ಹೈಕಮಾಂಡ್ ಭೇಟಿಗೆ ಮುಖ್ಯಮಂತ್ರಿ ಬೊಮ್ಮಾಯಿ ದಿಢೀರ್ ದೆಹಲಿಗೆ ತೆರಳಿದ್ಯಾಕೆ?
ಬೆಂಗಳೂರು, ನ. 10: ಮಹತ್ವದ ಬೆಳವಣಿಗೆಯಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ದೆಹಲಿಗೆ ತೆರಳಿದ್ದಾರೆ. ಉಪ ಚುನಾವಣೆ ಫಲಿತಾಂಶದ ಬಳಿಕ ಇದೇ ಮೊದಲ ಸಲ ಮುಖ್ಯಮಂತ್ರಿಗಳು ಹೈಕಮಾಂಡ್ ಭೇಟಿ ಮಾಡುತ್ತಿದ್ದಾರೆ. ಇದಕ್ಕೂ ಮೊದಲು ರಾಜ್ಯಕ್ಕೆ ಆಗಮಿಸಿದ್ದ ರಾಜ್ಯ ಬಿಜೆಪಿ ಉಸ್ತುವಾರಿ ಅರುಣ್ ಸಿಂಗ್ ಎರಡು ದಿನಗಳ ಕಾಲ ಉಪ ಚುನಾವಣೆ ಫಲಿತಾಂಶದ ಬಗ್ಗೆ ಸವಿಸ್ತಾರ ಮಾಹಿತಿ ಕಲೆ ಹಾಕಿದ್ದಾರೆ ಎಂಬ ಮಾಹಿತಿಯಿದೆ.
ಜೊತೆಗೆ ಇದೇ ನವೆಂಬರ್ ತಿಂಗಳಿನಲ್ಲಿ ಅತ್ಯಂತ ಮಹತ್ವದ ವಿಧಾನ ಪರಿಷತ್ ಚುನಾವಣೆ ಕೂಡ ನಡೆಯಲಿದೆ. ಅದಕ್ಕಾಗಿ ಅಭ್ಯರ್ಥಿಗಳ ಆಯ್ಕೆ ಕಸರತ್ತು ಕೂಡ ಬಿಜೆಪಿಯಲ್ಲಿ ಶುರುವಾಗಿದೆ. ಉಪ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತವರು ಜಿಲ್ಲೆಯಲ್ಲಿ ಉಪ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿ ಸೋತಿದ್ದಾರೆ. ಹೀಗಾಗಿ ಮುಖ್ಯಮಂತ್ರಿಗಳ ದೆಹಲಿ ಭೇಟಿ ತೀವ್ರ ಕುತೂಹಲ ಮೂಡಿಸಿದೆ.
ಸಿಎಂ ದಿಢೀರ್ ದೆಹಲಿಗೆ ಹೋಗಿದ್ಯಾಕೆ?
ಹಲವು ಬೆಳವಣಿಗೆಗಳ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಬುಧವಾರ ಬೆಳಗ್ಗೆ ದೆಹಲಿಗೆ ತೆರಳಿದ್ದಾರೆ. ಉಪ ಚುನಾವಣೆ ಫಲಿತಾಂಶ, ವಿಧಾನ ಪರಿಷತ್ ಚುನಾವಣೆಗೆ ಅಭ್ಯರ್ಥಿಗಳ ಆಯ್ಕೆ ಜೊತೆಗೆ ಸಂಪುಟ ವಿಸ್ತರಣೆ ಮಾಡಬೇಕಾದ ಒತ್ತಡ ಕೂಡ ಸಿಎಂ ಬೊಮ್ಮಾಯಿ ಅವರ ಮೇಲಿದೆ. ಹೀಗಾಗಿ ಸಿಎಂ ದೆಹಲಿ ಭೇಟಿ ಬಿಜೆಪಿ ವಲಯದಲ್ಲಿ ತೀವ್ರ ಕುತೂಹಲ ಮೂಡಿಸಿದೆ. ಜೊತೆಗೆ ಸಚಿವಸ್ಥಾನಾಂಕ್ಷಿಗಳಲ್ಲಿ ಆಸೆ ಮೂಡಿಸಿದೆ. ಆದರೆ ಉಪ ಚುನಾವಣೆ ಫಲಿತಾಂಶದ ಹಿನ್ನೆಲೆಯಲ್ಲಿ ರಾಜ್ಯ ಉಸ್ತುವಾರಿ ಅರುಣ್ ಸಿಂಗ್ ಬೆಂಗಳೂರಿಗೆ ಬಂದು ದೆಹಲಿಗೆ ಹಿಂದಿರುಗಿದ ಬೆನ್ನಲ್ಲಿಯೇ ಸಿಎಂ ದೆಹಲಿಗೆ ತೆರಳಿದ್ದಾರೆ.
