ಖರ್ಗೆ ಆಯ್ಕೆ ಪರಿಣಾಮಕಾರಿ

ಖರ್ಗೆ ಆಯ್ಕೆ ಪರಿಣಾಮಕಾರಿ

ಬೆಂಗಳೂರು: ಕಾಂಗ್ರೆಸ್ ಅಧ್ಯಕ್ಷ ಸ್ಥಾನಕ್ಕೆ ಪ್ರಜಾಪ್ರಭುತ್ವ ವ್ಯವಸ್ಥೆಯಂತೆ ಚುನಾವಣೆ ನಡೆಯುತ್ತಿದೆ. ನಿಷ್ಠಾವಂತ ಕಾರ್ಯಕರ್ತನ ಕಡೆ ಗಾಳಿ ಬೀಸುತ್ತಿದ್ದು, ಅಧ್ಯಕ್ಷರಾಗಿ ಮಲ್ಲಿಕಾರ್ಜುನ ಖರ್ಗೆ ಅವರ ಆಯ್ಕೆ ಇಡೀ ಭಾರತದಲ್ಲೇ ಪರಿಣಾಮ ಬೀರಲಿದೆ. ಕರ್ನಾಟಕಕ್ಕೂ ಇದರಿಂದ ಒಳ್ಳೆಯದಾಗಲಿದೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಹೇಳಿದರು.
ಕೆಪಿಸಿಸಿ ಕಚೇರಿಯಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಾಂಗ್ರೆಸ್ ಅಧ್ಯಕ್ಷರಾಗಿ ಗಾಂಧಿ ಕುಟುಂಬದವರೇ ಇರಬೇಕು ಎಂದು ನಾನು ಒತ್ತಾಯ ಮಾಡಿದ್ದೆ. ಆದರೆ ರಾಹುಲ್‌ಗಾಂಧಿಯವರು ಬೇರೆಯವರಿಗೂ ಅವಕಾಶ ಕೊಡೋಣ ಎಂದಿದ್ದಾರೆ. ಅದರಂತೆ ಅಧ್ಯಕ್ಷ ಸ್ಥಾನಕ್ಕೆ ಚುನಾವಣೆ ನಡೆದಿದೆ. ಈ ಚುನಾವಣೆ ನಡೆಯುತ್ತಿರುವುದು ನನಗೆ ಸಂತಸ ತಂದಿದೆ ಎಂದರು.
ಈ ಚುನಾವಣೆಯಲ್ಲಿ ಮತದಾನದ ಗೌರವ ಎಲ್ಲರಿಗೂ ಬಿಸಿ ಮುಟ್ಟಿಸಿದೆ. ಸದಸ್ಯತ್ವ ನೋಂದಣಿಯ ಅರಿವು ನಮ್ಮ ನಾಯಕರಿಗೆ ಈಗ ಆಗುತ್ತಿದೆ. ಕೇಂದ್ರದ ನಾಯಕರೊಬ್ಬರು ದೂರವಾಣಿ ಮಾಡಿ ಮತದಾನದ ಬಗ್ಗೆ ಕೇಳಿದ್ದರು. ನಿಮ್ಮ ಹೆಸರಿಲ್ಲ ಎಂದು ಹೇಳಿದೆ. ಸದಸ್ಯತ್ವ ನೋಂದಣಿ ಬಗ್ಗೆ ಎಲ್ಲರಲ್ಲೂ ಅರಿವು ಮೂಡುತ್ತಿರುವುದು ಪಕ್ಷದ ದೃಷ್ಠಿಯಿಂದ ಒಳ್ಳೆಯದು ಎಂದರು.
