ಅತ್ಯಾಚಾರ ತಪ್ಪಿತಸ್ಥ ರಾಮ್‌ ರಹೀಮ್‌ ಬಿಡುಗಡೆ: ನನ್ನ ಪಾತ್ರವಿಲ್ಲವೆಂದ ಖಟ್ಟರ್‌

ಅತ್ಯಾಚಾರ ತಪ್ಪಿತಸ್ಥ ರಾಮ್‌ ರಹೀಮ್‌ ಬಿಡುಗಡೆ: ನನ್ನ ಪಾತ್ರವಿಲ್ಲವೆಂದ ಖಟ್ಟರ್‌

ವದೆಹಲಿ: ಇಬ್ಬರು ಮಹಿಳೆಯರ ಮೇಲೆ ಅತ್ಯಾಚಾರ ಎಸಗಿದ ಪ್ರಕರಣದಲ್ಲಿ ಜೈಲು ಶಿಕ್ಷೆ ಅನುಭವಿಸುತ್ತಿರುವ ಡೇರಾ ಸಚ್ಚಾ ಸೌಧಾ ಮುಖ್ಯಸ್ಥ ಗುರ್ಮಿತ್ ರಾಮ್‌ ರಹೀಮ್‌ ಸಿಂಗ್‌ ಬಿಡುಗಡೆಯಲ್ಲಿ ತಮ್ಮ ಪಾತ್ರವಿಲ್ಲ ಎಂದು ಹರಿಯಾಣ ಮುಖ್ಯಮಂತ್ರಿ ಮನೋಹರ್‌ ಲಾಲ್‌ ಖಟ್ಟರ್‌ ಹೇಳಿದ್ದಾರೆ.

2017ರಲ್ಲಿ ಸಿರ್ಸಾದ ತಮ್ಮ ಆಶ್ರಮದಲ್ಲಿನ ಇಬ್ಬರು ಭಕ್ತೆಯರ ಮೇಲೆ ಅತ್ಯಾಚಾರ ಎಸಗಿದ ಪ್ರಕರಣಕ್ಕೆ ಸಂಬಂಧಿಸಿ 20 ವರ್ಷಗಳ ಜೈಲು ಶಿಕ್ಷೆ ಅನುಭವಿಸುತ್ತಿದ್ದಾರೆ. ಕಳೆದ ವಾರ 40 ದಿನಗಳ ಪೆರೋಲ್‌ ಮಂಜೂರಾಗಿದ್ದು, ಹರಿಯಾಣದ ರೋಹ್ಟಕ್ ಜೈಲಿನಿಂದ ಬಿಡುಗಡೆಯಾಗಿದ್ದಾರೆ.

ನವೆಂಬರ್‌ 3ರಂದು ಅದಮ್‌ಪುರ್‌ ಉಪಚುನಾವಣೆ ಇದೆ. ಹತ್ತಿರದಲ್ಲೇ ಪಂಚಾಯಿತಿ ಚುನಾವಣೆಗಳು ನಡೆಯಲಿವೆ. ಇದೇ ವೇಳೆ ರಹೀಮ್‌ ಅವರನ್ನು ಜೈಲಿನಿಂದ ಬಿಡುಗಡೆ ಮಾಡಿರುವ ಬಗ್ಗೆ ಹಲವು ಅನುಮಾನಗಳು ಸೃಷ್ಟಿಯಾಗಿವೆ.

ಕಳೆದ ಕೆಲವು ದಿನಗಳಿಂದ ರಾಮ್‌ ರಹೀಮ್‌ ಆನ್‌ಲೈನ್‌ ಮೂಲಕ ಪ್ರವಚನಗಳನ್ನು ಆರಂಭಿಸಿದ್ದಾರೆ. ಇದರಲ್ಲಿ ರಹೀಮ್‌ ಅವರ ಬೆಂಬಲಿಗರು ಸೇರಿದಂತೆ ಹರಿಯಾಣದ ಬಿಜೆಪಿಯ ಹಲವು ಮುಖಂಡರು ಪಾಲ್ಗೊಂಡಿದ್ದಾರೆ.

ರಾಮ್‌ ರಹೀಮ್‌ ಅವರನ್ನು ಜೈಲಿನಿಂದ ಬಿಡುಗಡೆ ಮಾಡಿರುವ ವಿಚಾರಕ್ಕೆ ಸಂಬಂಧಿಸಿ ಸಿಎಂ ಖಟ್ಟರ್‌ ಅವರನ್ನು ಸುದ್ದಿಗಾರರು ಪ್ರಶ್ನಿಸಿದಾಗ, ಇದರಲ್ಲಿ ನನ್ನ ಪಾತ್ರವಿಲ್ಲ ಎಂದಿದ್ದಾರೆ.

ಕೋರ್ಟ್‌ ಜೈಲು ಶಿಕ್ಷೆಯನ್ನು ನೀಡಿದೆ. ತಪ್ಪಿತಸ್ಥ ಜೈಲಿಗೆ ಹೋಗಬೇಕು. ಆದಾದ ಬಳಿಕ ಜೈಲಿನಲ್ಲಿ ಕೆಲವು ಕಾನಾನೂಗಳು ಇರುತ್ತವೆ. ಅವುಗಳು ಎಲ್ಲ ಕೈದಿಗಳಿಗೂ ಅನ್ವಯಿಸುತ್ತವೆ ಎಂದು ಖಟ್ಟರ್‌ ಪ್ರತಿಕ್ರಿಯಿಸಿದ್ದಾರೆ.

ರಾಮ್‌ ರಹೀಮ್‌ ಅವರಿಗೆ ಪೆರೋಲ್‌ ನೀಡಿರುವ ಸಂದರ್ಭದ ಕುರಿತಾದ ಪ್ರಶ್ನೆಗಳಿಗೆ ಪ್ರತಿಕ್ರಿಯಿಸಲು ಖಟ್ಟರ್‌ ನಿರಾಕರಿಸಿದ್ದಾರೆ. ಈ ವಿಚಾರವಾಗಿ ಹೇಳಲು ಬೇರೆ ಏನೂ ಇಲ್ಲ ಎಂದಿದ್ದಾರೆ.

ಫೆಬ್ರುವರಿ ತಿಂಗಳಲ್ಲಿ, ಪಂಜಾಬ್‌ ವಿಧಾನಸಭೆ ಚುನಾವಣೆಗೂ ಮುನ್ನ ರಾಮ್‌ ರಹೀಮ್‌ಗೆ ಮೂರು ವಾರಗಳ ಪೆರೋಲ್ ನೀಡಲಾಗಿತ್ತು.