿಸಿರುವ ಅವರು ಮಂಡ್ಯ ಜಿಲ್ಲೆಯ ಮೇಲುಕೋಟೆಯ ರಾಜಕೀಯದಲ್ಲಿ ಸಕ್ರಿಯವಾಗಿದ್ದಾರೆ. ಸರ್ವೋದಯ ಕರ್ನಾಟಕ ಪಕ್ಷದಿಂದ ಅವರು 2018ರ ಚುನಾವಣಗೆ ಮೇಲುಕೋಟೆಯಲ್ಲಿ ಕಣಕ್ಕಿಳಿದಿದ್ದರು 73,779 ಮತಗಳನ್ನು ಪಡೆದು ಜೆಡಿಎಸ್‌ನ ಸಿ. ಎಸ್. ಪುಟ್ಟರಾಜು ವಿರುದ್ಧ ಸೋಲು ಕಂಡಿದ್ದರು.
ದೇವನೂರು ಮಹಾದೇವ ಮತ್ತು ದಿ. ಕೆ. ಎಸ್. ಪುಟ್ಟಣ್ಣಯ್ಯ ಒತ್ತಾಸೆಯಂತೆ 2005ರಲ್ಲಿ ಆರಂಭವಾದ ಸರ್ವೋದಯ ಕರ್ನಾಟಕ ಪಕ್ಷ ಬಳಿಕ ಸ್ವರಾಜ್ ಇಂಡಿಯಾ ಜೊತೆ ವಿಲೀನವಾಗಿತ್ತು. ಈಗ ಮತ್ತೆ ಪಕ್ಷಕ್ಕೆ ಮರು ಚಾಲನೆ ಮಾಡಲಾಗಿದೆ. ಈ ಬಾರಿಯ ವಿಧಾನಸಭೆ ಚುನಾವಣೆಗೆ 5 ಕ್ಷೇತ್ರಗಳಿಗೆ ಅಭ್ಯರ್ಥಿ ಘೋಷಣೆ ಮಾಡಲಾಗಿದೆ. ಮೇಲುಕೋಟೆ ಕ್ಷೇತ್ರಕ್ಕೆ ದರ್ಶನ್ ಪುಟ್ಟಣ್ಣಯ್ಯ ಅಭ್ಯರ್ಥಿ.
ರಾಜ್ಯ ರಾಜಕೀಯಕ್ಕೆ ಸುಮಲತಾ? 2019ರ ಲೋಕ ಸಭಾ ಚುನಾವಣೆಯಲ್ಲಿ ಗೆಲುವು ಪಡೆದು ಸಂಸದರಾದ ಬಳಿಕ ಕಾಂಗ್ರೆಸ್ ಮತ್ತು ಬಿಜೆಪಿಯೊಂದಿಗೆ ಅಂತರ ಕಾಪಾಡಿಕೊಂಡು ಬಂದಿರುವ ಸುಮಲತಾ ರಾಜ್ಯ ರಾಜಕೀಯಕ್ಕೆ ಬರುತ್ತಾರೆ. ಬಿಜೆಪಿ ಪಕ್ಷ ಸೇರುತ್ತಾರೆ ಎಂಬ ಸುದ್ದಿ ಕರ್ನಾಟಕ ವಿಧಾನಸಭೆ ಚುನಾವಣೆ ಸಂದರ್ಭದಲ್ಲಿ ಹಬ್ಬಿದೆ.
ಸುಮಲತಾ ರಾಜ್ಯ ರಾಜಕೀಯಕ್ಕೆ ಬಂದರೆ ಮಂಡ್ಯ, ಮೇಲುಕೋಟೆ ಕ್ಷೇತ್ರದಿಂದ ರಾಷ್ಟ್ರೀಯ ಪಕ್ಷ ಅಭ್ಯರ್ಥಿಯಾಗಿ ಕಣಕ್ಕಿಳಿಯಬಹುದು ಎಂಬುದು ಸಹ ಲೆಕ್ಕಾಚಾರವಾಗಿದೆ. ಮತ್ತೊಂದು ಕಡೆ ಸುಮಲತಾ ಬೆಂಬಲಿಗರು ಸಭೆ ನಡೆಸಿ ರಾಜ್ಯ ರಾಜಕೀಯಕ್ಕೆ ಬನ್ನಿ, ವಿಧಾನಸಭೆ ಚುನಾವಣೆಗೆ ಸ್ಪರ್ಧೆ ಮಾಡಿ ಎಂದು ಸಹ ಸಂಸದರಿಗೆ ಸಲಹೆ ನೀಡಿದ್ದಾರೆ. ಬಿಜೆಪಿ ನಾಯಕರು ಸುಮಲತಾ ಪಕ್ಷ ಸೇರುತ್ತಾರೆ ಎಂದು ಹಲವು ಬಾರಿ ಬಹಿರಂಗ ಹೇಳಿಕೆ ನೀಡಿದ್ದಾರೆ.