ಗಂಡು-ಹೆಣ್ಣಿಗೆ ಏಕರೂಪದ ವಿವಾಹ ವಯಸ್ಸನ್ನು ಕೋರಿ ಸಲ್ಲಿಸಿದ್ದ ಅರ್ಜಿ ವಜಾ

ನವದೆಹಲಿ: ಪುರುಷ ಮತ್ತು ಮಹಿಳೆ ಇಬ್ಬರಿಗೂ ಮದುವೆಗೆ ಏಕರೂಪದ ಕನಿಷ್ಠ 21 ವರ್ಷ ವಯೋಮಿತಿಯನ್ನು ನಿಗದಿಪಡಿಸುವಂತೆ ಕೋರಿ ಸಲ್ಲಿಸಲಾಗಿದ್ದ ಮನವಿಯನ್ನು ಸುಪ್ರೀಂ ಕೋರ್ಟ್ ಸೋಮವಾರ ತಿರಸ್ಕರಿಸಿದೆ. ಇದರೊಂದಿಗೆ ವಯೋಮಿತಿ ನಿಗದಿಗೆ ಕಾನೂನು ರೂಪಿಸುವಂತೆ ಸಂಸತ್ತಿಗೆ ನಿರ್ದೇಶನ ನೀಡಿದಂತಾಗುತ್ತದೆ ಎಂದು ಸುಪ್ರೀಂ ಹೇಳಿದೆ.
ಮುಖ್ಯ ನ್ಯಾಯಮೂರ್ತಿ ಡಿ ವೈ ಚಂದ್ರಚೂಡ್ ಮತ್ತು ನ್ಯಾಯಮೂರ್ತಿಗಳಾದ ಪಿ ಎಸ್ ನರಸಿಂಹ ಮತ್ತು ಜೆ ಬಿ ಪರ್ದಿವಾಲಾ ಅವರನ್ನೊಳಗೊಂಡ ಪೀಠವು ಈ ವಿಷಯವು ಶಾಸಕಾಂಗದ ವ್ಯಾಪ್ತಿಗೆ ಒಳಪಡುತ್ತದೆ ಮತ್ತು ಅದು ಸಮಸ್ಯೆಯನ್ನು ನಿಭಾಯಿಸುವುದಿಲ್ಲ ಎಂದು ಹೇಳಿದೆ.
ಪುರುಷ ಮತ್ತು ಮಹಿಳೆಯ ವಿವಾಹದ ಕಾನೂನುಬದ್ಧ ವಯಸ್ಸಿನ ಸಮಾನತೆಯನ್ನು ಕೋರಿ ವಕೀಲ ಅಶ್ವಿನಿ ಉಪಾಧ್ಯಾಯ ಅವರು ಸಲ್ಲಿಸಿದ್ದ ಮತ್ತೊಂದು ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ವಜಾಗೊಳಿಸಿದ ಸುಪ್ರೀಂ ಕೋರ್ಟ್ ಫೆಬ್ರವರಿ 20 ರ ಆದೇಶವನ್ನು ಉಲ್ಲೇಖಿಸಿದೆ.
ಫೆಬ್ರವರಿ 20, 2023 ರಂದು ಅಶ್ವಿನಿ ಉಪಾಧ್ಯಾಯ ವರ್ಸಸ್ ಯೂನಿಯನ್ ಆಫ್ ಇಂಡಿಯಾದ ಇದೇ ರೀತಿಯ ಪ್ರಕರಣವನ್ನು ನಾವು ನಿರ್ಧರಿಸಿದ್ದೇವೆ… ನೀಡಿದ ಆದೇಶದ ದೃಷ್ಟಿಯಿಂದ, ಅರ್ಜಿಯನ್ನು ವಜಾಗೊಳಿಸಲಾಗಿದೆ. ಶಾಹಿದಾ ಖುರೇಷಿ ಎಂಬುವರು ಸಲ್ಲಿಸಿರುವ ಅರ್ಜಿಯಲ್ಲಿ ಪುರುಷರಿಗೆ ಸರಿಸಮಾನವಾಗಿ ಮಹಿಳೆಯರ ವಿವಾಹದ ವಯಸ್ಸನ್ನು 21 ವರ್ಷಕ್ಕೆ ಹೆಚ್ಚಿಸಬೇಕು ಎಂಬ ಬೇಡಿಕೆ ಇತ್ತು.