ಈ ಚುನಾವಣೆಯಲ್ಲಿ ಮತದಾನದ ಹಕ್ಕು ಪಡೆದಿರುವ ಹಲವರು ತಮ್ಮ ಮತವನ್ನು ಕಾರ್ಯಕರ್ತರಿಗೆ ಬಿಟ್ಟು ಕೊಟ್ಟಿದ್ದಾರೆ. ಪ್ರಿಯಾಂಕ ಖರ್ಗೆಯವರು ಕಾರ್ಯಕರ್ತರೊಬ್ಬರಿಗೆ ಹಕ್ಕನ್ನು ಬಿಟ್ಟು ಕೊಟ್ಟಿದ್ದಾರೆ. ಹಾಗೆಯೇ ಡಿ.ಕೆ. ಸುರೇಶ್, ಲಕ್ಷ್ಮಿಹೆಬ್ಬಾಳ್ಕರ್, ರಮೇಶ್‌ಕುಮಾರ್, ಪರಮೇಶ್ವರ್, ದಿನೇಶ್ ಗುಂಡೂರಾವ್ ಹೀಗೆ ಹಲವರು ಮತದಾನದ ಹಕ್ಕನ್ನು ಕಾರ್ಯಕರ್ತರಿಗೆ ಬಿಟ್ಟು ಕೊಟ್ಟಿದ್ದಾರೆ ಎಂದರು.ಎಐಸಿಸಿ ಅಧ್ಯಕ್ಷ ಸ್ಥಾನ ಅಭ್ಯರ್ಥಿ ಶಶಿ ತರೂರು ನಿಮ್ಮ ಬೆಂಬಲ ಕೇಳಿಲ್ಲವ್ವಾ ಎಂಬ ಪ್ರಶ್ನೆಗೆ ಪ್ರತಿಕ್ರಿಯಿಸಿದ ಡಿ.ಕೆ.ಶಿವಕುಮಾರ್ ಅವರು, ತರೂರು ಅವರನ್ನು ನನ್ನ ಸಂಪರ್ಕ ಮಾಡಿಲ್ಲ, ಬೆಂಬಲಿಸಿ ಎಂದು ಕೇಳಿಲ್ಲ ಎಂದರು.
ಮಲ್ಲಿಕಾರ್ಜುನ ಖರ್ಗೆಯವರ ನಾಯಕತ್ವವನ್ನು ಎಲ್ಲರೂ ಒಪ್ಪುತ್ತಾರೆ. ಅವರ ಹಿರಿತನಕ್ಕೆ ಎಲ್ಲರದ್ದೂ ಸಮ್ಮತಿ ಇದೆ ಎಂದು ಪ್ರಶ್ನೆಯೊಂದಕ್ಕೆ ಪ್ರತಿಕ್ರಿಯಿಸಿದ ಅವರು, ಮಲ್ಲಿಕಾರ್ಜುನ ಖರ್ಗೆಯವರ ನಾಯಕತ್ವ ಸ್ಥಾನವನ್ನು ಎಲ್ಲರೂ ಒಪ್ಪುತ್ತಾರೆ ಎಂದು ಹೇಳಿದರು.ಕಾಂಗ್ರೆಸ್ ಅಧ್ಯಕ್ಷರಾಗುವವರು ರಬ್ಬರ್ ಸ್ಟಾಂಪ್ ಅಧ್ಯಕ್ಷ ಎಂಬ ಬಿಜೆಪಿ ಟೀಕೆಗೆ ಕಿಡಿಕಾರಿದ ಡಿ.ಕೆ.ಶಿವಕುಮಾರ್, ಬಿಜೆಪಿಯ ನಡ್ಡಾ ಇನ್ನೇನು. ಎಲ್ಲವನ್ನೂ ಅವರೇ ತೀರ್ಮಾನ ಮಾಡುತ್ತಿದ್ದಾರಾ, ಅಧ್ಯಕ್ಷರಾಗಿ ಆಯ್ಕೆಯಾಗುವ ಖರ್ಗೆಯವರು ರಬ್ಬರ್ ಸ್ಟಾಂಪ್ ಅಲ್ಲ. ಕೆಳ ಮನೆ, ಮೇಲ್ಮನೆಯಲ್ಲಿ ಕೆಲಸ ಮಾಡಿದ ಅನುಭವವಿದೆ. ಹಿರಿಯ ನಾಯಕರ ಸಲಹೆ ಪಡೆಯುವುದರಲ್ಲಿ ಏನು ತಪ್ಪಿದೆ. ನಾನು ಹಲವು ಸಂದರ್ಭಗಳಲ್ಲಿ ಖರ್ಗೆ ಸೇರಿದಂತೆ ಹಲವರ ಸಲಹೆ ಕೇಳುತ್ತೇನೆ. ಒಗ್ಗಟ್ಟಾಗಿ ಕೆಲಸ ಮಾಡುವಾಗ ಸಲಹೆ ಅಗತ್ಯ. ಇದರಲ್ಲಿ ತಪ್ಪಿಲ್ಲ ಎಂದರು.