ದೇವನೂರು ಮಹಾದೇವ ಸೇರಿ 7 ಲೇಖಕರ ಗದ್ಯ-ಪದ್ಯಗಳನ್ನು ಪಠ್ಯದಿಂದ ಕೈಬಿಡಲು ರಾಜ್ಯ ಸರ್ಕಾರ ಆದೇಶ

ಬೆಂಗಳೂರು : ರಾಜ್ಯ ಸರ್ಕಾರವು ಸಾಹಿತಿ ದೇವನೂರು ಮಹದೇವ ಸೇರಿ 7 ಸಾಹಿತಿಗಳ ಬರಹ ಶಾಲಾ ಪಠ್ಯ ಕೈಬಿಡುವಂತೆ ಶಿಕ್ಷಣ ಇಲಾಖೆ ಅಧಿಕಾರಿಗಳು ಹಾಗೂ ಶಾಲೆಗಳ ಮುಖ್ಯಸ್ಥರಿಗೆ ಸೂಚನೆ ನೀಡಿದೆ. ಪ್ರಸ್ತುತ ಶೈಕ್ಷಣಿಕ ವರ್ಷದ ಪರಿಷ್ಕೃತ ಪಠ್ಯಕ್ರಮದಲ್ಲಿ ತಮ್ಮ ಬರಹಗಳನ್ನು ಪರಿಗಣಿಸದಂತೆ ಕೋರಿದ್ದ ಸಾಹಿತಿ ದೇವನೂರು ಮಹಾದೇವ ಸೇರಿದಂತೆ 7 ಜನ ಲೇಖಕರ ಗದ್ಯ,ಪದ್ಯಗಳನ್ನು ಬೋಧನೆ, ಕಲಿಕೆ ಮತ್ತು ಪರಿಕ್ಷಾ ಚಟುವಟಿಕೆಯಿಂದ ಕೈಬಿಡುವಂತೆ ಶಿಕ್ಷಣ ಇಲಾಖೆ ಅಧಿಕಾರಿಗಳು ಹಾಗೂ ಶಾಲೆಗಳ ಮುಖ್ಯಸ್ಥರಿಗೆ ರಾಜ್ಯ ಸರ್ಕಾರ ಸೂಚನೆ ನೀಡಿದೆ. ಕನ್ನಡ ಪ್ರಥಮ ಭಾಷಾ ಪಠ್ಯದಲ್ಲಿನ ದೇವನೂರು ಮಹಾದೇವ ಅವರ ಎದೆಗೆ ಬಿದ್ದ ಅಕ್ಷರ (ಗದ್ಯ), ಡಾ.ಜಿ.ರಾಮಕೃಷ್ಣ ಅವರ ಭಗತ್ ಸಿಂಗ್, ದೊಡ್ಡಹುಲ್ಲೂರು ರುಕ್ಕೋಜಿರಾವ್ ಅವರು ರಚಿಸಿರುವ ಡಾ.ರಾಜ್ ಕುಮಾರ್(ಗದ್ಯ), ಕನ್ನಡ ತೃತೀಯ ಭಾಷಾ ಪಠ್ಯದಿಂದ ರೂಪಾ ಹಾಸನ ಅವರ ಅಮ್ಮನಾಗುವುದೆಂದರೆ, ಈರಪ್ಪ ಕಂಬಳಿ ಅವರ ಹೀಗೊಂದು ಟಾಪ್ ಪ್ರಯಾಣ ಪೂರಕ ಗದ್ಯಭಾಗಗಳನ್ನು ಸತೀಶ್ ಕುಲಕರ್ಣಿ ಅವರ ಕಟ್ಟತೇವ ನಾವು (ಪದ್ಯ), ಕನ್ನಡ ದ್ವಿತೀಯ ಭಾಷಾ ಪಠ್ಯದಿಂದ ಸುಕನ್ಯಾ ಮಾರುತಿ ಅವರ ಏಣಿ (ಪದ್ಯ) ಪಾಠಗಳನ್ನು ಈ ವರ್ಷದ ಬೋಧನೆ, ಕಲಿಕೆ ಮತ್ತು ಪರೀಕ್ಷಾ ಚಟುವಟಿಕೆಯಿಂದ ಕೈಬಿಡಲು ಕ್ರಮ ವಹಿಸುವಂತೆ ಎಲ್ಲಾ ಜಿಲ್ಲೆಗಳ ಉಪನಿರ್ದೇಶಕರು, ಕ್ಷೇತ್ರ ಶಿಕ್ಷಣಾಧಿಕಾರಿಗಳಿಗೆ ಇಲಾಖೆ ಸೂಚನೆ ನೀಡಿದೆ.