ಕಾಂಗ್ರೆಸ್‌ನ ಜೋಡೋ ಯಾತ್ರೆಯಲ್ಲಿಲ್ಲ ಖರ್ಗೆ ಹೆಜ್ಜೆ; ನಿಷ್ಪಕ್ಷ ಸಾಬೀತು ಪಡಿಸಲು ಈ ನಿರ್ಧಾರ

ಕಾಂಗ್ರೆಸ್‌ನ ಜೋಡೋ ಯಾತ್ರೆಯಲ್ಲಿಲ್ಲ ಖರ್ಗೆ ಹೆಜ್ಜೆ; ನಿಷ್ಪಕ್ಷ ಸಾಬೀತು ಪಡಿಸಲು ಈ ನಿರ್ಧಾರ

ವದೆಹಲಿ: ಕಾಂಗ್ರೆಸ್‌ನ “ಭಾರತ್‌ ಜೋಡೋ’ ಯಾತ್ರೆ ಸದ್ಯ ಕರ್ನಾಟಕದಲ್ಲಿದೆ. ತವರು ರಾಜ್ಯದಲ್ಲೇ ಯಾತ್ರೆಯಿದ್ದರೂ ಪಕ್ಷದ ಹಿರಿಯ ನಾಯಕ ಮಲ್ಲಿಕಾರ್ಜುನ ಖರ್ಗೆ ಯಾತ್ರೆಯಲ್ಲಿ ಪಾಲ್ಗೊಂಡಿಲ್ಲ.

ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸುತ್ತಿರುವ ಅವರ ಒಂದು ವೇಳೆ ಯಾತ್ರೆಯಲ್ಲಿ ಪಾಲ್ಗೊಂಡರೆ, ಗಾಂಧಿ ಕುಟುಂಬದ ಬೆಂಬಲವಿರುವ ಅಭ್ಯರ್ಥಿ ಎಂದು ಬಿಂಬಿತವಾಗುತ್ತಾರೆ ಎನ್ನುವ ಕಾರಣಕ್ಕೆ ಖರ್ಗೆ ಅವರು ಈ ಯಾತ್ರೆಯಿಂದ ದೂರವಿದ್ದಾರೆ ಎಂದು ಮೂಲಗಳು ಹೇಳಿವೆ.ಯಾತ್ರೆಯು ಮೈಸೂರಿನ ಮೂಲಕ ಕರ್ನಾಟಕಕ್ಕೆ ಪ್ರವೇಶಿಸುವ ವೇಳೆಯಲ್ಲಿ ಖರ್ಗೆ ಅವರು ಮಂಡ್ಯದಲ್ಲೇ ಇದ್ದರು. ಹಾಗಿದ್ದರೂ ಅವರು ಯಾತ್ರೆಯತ್ತ ಸುಳಿದಿಲ್ಲ. ಪಕ್ಷದ ಹಂಗಾಮಿ ಅಧ್ಯಕ್ಷೆ ಸೋನಿಯಾ ಗಾಂಧಿ ಅವರು ರಾಜ್ಯಕ್ಕೆ ಬಂದು, ಯಾತ್ರೆಯಲ್ಲಿ ಪಾಲ್ಗೊಂಡಾಗಲೂ ಅವರು ಕಾಣಿಸಿಕೊಳ್ಳಲಿಲ್ಲ. ಅ.15ರಂದು ಬಳ್ಳಾರಿಯಲ್ಲಿ ರಾಹುಲ್‌ ಗಾಂಧಿ ನೇತೃತ್ವದಲ್ಲಿ ದೊಡ್ಡ ಮಟ್ಟದಲ್ಲಿ ಸಮಾವೇಶ ನಡೆಯಲಿದ್ದು, ಅಲ್ಲಿಯೂ ಖರ್ಗೆ ಭಾಗವಹಿಸುವುದಿಲ್ಲ ಎಂದು ಹೇಳಲಾಗಿದೆ.

ಅ.19ರಂದು ಪಕ್ಷದ ಅಧ್ಯಕ್ಷರ ಚುನಾವಣೆಯ ಫ‌ಲಿತಾಂಶ ಹೊರಬೀಳಲಿದ್ದು, ಖರ್ಗೆ ಮತ್ತು ಶಶಿ ತರೂರ್‌ ಅವರಲ್ಲಿ ಯಾರೇ ಗೆದ್ದರೂ ಅವರು ಅ.20ರಂದು ಯಾತ್ರೆಯಲ್ಲಿ ಪಾಲ್ಗೊಳ್ಳಲಿದ್ದಾರೆ ಎನ್ನಲಾಗಿದೆ.