ಪರಿಸರಸ್ನೇಹಿ ಗಣೇಶ ಹಬ್ಬ ಆಚರಣೆಗೆ ಮನವಿ

ಪರಿಸರಸ್ನೇಹಿ ಗಣೇಶ ಹಬ್ಬ ಆಚರಣೆಗೆ ಮನವಿ

ಬೆಂಗಳೂರು: ಈ ಬಾರಿ ಪರಿಸರಸ್ನೇಹಿ ಗಣೇಶ ಹಬ್ಬ ಆಚರಿಸಬೇಕು ಎಂದು ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ (ಕೆಎಸ್‌ಪಿಸಿಬಿ) ಮನವಿ ಮಾಡಿಕೊಂಡಿದೆ.

ಮಂಡಳಿಯು ಅರಿಸಿನ ಗಣೇಶ ನಿರ್ಮಾಣದ ಅಭಿಯಾನವನ್ನು ಈಗಾಗಲೇ ಪ್ರಾರಂಭಿಸಿದ್ದು, ಈ ಬಾರಿ 10 ಲಕ್ಷ ಅರಿಸಿನ ಗಣೇಶ ವಿಗ್ರಹಗಳ ನಿರ್ಮಾಣದ ಗುರಿ ಹಾಕಿಕೊಂಡಿದೆ. ಸೆ.8ರಿಂದ ಸೆ.10ರವರೆಗೆ ಅರಿಸಿನ ಗಣೇಶ ವಿಗ್ರಹಗಳ ಫೋಟೋಗಳನ್ನು ಮಂಡಳಿಯ ಸಾಮಾಜಿಕ ಜಾಲತಾಣಗಳ ಪುಟದಲ್ಲಿ ಅಪ್‌ಲೋಡ್ ಮಾಡಲು ಅವಕಾಶ ನೀಡಲಾಗಿದೆ. ಮೊಬೈಲ್ ಆಯಪ್ ಮತ್ತು ಕ್ಯೂಆರ್‌ ಕೋಡ್ ಸ್ಕ್ಯಾನ್ ನೆರವಿನಿಂದ ಕೂಡ ಅಪ್‌ಲೋಡ್ ಮಾಡುವ ಅವಕಾಶ ಒದಗಿಸಲಾಗಿದೆ.

ಅರಿಸಿನ ಗಣೇಶ ವಿಗ್ರಹಗಳ ಆರಾಧನೆಯ ಮಹತ್ವದ ಬಗ್ಗೆ ವಿವಿಧ ಕ್ಷೇತ್ರಗಳ ಗಣ್ಯರಿಂದ ವಿಡಿಯೊ ಸಂದೇಶ ಹಾಗೂ ಅರಿಸಿನ ಗಣೇಶ ವಿಗ್ರಹಗಳ ನಿರ್ಮಾಣದ ವಿಧಾನ ತಿಳಿಸಿಕೊಡುವ ವಿಡಿಯೊಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹಾಕಲಾಗುತ್ತಿದೆ.

'ಸ್ವಚ್ಛ ಮತ್ತು ಸುರಕ್ಷಿತ ಗಣೇಶ ಹಬ್ಬ ಆಚರಣೆ ಆದ್ಯತೆಯಾಗಿದೆ. ಪರಿಸರಸ್ನೇಹಿ ಹಬ್ಬಕ್ಕೆ ಪ್ರತಿಯೊಬ್ಬರೂ ಸಹಕಾರ ನೀಡಬೇಕು. ಅರಿಸಿನ ಗಣೇಶ ವಿಗ್ರಹ ತಯಾರಿಸಿ, ಆರಾಧಿಸಬೇಕು' ಎಂದು ಮಂಡಳಿಯ ಕಾರ್ಯದರ್ಶಿ ಶ್ರೀನಿವಾಸಲು ಮನವಿ ಮಾಡಿಕೊಂಡಿದ್ದಾರೆ.