ಪೋಕ್ಸೊ ಪ್ರಕರಣದ ಆರೋಪಿ ಮುರುಘಾ ಶರಣರಿಗೆ ಜೈಲಿನಲ್ಲಿ ವಿಶೇಷ ಆತಿಥ್ಯ: ಕ್ರಮಕ್ಕೆ ಮನವಿ ಸಲ್ಲಿಕೆ
ಬೆಂಗಳೂರು: ಮಠದಲ್ಲಿ ವ್ಯಾಸಂಗ ಮಾಡುತ್ತಿದ್ದ ವಿದ್ಯಾರ್ಥಿನಿಯರ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಆರೋಪದಲ್ಲಿ ಪೋಕ್ಸೊ ಪ್ರಕರಣದಲ್ಲಿ ಬಂಧಿತರಾಗಿ ಚಿತ್ರದುರ್ಗದ ಜೈಲಿನಲ್ಲಿರುವ ಪ್ರಕರಣದ ಮೊದಲ ಆರೋಪಿ ಶಿವಮೂರ್ತಿ ಮುರುಘಾ ಶರಣರಿಗೆ ಚಿತ್ರದುರ್ಗದ ಜೈಲಿನಲ್ಲಿ ನಿಯಮಗಳಿಗೆ ವಿರುದ್ಧವಾಗಿ ವಿಶೇಷ ಆತಿಥ್ಯ ಕಲ್ಪಿಸಲಾಗುತ್ತಿದೆ.
ಮಾಹಿತಿ ಹಕ್ಕು ಕಾಯಿದೆ ಅಡಿ ಚಿತ್ರದುರ್ಗ ಜೈಲಿನ ಮೇಲ್ವಿಚಾರಕರು ಜೈಲು ಕೈಪಿಡಿ ಉಲ್ಲಂಘಿಸಿರುವ ಬಗ್ಗೆ ಸಂಗ್ರಹಿಸಿರುವ ಅಧಿಕೃತ ದಾಖಲೆಯನ್ನು ಮನವಿಯೊಂದಿಗೆ ಸಾಮಾಜಿಕ ಕಾರ್ಯಕರ್ತ ನರಸಿಂಹ ಮೂರ್ತಿ ಅವರು ಸಲ್ಲಿಸಿದ್ದಾರೆ. 2022ರ ಸೆಪ್ಟೆಂಬರ್ 7 ರಿಂದ ಸೆಪ್ಟೆಂಬರ್ 29ರ ಮಧ್ಯದ 23 ದಿನಗಳ ಅವಧಿಯಲ್ಲಿ ಮುರುಘಾ ಮಠದ ಹಂಗಾಮಿ ಆಡಳಿತಾಧಿಕಾರಿ ಎಸ್ ಬಿ ವಸ್ತ್ರದಮಠ, ಇಮ್ಮಡಿ ಸಿದ್ದರಾಮೇಶ್ವರ ಸ್ವಾಮಿ, ಬಸವ ಮಾಚಿದೇವ ಸ್ವಾಮಿ, ಬಸವ ಶಾಂತಲಿಂಗ ಸ್ವಾಮಿ ಸೇರಿದಂತೆ ಒಟ್ಟು 20 ಮಂದಿ ಮುರುಘಾ ಶರಣರನ್ನು ಭೇಟಿ ಮಾಡಿದ್ದಾರೆ ಎಂದು ವಿವರಿಸಿದ್ದಾರೆ.
"ಭಾರತದಲ್ಲಿನ ಜೈಲುಗಳ ನಿರ್ವಹಣೆಗಾಗಿ ಮೇಲ್ವಿಚಾರಕರಿಗೆ 2003ರಲ್ಲಿ ರೂಪಿಸಲಾಗಿರುವ ಮಾದರಿ ಜೈಲು ಕೈಪಿಡಿ ಅನುಸಾರ ಕೈದಿಗಳ ಕುಟುಂಬದ ಸದಸ್ಯರು, ಬಂಧುಗಳು, ಸ್ನೇಹಿತರು ಮತ್ತು ಕಾನೂನು ಸಲಹೆಗಾರರು ಹದಿನೈದು ದಿನಗಳಲ್ಲಿ ಒಮ್ಮೆ ಮಾತ್ರವೇ ಜೈಲಿನಲ್ಲಿ ಸಂದರ್ಶಿಸಲು ಅವಕಾಶವಿದೆ. ಆದರೆ, ಈ ಪ್ರಕರಣದಲ್ಲಿ ಆರೋಪಿ ಸ್ವಾಮೀಜಿ ಅವರನ್ನು ಭೇಟಿ ಮಾಡಲು ಯಾವಾಗ ಬೇಕೆಂದಾಗ ಅವಕಾಶ ಕಲ್ಪಿಸಲಾಗುತ್ತಿದೆ. ಇದು ಜೈಲಿನಲ್ಲಿ ಆರೋಪಿಗೆ ವಿಶೇಷ ಆತಿಥ್ಯ ನೀಡುತ್ತಿರುವುದಕ್ಕೆ ಸಾಕ್ಷಿಯಾಗಿದೆ" ಎಂದು ಕೋರಿಕೆಯಲ್ಲಿ ಆಕ್ಷೇಪಿಸಲಾಗಿದೆ.
ಗೃಹ ಮಂತ್ರಿ ಮತ್ತು ಕಾರಾಗೃಹದ ಹೆಚ್ಚುವರಿ ಪೊಲೀಸ್ ಮಹಾನಿರ್ದೇಶಕರಿಗೂ ಮನವಿಯ ಕಳುಹಿಸಿ ಕೊಡಲಾಗಿದೆ.