ಮಸೀದಿ ಒಡೆಯುವುದು ನಮ್ಮ ಉದ್ದೇಶ ಅಲ್ಲ: ಹಿಂದೂ ಜಾಗರಣ ವೇದಿಕೆ ಸ್ಪಷ್ಟನೆ
ಮೈಸೂರು: 'ಶ್ರೀರಂಗಪಟ್ಟಣದಲ್ಲಿ ಶಾಂತಿಯುತವಾಗಿ ಹನುಮಮಾಲೆ ಆಚರಿಸುವುದು ನಮ್ಮ ಉದ್ದೇಶವೇ ಹೊರತು, ಜಾಮಿಯಾ ಮಸೀದಿಯನ್ನು ಒಡೆಯುವುದು ನಮ್ಮ ಉದ್ದೇಶ ಅಲ್ಲ' ಎಂದು ಹಿಂದೂ ಜಾಗರಣ ವೇದಿಕೆ ಸ್ಪಷ್ಟಪಡಿಸಿದೆ.
'ಡಿ.16ರಂದು ನಡೆಯಲಿರುವ ಹನುಮಮಾಲೆ ಸಂದರ್ಭದಲ್ಲಿ ಮಸೀದಿಯನ್ನು ಒಡೆಯಲಾಗುತ್ತದೆ ಎಂಬ ವಾಟ್ಸ್‌ಆಯಪ್ ಸಂದೇಶಗಳು, ಬ್ಯಾನರ್‌ಗಳಲ್ಲಿ ವೇದಿಕೆ ಸದಸ್ಯರ ಭಾವಚಿತ್ರವನ್ನು ಬಳಸಲಾಗಿದೆ. ಆ ಬ್ಯಾನರ್ ಮತ್ತು ಸಂದೇಶಗಳು ನಮ್ಮದಲ್ಲ. ಕೆಲವು ಕಿಡಿಗೇಡಿಗಳು ನಮ್ಮನ್ನು ಪ್ರಚೋದಿಸಲು ಈ ರೀತಿ ಮಾಡುತ್ತಿದ್ದಾರೆ' ಎಂದು ವೇದಿಕೆಯ ಮಂಡ್ಯ ಜಿಲ್ಲಾ ಘಟಕದ ಪ್ರಧಾನ ಕಾರ್ಯದರ್ಶಿ ಮಾರ್ಕಂಡೇಯ ಇಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
'ಶ್ರೀರಂಗಪಟ್ಟಣದ ಕ್ಷಣಾಂಬಿಕೆ ಹಾಗೂ ಜ್ಯೋತಿರ್ಭಿಮೇಶ್ವರ ದೇಗುಲದ ಬಳಿ ಹನುಮ ವಿಗ್ರಹ ಇದೆ. ಆ ವಿಗ್ರಹ ಮೂಲಸ್ಥಾನವಾದ ಜಾಮೀಯ ಮಸೀದಿಗೆ ಹೋಗಬೇಕು ಎಂಬುದು ನಮ್ಮ ಉದ್ದೇಶ. ಹಾಗೆಂದು, ಇದಕ್ಕೆ ಮಸೀದಿ ಒಡೆಯುವುದೊಂದೇ ದಾರಿ ಅಲ್ಲ. ಅಯೋಧ್ಯಾ ವಿವಾದವನ್ನು ಕಾನೂನು ಹೋರಾಟದ ಮೂಲಕ ಬಗೆಹರಿಸಲಾಗಿದೆ ಎಂಬುದನ್ನು ಮರೆಯಬಾರದು. ಕಾನೂನು ಹೋರಾಟ ಸೇರಿದಂತೆ ಮುಂದಿನ ಹಂತವನ್ನು ವೇದಿಕೆಯಲ್ಲಿ ತೀರ್ಮಾನಿಸಲಾಗುತ್ತದೆ' ಎಂದು ಪ್ರಶ್ನೆಯೊಂದಕ್ಕೆ ಪ್ರತಿಕ್ರಿಯಿಸಿದರು.
ವೇದಿಕೆಯ ಮೈಸೂರು ವಿಭಾಗದ ಅಧ್ಯಕ್ಷ ಲೋಹಿತ್ ಅರಸ್ ಮಾತನಾಡಿ, 'ಕಳೆದ 7 ವರ್ಷಗಳಿಂದ ನಡೆಯುತ್ತಿರುವ ಹನುಮ ಮಾಲೆಯು ಕೇವಲ ಮಂಡ್ಯ ಜಿಲ್ಲೆಗೆ ಮಾತ್ರ ಸೀಮಿತವಾಗಿತ್ತು. ಆದರೆ, ಈಗ ಇದು ಮೈಸೂರು ವಿಭಾಗಕ್ಕೆ ವಿಸ್ತಾರವಾಗಿದೆ. ಮೈಸೂರು, ಹಾಸನ, ಮಂಡ್ಯ ಹಾಗೂ ಚಾಮರಾಜನಗರ ಜಿಲ್ಲೆಗಳಿಂದಲೂ ಈ ಬಾರಿ ಕಾರ್ಯಕರ್ತರು ಭಾಗವಹಿಸಲಿದ್ದಾರೆ' ಎಂದರು.
'ಕೋಮುಗಲಭೆ ಸೃಷ್ಟಿಸುವುದು ನಮ್ಮ ಉದ್ದೇಶ ಅಲ್ಲ. ಶಾಂತಿಯುತವಾಗಿ ಗಾಂಜಾಂನ ನಿಮಿಷಾಂಭ ದೇವಸ್ಥಾನದಿಂದ ಶೋಭಾಯಾತ್ರೆ ಹೊರಡಲಿದೆ. ಹಿಂಸೆ ನಮ್ಮ ಉದ್ದೇಶ ಅಲ್ಲ' ಎಂದು ತಿಳಿಸಿದರು.
ವೇದಿಕೆಯ ಸುಜನ್, ಲಕ್ಷ್ಮೀನಾರಾಯಣ, ರಾಜಣ್ಣ, ಮನೋಹರ ಇದ್ದರು.