70 ಕೆ.ಜಿ ತೂಕದ ಬಾಳೆಗೊನೆ ಬೆಳೆದ ರೈತ

70 ಕೆ.ಜಿ ತೂಕದ ಬಾಳೆಗೊನೆ ಬೆಳೆದ ರೈತ

ಬೆಂಗಳೂರು: ಯಲಹಂಕ ಹೋಬಳಿ ಜೆ.ಬಿ. ಕಾವಲ್‌ನ ರೈತ ಅಶೋಕ, ಒಂದು ಬಾಳೆ ಗಿಡದಲ್ಲಿ 70 ಕೆ.ಜಿ ತೂಕದ ಬಾಳೆಗೊನೆ ಬೆಳೆದಿದ್ದಾರೆ. ರೈತನ ಸಾಧನೆ ಗುರುತಿಸಿರುವ ತೋಟಗಾರಿಕೆ ಇಲಾಖೆ, ಗಿಡದ ಸಮೇತ ಬಾಳೆಗೊನೆಯನ್ನು ಮೇಳದಲ್ಲಿ ಪ್ರದರ್ಶನಕ್ಕೆ
ಇರಿಸಿದೆ.

ಮೇಳದಲ್ಲಿರುವ ತೋಟಗಾರಿಕೆ ಇಲಾಖೆ ಮಳಿಗೆಯಲ್ಲಿ ಬಾಳೆಗೊನೆ ಎಲ್ಲರ ಗಮನ ಸೆಳೆಯುತ್ತಿದೆ.

'ಅಶೋಕ ಅವರು ಒಂದು ಎಕರೆ ಜಮೀನಿನಲ್ಲಿ 'ಜಿ- 9' ತಳಿಯ ಬಾಳೆ ಬೆಳೆದಿದ್ದಾರೆ. ಮಣ್ಣು ಹದದಿಂದ ಹಿಡಿದು, ಗಿಡಗಳು ದೊಡ್ಡದಾಗುವವರೆಗೂ ಹೆಚ್ಚಿನ ಕಾಳಜಿ ಮಾಡಿದ್ದಾರೆ. ಹಂತ ಹಂತವಾಗಿ ಗಿಡಗಳಿಗೆ ಪೋಷಕಾಂಶ ಹಾಗೂ ಔಷಧೋಪಚಾರ ನೀಡಿದ್ದಾರೆ. ಇದರ ಫಲವಾಗಿ, ಇಂದು ಬಾಳೆ ಉತ್ತಮವಾಗಿ ಬೆಳೆದಿದೆ' ಎಂದು ಇಲಾಖೆಯ ಅಧಿಕಾರಿಯೊಬ್ಬರು ಹೇಳಿದರು.

'ಬಹುತೇಕ ಕಡೆ 'ಜಿ-9' ತಳಿಯ ಬಾಳೆ, ಒಂದು ಗಿಡಕ್ಕೆ 10 ಕೆ.ಜಿ.ಯಿಂದ 40 ಕೆ.ಜಿ ಬರುತ್ತದೆ. ಇದೀಗ ಗರಿಷ್ಠ 70 ಕೆ.ಜಿ ತೂಕದ ಬಾಳೆ ಬೆಳೆಯುವ ಮೂಲಕ ಅಶೋಕ ಯಶಸ್ವಿ ರೈತರಾಗಿದ್ದಾರೆ' ಎಂದೂ ತಿಳಿಸಿದರು.