ಮಾಜಿ ಕುಸ್ತಿ ಪೈಲ್ವಾನ್, ಕ್ರೀಢಾಪಟುಗಳಿಗೆ ಭರ್ಜರಿ ಸಿಹಿಸುದ್ದಿ : ರಾಜ್ಯ ಸರ್ಕಾರದಿಂದ 2.18 ಕೋಟಿ ಮಾಸಾಶನ ಬಿಡುಗಡೆ

ಬೆಂಗಳೂರು: ಒಂದು ವರ್ಷದಿಂದ ಬಾಕಿಯಿದ್ದ ಮಾಜಿ ಪೈಲ್ವಾನ್‌ಗಳು ಹಾಗೂ ಮಾಜಿ ಕ್ರೀಡಾಪಟುಗಳ ಮಾಸಾಶನಕ್ಕೆ 2.18 ಕೋಟಿ ಅನುದಾನ ಬಿಡುಗಡೆ ಮಾಡಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ. ಈ ಮೂಲಕ ಮಾಸಾಶನ ನಿರೀಕ್ಷೆಯಲ್ಲಿದ್ದಂತ ಮಾಜಿ ಕುಸ್ತಿ ಪೈಲ್ವಾನ್, ಕ್ರೀಢಾಪಟುಗಳಿಗೆ ಭರ್ಜರಿ ಗುಡ್ ನ್ಯೂಸ್ ನೀಡಿದೆ.
ಈ ಕುರಿತಂತೆ ಸಚಿವ ಡಾ.ನಾರಾಯಣಗೌಡ ಮಾಹಿತಿ ನೀಡಿದ್ದು, ರಾಜ್ಯದಲ್ಲಿ ಸಂಕಷ್ಟದಲ್ಲಿರುವ ಮಾಜಿ ಕ್ರೀಡಾಪಟುಗಳು ಹಾಗೂ ಮಾಜಿ ಪೈಲ್ವಾನ್‌ಗಳ ಮಾಸಾಶನಕ್ಕಾಗಿ 2.18 ಕೋಟಿ ಹಣವನ್ನು ಜಿಲ್ಲಾ ಪಂಚಾಯತ್‌ಗಳಿಗೆ ಹಂಚಿಕೆ ಮಾಡಿ ಬಿಡುಗಡೆಗೊಳಿಸಲಾಗಿದೆ. ಇಲಾಖಾ ಪ್ರಗತಿ ಪರಿಶೀಲನೆಗೆ ಹಲವು ಜಿಲ್ಲೆಗಳಿಗೆ ಭೇಟಿ ನೀಡಿದ ಸಂದರ್ಭದಲ್ಲಿ ಹಲವು ಮಾಜಿ ಕ್ರೀಡಾಪಟುಗಳು, ಮಾಜಿ ಕುಸ್ತಿಪಟುಗಳು ಮಾಸಾಶನ ವಿಳಂಬದ ಬಗ್ಗೆ ಸಚಿವರ ಗಮನಕ್ಕೆ ತಂದಿದ್ದರು.
ಈ ಬಗ್ಗೆ ಮೂರು ಬಾರಿ ಅಧಿಕಾರಿಗಳ ಜೊತೆ ಸಭೆ ನಡೆಸಿದ್ದ ಸಚಿವ ಡಾ.ನಾರಾಯಣಗೌಡ ಅವರು, ಒಂದು ತಿಂಗಳೊಳಗೆ ಹಣ ಬಿಡುಗಡೆ ಮಾಡುವಂತೆ ತಾಕೀತು ಮಾಡಿದ್ದರು. ಇದೀಗ ಸಚಿವ ನಾರಾಯಣ ಗೌಡ ಅವರ ಸೂಚನೆಯಂತೆ ಮಾಜಿ ಕ್ರೀಡಾಪಟುಗಳು ಹಾಗೂ ಮಾಜಿ ಪೈಲ್ವಾನ್ ಗಳ ಮಾಸಾಶನಕ್ಕೆ 2.18 ಕೋಟಿ ರೂಪಾಯಿ ಹಣ ಬಿಡುಗಡೆಯಾಗಿದ್ದು, ಹಲವು ತಿಂಗಳುಗಳಿಂದ ಸಂಕಷ್ಟದಲ್ಲಿದ್ದ ಮಾಜಿ ಕ್ರೀಡಾಪಟುಗಳು ಹಾಗೂ ಮಾಜಿ ಪೈಲ್ವಾನ್‌ಗಳಿಗೆ ಅನುಕೂಲವಾಗಲಿದೆ ಎಂದು ತಿಳಿಸಿದ್ದಾರೆ.
