ಭಯೋತ್ಪಾದನಾ ಕೃತ್ಯ ಎಸಗಲು ಸಂಚು ರೂಪಿಸಿದ್ದ ಪ್ರಕರಣ: ಆರೋಪಿಗೆ ನಕಲಿ ಶ್ಯೂರಿಟಿ

ಭಯೋತ್ಪಾದನಾ ಕೃತ್ಯ ಎಸಗಲು ಸಂಚು ರೂಪಿಸಿದ್ದ ಪ್ರಕರಣ: ಆರೋಪಿಗೆ ನಕಲಿ ಶ್ಯೂರಿಟಿ

ಬೆಂಗಳೂರು: ಇಸ್ಲಾಮಿಕ್ ಸ್ಟೇಟ್ (ಐಎಸ್‌) ಉಗ್ರ ಸಂಘಟನೆ ಜತೆ ಸೇರಿ ಭಯೋತ್ಪಾದನಾ ಕೃತ್ಯ ಎಸಗಲು ಸಂಚು ರೂಪಿಸಿದ್ದ ಪ್ರಕರಣದಲ್ಲಿ ಬಂಧಿಸಲಾಗಿದ್ದ ಆರೋಪಿಗೆ ನಕಲಿ ಶ್ಯೂರಿಟಿ ನೀಡಿದ್ದ ಆರೋಪದಡಿ ಕೆ.ಜಿ. ನಾಗಭೂಷಣ್‌ ಎಂಬುವವರನ್ನು ಹಲಸೂರು ಗೇಟ್ ಠಾಣೆ ಪೊಲೀಸರು ವಶಕ್ಕೆ ಪಡೆದಿದ್ದಾರೆ.

'ಮುಳಬಾಗಿಲು ತಾಲ್ಲೂಕಿನ ಕೋಣನಕುಂಟೆ ನಿವಾಸಿ ನಾಗಭೂಷಣ್ ವಿರುದ್ಧ ಕಾನೂನು ಕ್ರಮ ಕೈಗೊಳ್ಳು ವಂತೆ ಕೋರ್ಟ್‌ ನಿರ್ದೇಶನ ನೀಡಿದೆ. ಅದರನ್ವಯ ಪ್ರಕರಣ ದಾಖಲಿಸಿಕೊಂಡು, ನಾಗಭೂಷಣ್‌ನನ್ನು ವಶಕ್ಕೆ ಪಡೆಯಲಾಗಿದೆ' ಎಂದು ಪೊಲೀಸ್ ಮೂಲಗಳು ಹೇಳಿವೆ.

'ಅಲ್‌ ಹಿಂದ್' ಹೆಸರಿನಲ್ಲಿ 'ಕುರಾನ್ ಸರ್ಕಲ್' ಗುಂಪು ಕಟ್ಟಿಕೊಂಡಿದ್ದ ಶಂಕಿತರು, ತಮಿಳುನಾಡು ಹಾಗೂ ಕರ್ನಾಟಕದಲ್ಲಿ ಭಯೋತ್ಪಾದನಾ ಕೃತ್ಯ ಎಸಗಲು ಸಂಚು ರೂಪಿಸಿದ್ದರು. ಹಿಂದೂ ಸಮುದಾಯದ ಮುಖಂಡರನ್ನು ಹತ್ಯೆ ಮಾಡಲು ಸಿದ್ಧತೆ ನಡೆಸುತ್ತಿದ್ದರು. ಈ ಬಗ್ಗೆ ಮಾಹಿತಿ ಕಲೆಹಾಕಿದ್ದ ಎನ್‌ಐಎ ಅಧಿಕಾರಿಗಳು, ಹಲವು ಶಂಕಿತರನ್ನು ಬಂಧಿಸಿದ್ದರು. ಈ ಸಂಬಂಧ ಸುದ್ದಗುಂಟೆ ಪಾಳ್ಯ ಠಾಣೆಯಲ್ಲಿ 2020ರಲ್ಲಿ ಪ್ರಕರಣ ದಾಖಲಾಗಿತ್ತು. ಆರೋಪಿಗಳ ವಿರುದ್ಧ ದೋಷಾರೋಪ ಪಟ್ಟಿ ಸಲ್ಲಿಸಿದ್ದು, ಕೋರ್ಟ್‌ನಲ್ಲಿ ವಿಚಾರಣೆ ನಡೆಯುತ್ತಿದೆ' ಎಂದು ಮೂಲಗಳು ತಿಳಿಸಿವೆ.

11ನೇ ಆರೋಪಿಗೆ ನಕಲಿ ಶ್ಯೂರಿಟಿ: 'ಪ್ರಕರಣದ 11ನೇ ಆರೋಪಿಯಾಗಿ ಸಲೀಂ ಖಾನ್ ಅಲಿಯಾಸ್ ಕೋಲಾರ ಸಲೀಂನನ್ನು ಬಂಧಿಸಲಾಗಿತ್ತು. ಈತನಿಗೆ ಇತ್ತೀಚೆಗಷ್ಟೇ ಷರತ್ತುಬದ್ಧ ಜಾಮೀನು ಮಂಜೂರಾಗಿತ್ತು. ಬಿಡುಗಡೆಗೆ ಅಗತ್ಯವಿದ್ದ ಶ್ಯೂರಿಟಿ ನೀಡಲು ಮುಂದಾಗಿದ್ದ ನಾಗಭೂಷಣ್, ಕೋರ್ಟ್‌ಗೆ ದಾಖಲೆಗಳನ್ನು ಹಾಜರು ಪಡಿಸಿದ್ದರು' ಎಂದು ಪೊಲೀಸ್ ಮೂಲಗಳು ಹೇಳಿವೆ.

'ನಾಗಭೂಷಣ್ ಹಾಜರುಪಡಿಸಿದ್ದ ಪ್ರಮಾಣಪತ್ರ ಹಾಗೂ ಇತರೆ ದಾಖಲೆಗಳ ಪರಿಶೀಲನೆ ನಡೆಸಿದಾಗ, ನಕಲಿ ಶ್ಯೂರಿಟಿ ಎಂಬುದು ಗಮನಕ್ಕೆ ಬಂದಿತ್ತು. ಹೆಚ್ಚಿನ ವಿಚಾರಣೆ ನಡೆಸಿದಾಗ, ಆರೋಪಿ ನಾಗಭೂಷಣ್ ನ್ಯಾಯಾಲಯವನ್ನು ವಂಚಿಸಲು ಯತ್ನಿಸಿರುವುದು ಗೊತ್ತಾಗಿದೆ' ಎಂದು ತಿಳಿಸಿವೆ.