ಕಳಸಾ ಬಂಡೂರಿ ಯೋಜನೆಗೆ ಜಲ ಆಯೋಗ ಅನುಮತಿ: ಪ್ರಧಾನಿ ಮೋದಿಗೆ ಶಾಸಕ ರಾಜಕುಮಾರ ಪಾಟೀಲ ತೆಲ್ಕೂರ ಧನ್ಯವಾದ

ಕಳಸಾ ಬಂಡೂರಿ ಯೋಜನೆಗೆ ಜಲ ಆಯೋಗ ಅನುಮತಿ: ಪ್ರಧಾನಿ ಮೋದಿಗೆ ಶಾಸಕ ರಾಜಕುಮಾರ ಪಾಟೀಲ ತೆಲ್ಕೂರ ಧನ್ಯವಾದ

ಬೀದರ್: ಉತ್ತರ ಕರ್ನಾಟಕ ಭಾಗದ ಮಹತ್ವಾಕಾಂಕ್ಷೆಯ ಯೋಜನೆಯಾದ ಕಳಸಾ ಬಂಡೂರಿ ನಾಲಾ ವಿಸ್ತøತ ಯೋಜನಾ ವರದಿಗೆ ಕೇಂದ್ರ ಸರ್ಕಾರ ಅನುಮತಿ ನೀಡಿದ್ದಕ್ಕೆ ಸಂತಸ ಸೂಚಿಸಿದ ಬಿಜೆಪಿ ರಾಜ್ಯ ವಕ್ತಾರರೂ ಆದ ಶಾಸಕ ರಾಜಕುಮಾರ ಪಾಟೀಲ ತೆಲ್ಕೂರ ಅವರು ಈ ಸಂಬಂಧ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರಿಗೆ ಧನ್ಯವಾದ ಸಮರ್ಪಿಸಿದ್ದಾರೆ.

ಕಳಸಾ ಬಂಡೂರಿ ಯೋಜನೆಯ ವಿಸ್ತೃತ ಯೋಜನಾ ವರದಿಗೆ ಕೇಂದ್ರ ಜಲ ಆಯೋಗ ಅನುಮತಿ ನೀಡಿದೆ. ಈ ಮೂಲಕ ಕರ್ನಾಟಕಕ್ಕೆ ಅತ್ಯಂತ ಅವಶ್ಯಕವಾಗಿದ್ದ ಈ ಯೋಜನೆಗೆ ಅನುಮೋದನೆ ನೀಡಿದ್ದಕ್ಕಾಗಿ ಪ್ರಧಾನ ಮಂತ್ರಿ ನರೇಂದ್ರ ಮೋದಿ, ಗೃಹ ಸಚಿವ ಅಮಿತ್ ಶಾ ಮತ್ತು ಕೇಂದ್ರ ಜಲ ಶಕ್ತಿ ಸಚಿವ ಗಜೇಂದ್ರ ಸಿಂಗ್ ಶೇಖಾವತ್ ಅವರಿಗೆ ಧನ್ಯವಾದಗಳು ಎಂದು ಅವರು ತಿಳಿಸಿದ್ದಾರೆ.

ಈ ಹಿಂದೆ ಕಳಸಾ ಬಂಡೂರಿ ಯೋಜನೆಗೆ ನಾವು ಹೋರಾಟ ಮಾಡಿದ್ದೇವೆ. ಇದೀಗ ವಿಸ್ತೃತ ಯೋಜನಾ ವರದಿಗೆ ಸರ್ಕಾರ ಒಪ್ಪಿಗೆ ನೀಡಿದೆ. ಇದಕ್ಕೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸರ್ಕಾರವೂ ಅತ್ಯಂತ ಶ್ರಮ ಹಾಕಿದೆ. ಬಸವರಾಜ ಬೊಮ್ಮಾಯಿ, ಸಚಿವರಾದ ಗೋವಿಂದ ಕಾರಜೋಳ ಅವರಿಗೂ ಅಭಿನಂದನೆ ಸಲ್ಲಿಸುತ್ತೇನೆ ಎಂದಿದ್ದಾರೆ.

ಇದರೊಂದಿಗೆ ಉತ್ತರ ಕರ್ನಾಟಕದ ಬಹುಬೇಡಿಕೆಯ ನೀರಾವರಿ ಯೋಜನೆಗೆ ಕೇಂದ್ರ ಸರ್ಕಾರವು ಹಸಿರು ನಿಶಾನೆ ತೋರಿದೆ. ರಾಜ್ಯ ಸರ್ಕಾರ ಕಳುಹಿಸಿದ್ದ ಡಿಪಿಆರ್ ವರದಿಗೆ ಜಲ ಆಯೋಗದಿಂದ ಅನುಮತಿ ಸಿಕ್ಕಿದ್ದು, ಉತ್ತರ ಕರ್ನಾಟಕದ ಹಲವು ಜಿಲ್ಲೆಗಳ ಜನರಿಗೆ ಇದು ಶುಭ ಸುದ್ದಿ ಆಗಿದೆ ಎಂದು ಹೇಳಿದ್ದಾರೆ.