ಯಾವುದೇ ಕಾರಣಕ್ಕೂ ಬಿಜೆಪಿ ತೊರೆಯಲ್ಲ : ಗೋಪಾಲಯ್ಯ

ಯಾವುದೇ ಕಾರಣಕ್ಕೂ ಬಿಜೆಪಿ ತೊರೆಯಲ್ಲ : ಗೋಪಾಲಯ್ಯ

ಬೆಂಗಳೂರು,ಆ.16-ಪಕ್ಷದ ರಾಷ್ಟ್ರೀಯ ಅಧ್ಯಕ್ಷರು ಹಾಗೂ ರಾಜ್ಯಾಧ್ಯಕ್ಷರು ನೀಡುವ ಸೂಚನೆಯಂತೆ ನಾನು ಕೆಲಸ ಮಾಡುತ್ತೇನೆ. ಯಾವುದೇ ಕಾರಣಕ್ಕೂ ಬಿಜೆಪಿಯನ್ನು ತೊರೆಯುವ ಉದ್ದೇಶವನ್ನಿಟ್ಟುಕೊಂಡಿಲ್ಲ ಎಂದು ಅಬಕಾರಿ ಸಚಿವ ಕೆ.ಗೋಪಾಲಯ್ಯ ಸ್ಪಷ್ಟಪಡಿಸಿದರು. ಪಕ್ಷದ ಕಚೇರಿಯಲ್ಲಿ ಕಾರ್ಯಕರ್ತರು ಮತ್ತು ಮುಖಂಡರ ಅಹವಾಲು ಸ್ವೀಕರಿಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಮ್ಮ ಪಕ್ಷದ ರಾಷ್ಟ್ರೀಯ ಅಧ್ಯಕ್ಷರಾದ ಜೆ.ಪಿ.ನಡ್ಡಾ ಮತ್ತು ರಾಜ್ಯಾಧ್ಯಕ್ಷ ನಳೀನ್‍ಕುಮಾರ್ ಕಟೀಲ್ ಅವರು ಕಾರ್ಯಕರ್ತರನ್ನು ಭೇಟಿಯಾಗಿ ಅವರ ಸಮಸ್ಯೆಗಳನ್ನು ಆಲಿಸಿ ಪರಿಹಾರ ನೀಡಬೇಕೆಂದು ಸೂಚನೆ ಕೊಟ್ಟಿದ್ದಾರೆ. ನಾನು ಇದನ್ನು ಚಾಚುತಪ್ಪದೇ ಮಾಡುತ್ತೇನೆ ಎಂದು ತಿಳಿಸಿದರು.

ಬೆಂಗಳೂರಿನಲ್ಲಿ ಇದ್ದಾಗ ಪ್ರತಿ ಸೋಮವಾರ ಬೆಳಗ್ಗೆಯಿಂದ ಮಧ್ಯಾಹ್ನದವರೆಗೆ ಪಕ್ಷದ ಕಚೇರಿಗೆ ಬಂದು ಕಾರ್ಯಕರ್ತರ ಅಹವಾಲುಗಳನ್ನು ಸ್ವೀಕರಿಸುತ್ತೇನೆ. ಸ್ಥಳದಲ್ಲೇ ಪರಿಹಾರ ಒದಗಿಸುವ ಸಾಧ್ಯತೆ ಇದ್ದರೆ ಅಲ್ಲಿಯೇ ಖುದ್ದು ಬಗೆಹರಿಸುತ್ತೇನೆ. ಒಂದು ವೇಳೆ ಅಧಿಕಾರಿಗಳಿಗೆ ಹೇಳುವುದಿದ್ದರೆ ಅದಕ್ಕೂ ಸಿದ್ದ ಎಂದರು.

ಪ್ರತಿ ಗುರುವಾರ ವಿಧಾನಸೌಧದಲ್ಲಿ ಕಾರ್ಯಕರ್ತರು ಮತ್ತು ಮುಖಂಡರು ನಮ್ಮನ್ನು ಬಂದು ಭೇಟಿಯಾಗಬಹುದು. ಜಿಲ್ಲಾ ಪ್ರವಾಸದ ಸಂದರ್ಭದಲ್ಲೂ ಸ್ಥಳೀಯ ಕಾರ್ಯಕರ್ತರನ್ನು ಭೇಟಿ ಮಾಡಬಹುದು. ನಾವು ಬಿಡುವಿನ ಸಂದರ್ಭದಲ್ಲಿ ಪಕ್ಷದ ಜಿಲ್ಲಾ ಕಚೇರಿಗೆ ಸಂಘ ಪರಿವಾರದ ನಾಯಕರ ಮನೆಗಳಿಗೆ ಭೇಟಿ ಕೊಡುತ್ತೇನೆ ಎಂದು ಹೇಳಿದರು. ಸಾರ್ವಜನಿಕರು , ಕಾರ್ಯಕರ್ತರ ಸಮಸ್ಯೆಗಳನ್ನು ಆಲಿಸಬೇಕೆಂದು ಪಕ್ಷ ಸೂಚನೆ ಕೊಟ್ಟಿದೆ. ಬೆಳಗ್ಗೆ 11ರಿಂದ ಮಧ್ಯಾಹ್ನ 1 ಗಂಟೆವರೆಗೆ ಸಮಸ್ಯೆಗಳನ್ನು ಆಲಿಸಿ ಪರಿಹರಿಸಬೇಕೆಂದು ಪಕ್ಷದಿಂದ ಸೂಚನೆ ಬಂದಿದೆ. ಇದನ್ನು ಚಾಚುತಪ್ಪದೇ ಮಾಡುತ್ತೇನೆ ಎಂದು ವಿವರಣೆ ನೀಡಿದರು.

