ಮಕ್ಕಳನ್ನು ಶಾಲೆಗೆ ಬಿಟ್ಟು ಬರುತ್ತೇನೆಂದು ಹೇಳಿ ಹೋದ ಪತ್ನಿ: ಪತಿಗೆ ಕಾದಿತ್ತು ಬಿಗ್ ಶಾಕ್!
ಅನಂತಪುರ: ಒಂದೇ ಕುಟುಂಬದ ನಾಲ್ವರು ದಿಢೀರ್ ನಾಪತ್ತೆಯಾಗಿರುವ ಘಟನೆ ಆಂಧ್ರ ಪ್ರದೇಶದ ಅನಂತಪುರದಲ್ಲಿ ನಡೆದಿದೆ.
ಸಂಗಮೇಶ್ ಮತ್ತು ಸೈಮೌನಿಕಾ ದಂಪತಿ ಅನಂತಪುರದ ಮಾರುತಿನಗರದ ನಿವಾಸಿಗಳು. ಇಬ್ಬರು 2011ರಲ್ಲಿ ಮದುವೆಯಾಗಿದ್ದಾರೆ.
ಸಂಗಮೇಶ್ ಅವರು ಕುಟುಂಬದ ನಿರ್ವಹಣೆಗಾಗಿ ಖಾಸಗಿ ಕಂಪನಿ ಒಂದರಲ್ಲಿ ಕೆಲಸ ಮಾಡುತ್ತಿದ್ದಾರೆ. ಇದೀಗ ಸಂಗಮೇಶ್ ಅವರಿಗೆ ಜೀವನದಲ್ಲಿ ಅತಿದೊಡ್ಡ ಆಘಾತವಾಗಿ ಪತ್ನಿ ಸೇರಿದಂತೆ ತನ್ನ ಮೂವರು ಮಕ್ಕಳು ಕೂಡ ಇದ್ದಕ್ಕಿದ್ದಂತೆ ನಾಪತ್ತೆಯಾಗಿದ್ದಾರೆ.
ಸಂಗಮೇಶ್ ಪತ್ನಿ ಮೌನಿಕಾ ಮಕ್ಕಳನ್ನು ಶಾಲೆಗೆ ಬಿಟ್ಟು ಬರುತ್ತೇನೆಂದು ಹೇಳಿ ಸೋಮವಾರ ಬೆಳಗ್ಗೆ ಮನೆ ಬಿಟ್ಟವರು ಮತ್ತೆ ಮನೆಗೆ ಮರಳಿ ಬಂದಿಲ್ಲ. ಮಕ್ಕಳು ಓದುವ ಶಾಲೆ ಮತ್ತು ಅಕ್ಕಪಕ್ಕದಲ್ಲಿ ವಿಚಾರಿಸಿದಾಗಲೂ ಯಾವುದೇ ಮಾಹಿತಿ ಸಿಗದೇ ಇದ್ದಾಗ ಕೊನೆಗೆ ಪೊಲೀಸ್ ಠಾಣೆಗೆ ಸಂಗಮೇಶ್ ದೂರು ನೀಡಿದ್ದಾರೆ.
ಸದ್ಯ ನಾಪತ್ತೆ ಪ್ರಕರಣ ದಾಖಲಾಗಿದ್ದು, ತನಿಖೆ ನಡೆಯುತ್ತಿರುವುದಾಗಿ ಅನಂತಪುರ ಪೊಲೀಸ್ ಠಾಣೆಯ ಸರ್ಕಲ್ ಇನ್ಸ್ಪೆಕ್ಟರ್ ಕತ್ತಿ ಶ್ರೀನಿವಾಸನ್ ಮಾಹಿತಿ ನೀಡಿದ್ದಾರೆ.