ಪ್ರಿಯಾಂಕಾ ಮಕ್ಕಳ ಇನ್‌ಸ್ಟಾಗ್ರಾಂ ಖಾತೆಗಳ ಹ್ಯಾಕ್: ತನಿಖೆಗೆ ಆದೇಶಿಸಿದ ಕೇಂದ್ರ

ಲಖನೌ: ಕಾಂಗ್ರೆಸ್ ನಾಯಕಿ ಪ್ರಿಯಾಂಕಾ ಗಾಂಧಿ ಅವರು ತಮ್ಮ ಮಕ್ಕಳ ಇನ್‌ಸ್ಟಾಗ್ರಾಂ ಖಾತೆಗಳು ಹ್ಯಾಕ್ ಆಗಿವೆ ಎಂದು ಆರೋಪಿಸಿದ ಬೆನ್ನಲ್ಲೇ ಕೇಂದ್ರ ಮಾಹಿತಿ ಮತ್ತು ತಂತ್ರಜ್ಞಾನ ಖಾತೆ ಸಚಿವಾಲಯ ತನಿಖೆಗೆ ಆದೇಶಿಸಿದೆ ಎಂದು ಮೂಲಗಳು ತಿಳಿಸಿವೆ.
ಪ್ರಯಾಗ್‌ರಾಜ್‌ನಲ್ಲಿ ಮಾಧ್ಯಮದ ಪ್ರಶ್ನೆಗಳಿಗೆ ಉತ್ತರಿಸುತ್ತಿದ್ದ ವೇಳೆ ಪ್ರಿಯಾಂಕಾ, ತಮ್ಮ ಮಕ್ಕಳ ಇನ್‌ಸ್ಟಾಗ್ರಾಂ ಖಾತೆಗಳನ್ನು ರಾಜ್ಯ ಸರ್ಕಾರ ಹ್ಯಾಕ್ ಮಾಡಿದೆ ಎಂದು ಆರೋಪಿಸಿದ್ದರು. ಆದರೆ ಈ ಬಗ್ಗೆ ಇದುವರೆಗೆ ಪ್ರಿಯಾಂಕಾ ಅವರು ಯಾವುದೇ ದೂರು ದಾಖಲಿಸಿಲ್ಲ.
ವಿರೋಧ ಪಕ್ಷಗಳ ನಾಯಕರ ಫೋನ್ ಕದ್ದಾಲಿಕೆ ಆರೋಪಗಳ ಬಗೆಗಿನ ಪ್ರಶ್ನೆಗೆ ಪ್ರತಿಕ್ರಿಯಿಸುವ ಸಂದರ್ಭ, 'ಫೋನ್ ಕದ್ದಾಲಿಕೆಯನ್ನು ಬಿಡಿ, ನನ್ನ ಮಕ್ಕಳ ಇನ್‌ಸ್ಟಾಗ್ರಾಂ ಖಾತೆಗಳನ್ನೂ ಹ್ಯಾಕ್ ಮಾಡಿದ್ದಾರೆ' ಎಂದು ಪ್ರಿಯಾಂಕಾ ಗಾಂಧಿ ಗಂಭೀರ ಆರೋಪ ಮಾಡಿದ್ದರು.
'ಸರ್ಕಾರಕ್ಕೆ ಬೇರೆ ಕೆಲಸ ಇಲ್ಲವೇ?' ಎಂದು ಪ್ರಶ್ನಿಸಿದ್ದ ಪ್ರಿಯಾಂಕಾ, 'ಲಡ್ಕಿ ಹೂಂ, ಲಡ್ ಸಕ್ತಿ ಹೂಂ' (ನಾನು ಹುಡುಗಿ ಮತ್ತು ಹೋರಾಡಬಲ್ಲೆ) ಎಂದು ಸವಾಲು ಹಾಕಿದ್ದರು.
'ತಮ್ಮ ಫೋನ್ ಅನ್ನು ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರು ಕದ್ದಾಲಿಕೆ ಮಾಡುತ್ತಿದ್ದಾರೆ, ರೆಕಾರ್ಡ್ ಮಾಡಿದ ದೂರವಾಣಿ ಮಾತುಕತೆಗಳನ್ನು ಪ್ರತಿದಿನ ಸಂಜೆ ಕೇಳುತ್ತಾರೆ' ಎಂದು ಸಮಾಜವಾದಿ ಪಕ್ಷದ ಅಧ್ಯಕ್ಷ ಅಖಿಲೇಶ್ ಯಾದವ್ ಕೆಲವು ದಿನಗಳ ಹಿಂದೆ ಆರೋಪಿಸಿದ್ದರು.