ಟ್ರಕ್‌ ಟರ್ಮಿನಲ್‌ ಕಾಮಗಾರಿ ವಿರೋಧ: ಅಧಿಕಾರಿಗಳು, ಗ್ರಾಮಸ್ಥರ ನಡುವೆ ವಾಗ್ವಾದ

ಟ್ರಕ್‌ ಟರ್ಮಿನಲ್‌ ಕಾಮಗಾರಿ ವಿರೋಧ: ಅಧಿಕಾರಿಗಳು, ಗ್ರಾಮಸ್ಥರ ನಡುವೆ ವಾಗ್ವಾದ

ಹುಬ್ಬಳ್ಳಿ: ತಾಲ್ಲೂಕಿನ ಅಂಚಟಗೇರಿ ಬಳಿ ನಿರ್ಮಿಸಲು ಉದ್ದೇಶಿಸಿರುವ ಟ್ರಕ್‌ ಟರ್ನಿನಲ್‌ ಕಾಮಗಾರಿಗೆ ಗ್ರಾಮಸ್ಥರು ತೀವ್ರ ವಿರೋಧ ವ್ಯಕ್ತಪಡಿಸಿದ್ದರಿಂದ ಅಧಿಕಾರಿಗಳು ಕೆಲಸ ಸ್ಥಗಿತಗೊಳಿಸಿ ಮರಳಿದರು.

ಡಿ. ದೇವರಾಜ ಅರಸು ಟ್ರಕ್‌ ಟರ್ಮಿನಲ್‌ ಅಧ್ಯಕ್ಷ ಡಿ.ಎಸ್‌.ವೀರಯ್ಯ, ವ್ಯವಸ್ಥಾಪಕ ನಿರ್ದೇಶಕ ಶಂಕರಪ್ಪ ಅವರು ಟರ್ಮಿನಲ್‌ ಜಾಗಕ್ಕೆ ಭೇಟಿ ನೀಡಿ ಪರಿಶೀಲಿಸಿದ ನಂತರ ಜೆಸಿಬಿಯಿಂದ ಕಾಮಗಾರಿ ಆರಂಭಿಸಿದರು. ಆಗ ಸ್ಥಳಕ್ಕೆ ಆಗಮಿಸಿದ ಗ್ರಾಮಸ್ಥರು ವಿರೋಧ ವ್ಯಕ್ತಪಡಿಸಿದರು.

ಟ್ರಕ್‌ ಟರ್ಮಿನಲ್‌ ನಿರ್ಮಿಸುತ್ತಿರುವ ಜಾಗದಲ್ಲಿ ಈಗಾಗಲೇ ಹಲವಾರು ಜನರು ಮನೆಗಳನ್ನು ನಿರ್ಮಿಸಿಕೊಂಡಿದ್ದಾರೆ. ಜತೆಗೆ ಗ್ರಾಮದ ದನಗಳಿಗೆ ಮೇಯಲು ಜಾಗವಿಲ್ಲ. ಆದ್ದರಿಂದ ಇಲ್ಲಿ ಟ್ರಕ್‌ ಟರ್ಮಿನಲ್‌ ನಿರ್ಮಾಣ ಮಾಡಬಾರದು ಎಂದು ಆಗ್ರಹಿಸಿದರು. ಜೆಸಿಬಿ ಕಾಮಗಾರಿಗೂ ತಡೆಯೊಡ್ಡಿದರು.

ಗ್ರಾಮ ಪಂಚಾಯ್ತಿಯವರಿಗೆ ಮಾಹಿತಿ ನೀಡದೆ ಇಲ್ಲಿಗೇಕೆ ಬಂದಿದ್ದೀರಿ. ಗ್ರಾಮಸ್ಥರ ಸಭೆ ಕರೆಯಿರಿ. ಅಲ್ಲಿ ಚರ್ಚಿಸಿ, ಅಂತಿಮ ತೀರ್ಮಾನ ಕೈಗೊಂಡ ಮೇಲೆಯೇ ಮುಂದಿನ ಕೆಲಸ ಎಂದು ಗ್ರಾಮ ಪಂಚಾಯಿತಿ ಸದಸ್ಯ ಮಂಜುನಾಥ ಗಾಣಿಗೇರ ಆಗ್ರಹಿಸಿದರು.

30 ವರ್ಷಗಳ ಹಿಂದೆಯೇ ಪಟ್ಟಾ ನೀಡಲಾಗಿದೆ. ಈಗ ಬಂದು ಕಾಮಗಾರಿ ಮಾಡುತ್ತೇನೆ ಎಂದರೆ ಹೇಗೆ ಎಂದು ಭೀಮಣ್ಣ ವಾಲ್ಮೀಕಿ ಪ್ರಶ್ನಿಸಿದರು. ಆಗ ಅಧಿಕಾರಿಗಳು ಹಾಗೂ ಗ್ರಾಮಸ್ಥರ ನಡುವೆ ಮಾತಿನ ಚಕಮಕಿ ನಡೆಯಿತು.