ಮಾಜಿ ಕ್ರೀಡಾಪಟುಗಳು, ಮಾಜಿ ಪೈಲ್ವಾನ್‌ಗಳ ರಕ್ಷಣೆಗೆ ಬದ್ಧ
ಸಂಕಷ್ಟದಲ್ಲಿರುವ ಮಾಜಿ ಕ್ರೀಡಾಪಟುಗಳು ಹಾಗೂ ಮಾಜಿ ಪೈಲ್ವಾನ್‌ಗಳು ಸರಿಯಾದ ರೀತಿಯಲ್ಲಿ ಮಾಸಾಶನ ಸಿಗುತ್ತಿಲ್ಲ ಎಂದು ಹಲವು ಬಾರಿ ನನ್ನ ಗಮನಕ್ಕೆ ತಂದಿದ್ದರು. ಈ ಬಗ್ಗೆ ಅಧಿಕಾರಿಗಳ ಜೊತೆ ಚರ್ಚಿಸಿ ಅಗತ್ಯ ಹಣಕಾಸಿನ ಬಗ್ಗೆ ಮಾಹಿತಿ ಪಡೆದು, ಕೂಡಲೇ ಹಣ ಬಿಡುಗಡೆ ಮಾಡುವಂತೆ ಸೂಚಿಸಲಾಗಿತ್ತು. ಮಾಜಿ ಕ್ರೀಡಾಪಟುಗಳು, ಮಾಜಿ ಪೈಲ್ವಾನ್‌ಗಳ ಮಾಸಾಶನಕ್ಕೆ ಅಗತ್ಯವಿರುವ ಅನುದಾನವನ್ನು ಬಿಡುಗಡೆ ಮಾಡಲಾಗಿದೆ ಎಂದು ಸಚಿವ ಡಾ.ನಾರಾಯಣಗೌಡ ಅವರು ಪ್ರತಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಮಾಜಿ ಕ್ರೀಡಾಪಟುಗಳು, ಮಾಜಿ ಪೈಲ್ವಾನ್‌ಗಳಿಗೆ ನೀಡುವ ಮಾಸಾಶನ ಎಷ್ಟು?
ರಾಜ್ಯ ಸರ್ಕಾರದಿಂದ ರಾಜ್ಯಮಟ್ಟದ ಮಾಜಿ ಕ್ರೀಡಾಪಟುಗೆ ರೂ. 1000, ರಾಷ್ಟ್ರಮಟ್ಟದ ಕ್ರೀಡಾಪಟುವಿಗೆ ರೂ. 1500 ಹಾಗೂ ಅಂತಾರಾಷ್ಟ್ರೀಯ ಕ್ರೀಡಾಪಟುವಿಗೆ ರೂ. 2000 ಮಾಸಾಶನ ಹಾಗೂ ರಾಜ್ಯ ಮಟ್ಟದ ಕುಸ್ತಿಪಟುವಿಗೆ 2500 ರೂ., ರಾಷ್ಟ್ರ ಮಟ್ಟದ ಕುಸ್ತಿಪಟುವಿಗೆ 3000 ರೂ. ಹಾಗೂ ಅಂತರಾಷ್ಟ್ರೀಯ ಮಟ್ಟದ ಕುಸ್ತಿಪಟುವಿಗೆ 4000 ರೂಪಾಯಿ ಮಾಸಾಶನ ನೀಡಲಾಗುತ್ತಿದೆ.