ವಿವಾಹೇತರ ಸಂಬಂಧಕ್ಕೆ ಅಡ್ಡಿ: ಪ್ರಿಯಕರನ ಜತೆಗೂಡಿ ಪತಿಯನ್ನೇ ಕೊಂದು ನಾಟಕವಾಡಿದ ಪತ್ನಿ ಅರೆಸ್ಟ್​

ವಿವಾಹೇತರ ಸಂಬಂಧಕ್ಕೆ ಅಡ್ಡಿ: ಪ್ರಿಯಕರನ ಜತೆಗೂಡಿ ಪತಿಯನ್ನೇ ಕೊಂದು ನಾಟಕವಾಡಿದ ಪತ್ನಿ ಅರೆಸ್ಟ್​

ಬೆಂಗಳೂರು: ತಾಳಿ ಕಟ್ಟಿದ ಪತಿಯನ್ನೇ ಕೊಲೆ ಮಾಡಿದ ಪತ್ನಿ ಮತ್ತು ಆಕೆಯ ಪ್ರಿಯಕರನನ್ನು ಯಲಹಂಕ ಠಾಣಾ ಪೊಲೀಸರು ಬಂಧಿಸಿದ್ದಾರೆ.

ಚಂದ್ರಶೇಖರ ಕೊಲೆಯಾದ ದುರ್ದೈವಿ. ಆರೋಪಿಗಳಾದ ಪತ್ನಿ ಶ್ವೇತಾ ಮತ್ತು ಪ್ರಿಯಕರ ಸುರೇಶ್​ ಅಲಿಯಾಸ್​ ಮೂಲಿಸೂರಿ ಎಂಬಾತನನ್ನು ಬಂಧಿಸಲಾಗಿದೆ.

ತಾನು ವಾಸಿಸುತ್ತಿದ್ದ ಮೂರನೇ ಮಹಡಿಯ ಮನೆಯ ಟೆರೆಸ್​ ಮೇಲೆ ತನ್ನ ಅಳಿಯ ಚಂದ್ರಶೇಖರ್​ನನ್ನು ಯಾರೋ ದುಷ್ಕರ್ಮಿಗಳು ಕೊಲೆ ಮಾಡಿದ್ದಾರೆಂದು ಯಲಹಂಕದ ಕೊಂಡಪ್ಪಲೇಔಟ್​ ನಿವಾಸಿ ಶಿವಪ್ಪ ಎಂಬುವರು ಯಲಹಂಕ ಪೊಲೀಸ್ ಠಾಣೆಯಲ್ಲಿ ಅ.21ರಂದು ದೂರು ದಾಖಲಿಸಿದ್ದರು.

ಈ ಪ್ರಕರಣದ ತನಿಖೆ ಆರಂಭಿಸಿದ ಪೊಲೀಸರಿಗೆ ಈ ಕೃತ್ಯ ಕೊಲೆಯಾದ ಚಂದ್ರಶೇಖರ್​​ ಪತ್ನಿ ಶ್ವೇತಾಳಿಂದಲೇ ನಡೆದಿದೆ ಎಂಬುದು ಖಚಿತವಾಗಿದೆ. ಶ್ವೇತಾ (21) ಮತ್ತು ಮತ್ತೊಬ್ಬ ಆರೋಪಿ ಸುರೇಶ್​ (25) ಇಬ್ಬರು ಪರಸ್ಪರ ಪ್ರೀತಿಸುತ್ತಿದ್ದರು. ಚಂದ್ರಶೇಖರ್​ ಜೊತೆ ಶ್ವೇತಾಳ ಮದುವೆ ನಡೆಯುವುದಕ್ಕೂ ಮುಂಚಿನಿಂದಲೂ ಇಬ್ಬರ ನಡುವೆ ಪ್ರೀತಿಯಿತ್ತು. ಇಷ್ಟವಿಲ್ಲದಿದ್ದರೂ ತಾಯಿಯ ತಮ್ಮನ ಜೊತೆ ಶ್ವೇತಾ ಬಲವಂತವಾಗಿ ಮದುವೆ ಆಗಿದ್ದಳು. ಮದುವೆ ನಂತರವೂ ಶ್ವೇತಾ ಮತ್ತು ಸುರೇಶ್​ ನಡುವೆ ಪ್ರೀತಿ ಮುಂದುವರಿದು, ವಿವಾಹೇತರ ಸಂಬಂಧವನ್ನು ಹೊಂದಿದ್ದರು.

ಇಬ್ಬರ ಸಂಬಂಧಕ್ಕೆ ಗಂಡ ಅಡ್ಡಿಯಾಗಿದ್ದರಿಂದ ಆತನನ್ನು ಸಾಯಿಸಲು ಪ್ರಿಯಕರನ ಜೊತೆ ಸೇರಿ, ಶ್ವೇತಾ ಸಂಚು ರೂಪಿಸಿದ್ದಳು. ಬಳಿಕ ತಮ್ಮ ಪ್ಲಾನ್​ನಂತೆ ಕೊಲೆ ಮಾಡಿ, ಯಾರಿಗೂ ಗೊತ್ತಿಲ್ಲದಂತೆ ಶ್ವೇತಾ ಮತ್ತು ಸುರೇಶ್​ ನಾಟಕವಾಡಿದ್ದರು. ಇದೀಗ ಇಬ್ಬರ ಮುಖವಾಡ ಕಳಚಿಬಿದ್ದಿದ್ದು, ಇಬ್ಬರನ್ನು ಪೊಲೀಸರು ಬಂಧಿಸಿದ್ದಾರೆ.

ಈ ಸಂಬಂಧ ಯಲಹಂಕ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ವಿಚಾರಣೆ ಮುಂದುವರಿದಿದೆ.