ನಾನು ಉಪಚುನಾವಣೆಯಲ್ಲಿ ಬಿಜೆಪಿಯಿಂದ ಗೆದ್ದುಬಂದಿದ್ದೇನೆ. ಪಕ್ಷವು ನನಗೆ ಕೊಟ್ಟ ಮಾತಿನಂತೆ ನಡೆದುಕೊಂಡಿದೆ. ನನಗೆ ಯಾವುದೇ ರೀತಿ ಅಸಮಾಧಾನವಿಲ್ಲ. ಅಬಕಾರಿ ಖಾತೆ ಸೇರಿದಂತೆ ಯಾವುದೇ ಖಾತೆಯನ್ನು ಕೊಟ್ಟರೂ ಅದನ್ನು ನಿಭಾಯಿಸುವೆ. ನನಗೆ ಖಾತೆಯ ಬಗ್ಗೆ ಅಸಮಾಧಾನವಿಲ್ಲ ಎಂದು ಸ್ಪಷ್ಟಪಡಿಸಿದರು. ನಾನು ಬಿಜೆಪಿಯಲ್ಲಿ ಅತ್ಯಂತ ಸಂತೃಪ್ತಿಯಿಂದ ಇದ್ದೇನೆ. ಮುಂದೆಯೂ ಬಿಜೆಪಿಯಲ್ಲೇ ಇರುತ್ತೇನೆ. ಅತಿ ಹೆಚ್ಚು ಮತಗಳಿಂದ ಗೆದ್ದು ಮತ್ತೆ ಬರುತ್ತೇನೆ. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸರ್ಕಾರ ಪೂರ್ಣಾವಧಿ ಮುಗಿಸಲಿದೆ. ಇದಕ್ಕೆ ಯಾವುದೇ ಅನುಮಾನ ಬೇಡ ಎಂದರು.

ಬಿಜೆಪಿ ರಾಷ್ಟ್ರೀಯ ಪಕ್ಷವಾಗಿರುವುದರಿಂದ ಏನೇ ಸಮಸ್ಯೆಗಳಿದ್ದರೂ ಕುಳಿತು ಚರ್ಚಿಸಿ ಸಮಸ್ಯೆ ಬಗೆಹರಿಸುತ್ತಾರೆ. ನಮ್ಮಲ್ಲಿ ಯಾವುದೇ ರೀತಿಯಾದ ಸಮಸ್ಯೆಗಳಿದ್ದರೆ ಪರಸ್ಪರ ಒಟ್ಟಿಗೆ ಕುಳಿತು ಚರ್ಚಿಸುವ ಮೂಲಕ ಬಗೆಹರಿಸಿಕೊಳ್ಳಬೇಕು ಎಂದು ಸಲಹೆ ಮಾಡುತ್ತೇನೆ ಎಂದರು.

ಇಲಾಖೆಯಿಂದ ಸಚಿವರಿಗೆ ಹಫ್ತ ಕೊಡುವ ಆಡಿಯೋ ವಿಚಾರ ಕುರಿತು ಮಾತನಾಡಿದ ಅವರು, ಅಬಕಾರಿ ಆಯುಕ್ತರಿಗೆ ತನಿಖೆಗೆ ನೀಡಿದ್ದೇವೆ. ಶೀಘ್ರವೇ ವರದಿ ಬರಲಿದೆ ಎಂದರು. ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅವರನ್ನು ನಾನು ಎಂದೂ, ಎಲ್ಲೂ ಕೂಡ ಭೇಟಿ ಮಾಡಿಲ್ಲ. ನಮ್ಮ ಮತ್ತು ಪಕ್ಷದ ನಡುವೆ ಮನಸ್ತಾಪ ತರುವಂತ ಕೆಲಸ ಮಾಡಬೇಡಿ. ನಮ್ಮ ತಾಯಿ ಮರಣದ ಬಳಿಕ ಅವರು ಬಂದಿದ್ದರು. ರಾಜ್ಯಾಧ್ಯಕ್ಷರೂ ಕೂಡ ಬಂದಿದ್ದರು. ನಮ್ಮನೆಯಲ್ಲಿ ಭೇಟಿ ಮಾಡಿರೋದು ಮಾತ್ರ ಎಂದು ಸ್ಪಷ್ಟಪಡಿಸಿದರು.