ನಾಯಕತ್ವದ ಬದಲಾವಣೆ ಬಳಿಕ ಮೊದಲ ಫಲಿತಾಂಶ
ಸಿಎಂ ಪ್ರತಿನಿಧಿಸುವ ಕ್ಷೇತ್ರದ ಪಕ್ಕದ ಹಾನಗಲ್ ಉಪ ಚುನಾವಣೆಯಲ್ಲಿ ಬಿಜೆಪಿ ಸೋಲು ಬಿಜೆಪಿಯಲ್ಲಿ ತೀವ್ರ ಚರ್ಚೆಗೆ ಕಾರಣವಾಗಿದೆ. ಅತಿದೊಡ್ಡ ರಿಸ್ಕ್ ತೆಗೆದುಕೊಂಡು ಕರ್ನಾಟಕದಲ್ಲಿ ನಾಯಕತ್ವ ಬದಲಾವಣೆ ಮಾಡಿರುವ ಬಿಜೆಪಿ ಹೈಕಮಾಂಡ್ ಬಸವರಾಜ ಬೊಮ್ಮಾಯಿ ಅವರ ಮೇಲೆ ಬಹಳಷ್ಟು ಭರವಸೆ ಇಟ್ಟಿದೆ. ಹೀಗಾಗಿ ಮುಂದಿನ ವಿಧಾನಸಭಾ ಚುನಾವಣೆಯನ್ನು ಬೊಮ್ಮಾಯಿ ಅವರ ನೇತೃತ್ವದಲ್ಲಿಯೇ ಎದುರಿಸುತ್ತೇವೆ ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಬಹಿರಂಗ ಹೇಳಿಕೆ ನೀಡಿದ್ದರು. ಆದರೆ ಪಕ್ಕದ ಕ್ಷೇತ್ರದಲ್ಲಿನ ಸೋಲು ಸಿಎಂ ಬೊಮ್ಮಾಯಿಗೆ ಹಿನ್ನಡೆಯಾಗಲು ಕಾರಣವಾಗಬಹುದು ಎನ್ನಲಾಗುತ್ತಿದೆ. ಜೊತೆಗೆ ಸಂಪುಟ ಸಂಕಟ ಕೂಡ ಸಿಎಂ ಬೊಮ್ಮಾಯಿ ಅವರಿಗೆ ಎದುರಾಗಿದೆ.
ಸಿಎಂ ಮೇಲೆ ಸಂಪುಟ ವಿಸ್ತರಣೆ ಒತ್ತಡ!
ಮುಖ್ಯಮಂತ್ರಿಗಳು ದೆಹಲಿಗೆ ತೆರಳುತ್ತಿದ್ದಂತೆಯೆ ಸಚಿವಸ್ಥಾನಾಂಕ್ಷಿಗಳಲ್ಲಿ ಪದವಿಯ ಆಸೆ ಗರಿಗೆದರುವಂತೆ ಮಾಡಿದೆ. ಎರಡೂ ಕ್ಷೇತ್ರಗಳಲ್ಲಿ ಬಿಜೆಪಿ ಗೆದ್ದಿದ್ದರೆ ಸಂಪುಟ ವಿಸ್ತರಣೆಗೆ ಬಿಜೆಪಿ ಹೈಕಮಾಂಡ್ ಖಂಡಿತವಾಗಿಯೂ ಒಪ್ಪಿಗೆ ಕೊಡುತ್ತಿತ್ತು ಎಂಬ ಮಾತುಗಳು ಬಿಜೆಪಿ ವಲಯದಿಂದಲೇ ಕೇಳಿ ಬಂದಿದೆ. ಹೀಗಾಗಿ ಉಪ ಚುನಾವಣೆ ಫಲಿತಾಂಶದ ಮೇಲೆ ಆಗಿರುವ ಪರಿಣಾಮಗಳೂ ಸೇರಿದಂತೆ ಸೋಲು-ಗೆಲವಿನ ಬಗ್ಗೆ ಸಮಗ್ರವಾದ ವರದಿಯನ್ನು ಮುಖ್ಯಮಂತ್ರಿಗಳು ಹೈಕಮಾಂಡ್‌ಗೆ ಕೊಡಲಿದ್ದಾರೆ ಎಂಬ ಮಾಹಿತಿಯಿದೆ. ತಮ್ಮ ದೆಹಲಿ ಭೇಟಿ ಬಗ್ಗೆ ಬೆಂಗಳೂರಿನಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಮಾಹಿತಿ ಕೊಟ್ಟಿದ್ದಾರೆ. ಆದರೆ ಯಾವುದೇ ರಾಜಕೀಯ ಚರ್ಚೆ ಇಲ್ಲ ಎಂಬರ್ಥದಲ್ಲಿ ಅವರು ಹೇಳಿದ್ದಾರೆ.
ಹೈಕಮಾಂಡ್ ಭೇಟಿ ಬಗ್ಗೆ ಬೊಮ್ಮಾಯಿ ಹೇಳಿಕೆ!
ಅಂತರರಾಜ್ಯ ಜಲ ವಿವಾದಗಳ ಕುರಿತು ಹಾಗೂ ರಾಜ್ಯಕ್ಕೆ ಸಂಬಂಧಿಸಿದ ಇತರೆ ವಿಷಯಗಳ ಕುರಿತು ಕೇಂದ್ರ ಸಚಿವರನ್ನು ಭೇಟಿಯಾಗಿ ಚರ್ಚೆ ನಡೆಸಲು ನವ ದೆಹಲಿಗೆ ತೆರಳುತ್ತಿರುವುದಾಗಿ ಬೆಂಗಳೂರಿನಲ್ಲಿ ಕೊಟ್ಟಿರುವ ಹೇಳಿಕೆಯಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಅವರನ್ನು ಭೇಟಿ ಮಾಡಲು ಸಮಯ ಕೇಳಿದ್ದೇನೆ ಎಂದೂ ಸಿಎಂ ಬೊಮ್ಮಾಯಿ ತಿಳಿಸಿದ್ದಾರೆ.
ಹೀಗಾಗಿ ಉಪ ಚುನಾವಣೆ ಫಲಿತಾಂಶ ಹಾಗೂ ವಿಧಾನ ಪರಿಷತ್ ಚುನಾವಣೆಗೆ ಅಭ್ಯರ್ಥಿಗಳ ಆಯ್ಕೆ ಹಾಗೂ ಸಂಪುಟ ವಿಸ್ತರಣೆ ಬಗ್ಗೆ ಬಸವರಾಜ ಬೊಮ್ಮಾಯಿ ಅವರು ಹೈಕಮಾಂಡ್ ಜೊತೆ ಚರ್ಚಿಸಲಿದ್ದಾರೆ ಎಂಬ ಮಾಹಿತಿಯಿದೆ.