ಸಾಮಾನ್ಯವಾಗಿ ಕಾಣೋ ಈ ಎತ್ತಿನ ಬೆಲೆ ಬರೋಬ್ಬರಿ ₹1 ಕೋಟಿ ಏಕೆ ಗೊತ್ತಾ? ಬೆಂಗಳೂರು Krishi Melaದ ವಿಶೇಷ ಇಲ್ಲಿದೆ

ಬರೋಬ್ಬರಿ 1 ಕೋಟಿ ಬೆಲೆಯ ಎತ್ತು
ಅಂತಹದ್ದೇನು ಇದರಲ್ಲಿ ವಿಶೇಷ ಅಂತ ನಿಮಗೆ ಅನ್ನಿಸಬಹುದು, ಕೇಳಿ ಹಾಗಾದರೆ ಈ ಎತ್ತಿನ ಬೆಲೆ ಸಾವಿರವಲ್ಲ, ಲಕ್ಷವಲ್ಲ ಸುಮಾರು 1 ಕೋಟಿ ರೂಪಾಯಿ ಮೌಲ್ಯದಾಗಿದೆ ಎಂದು ಅದರ ಒಡೆಯ ಹೇಳಿದ್ದಾರೆ. ಆ ಎತ್ತಿನ ಒಡೆಯರಾದ ಬೋರೇಗೌಡ ಈ ಎತ್ತು 'ಹಳ್ಳಿಕಾರ್' ಎಂಬ ತಳಿಗೆ ಸೇರಿದ್ದು, ಇದನ್ನು "ಎಲ್ಲಾ ಜಾನುವಾರು ತಳಿಗಳ ತಾಯಿ" ಎಂದು ಪರಿಗಣಿಸಲಾಗಿದೆ ಎಂದು ಅವರು ಹೇಳಿದರು. ಈ ವಿಶೇಷ ತಳಿಯ ಎತ್ತಿನ ವೀರ್ಯವು "ಹೆಚ್ಚಿನ ಬೇಡಿಕೆ" ಯಲ್ಲಿದೆ ಮತ್ತು ಅದರ ಒಂದು ಡೋಸ್ ಅನ್ನು 1,000 ರೂಪಾಯಿಗೆ ಮಾರಾಟ ಮಾಡಲಾಗುವುದು ಎಂದು ಅವರು ಸುದ್ದಿಸಂಸ್ಥೆಗೆ ತಿಳಿಸಿದರು.
ಈ ವರ್ಷದ ಕೃಷಿ ಮೇಳಕ್ಕೆ ಸುಮಾರು 12,000ಕ್ಕೂ ಹೆಚ್ಚು ರೈತರು ನೋಂದಾಯಿಸಿಕೊಂಡಿದ್ದರು. ಇದು ಸುಮಾರು 550 ಮಳಿಗೆಗಳನ್ನು ಒಳಗೊಂಡಿತ್ತು ಎಂದು ಹೇಳಲಾಗುತ್ತಿದೆ. ಇದರಲ್ಲಿ ಸಾಂಪ್ರದಾಯಿಕ ಮತ್ತು ಹೈಬ್ರಿಡ್ ಬೆಳೆ ಪ್ರಕಾರಗಳು, ತಂತ್ರಜ್ಞಾನಗಳು ಮತ್ತು ಯಂತ್ರೋಪಕರಣಗಳ ವಸ್ತುಗಳು, ವಿವಿಧ ತಳಿಯ ಜಾನುವಾರುಗಳು, ಸಮುದ್ರದಲ್ಲಿರುವ ಪ್ರಾಣಿಗಳು ಮತ್ತು ಕೋಳಿಗಳನ್ನು ಸಹ ಪ್ರದರ್ಶಿಸಲಾಗಿತ್ತು ಎಂದು ವರದಿ ಹೇಳಿದೆ. ಈ ವರ್ಷದ 'ಕೃಷಿ ಮೇಳ' ಮಳಿಗೆಗಳ ಮುಖ್ಯ ಉದ್ದೇಶವೇ ಬೀಜ, ಸಸಿಗಳು ಮತ್ತು ಕೋಳಿಗಳ ಮಾರಾಟವಾಗಿತ್ತು.
ಈ ವರ್ಷದ ನಾಲ್ಕು ದಿನಗಳ ಕೃಷಿ ಮೇಳದ ಇನ್ನೊಂದು ವಿಶೇಷ ಏನೆಂದರೆ, ಕರ್ನಾಟಕದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅನುಪಸ್ಥಿತಿಯಲ್ಲಿ ಆಧುನಿಕ ರೈತರಾದ ಬುಡಕಟ್ಟು ಮಹಿಳೆಯೊಬ್ಬರು ಶುಕ್ರವಾರ 'ಕೃಷಿ ಮೇಳ' ಉದ್ಘಾಟಿಸಿದರು ಎಂದು ವರದಿಗಳು ತಿಳಿಸಿವೆ. ಕೃಷಿ ವಿಜ್ಞಾನಗಳ ವಿಶ್ವವಿದ್ಯಾಲಯ ಆಯೋಜಿಸಿರುವ ಮೇಳದ ಉದ್ಘಾಟನೆ ಕಾರ್ಯಕ್ರಮದಲ್ಲಿ ಪ್ರೇಮದಾಸಪ್ಪ ವೇದಿಕೆ ಮೇಲೆ ದೀಪ ಬೆಳಗಿಸುವುದರ ಮೂಲಕ ಚಾಲನೆ ನೀಡಿದರು.
ವರದಿಗಳ ಪ್ರಕಾರ, ಬೊಮ್ಮಾಯಿ ಅವರೊಂದಿಗೆ ಕರ್ನಾಟಕದ ಕೃಷಿ ಸಚಿವ ಬಿ.ಸಿ.ಪಾಟೀಲ್ ಅವರನ್ನು ಕೃಷಿ ಮೇಳದ ಉದ್ಘಾಟನೆ ಕಾರ್ಯಕ್ರಮದ ಭಾಗವಾಗಲು ಆಹ್ವಾನಿಸಲಾಗಿತ್ತು. ಆದರೆ ಭಾರತೀಯ ಚುನಾವಣಾ ಆಯೋಗ (ಇಸಿಐ) ವಿಧಾನ ಪರಿಷತ್ತಿಗೆ ಚುನಾವಣೆಗೆ ಸಂಬಂಧಿಸಿದಂತೆ ಮಾದರಿ ನೀತಿ ಸಂಹಿತೆಯಿಂದಾಗಿ ತಮ್ಮ ಹೆಸರುಗಳನ್ನು ಕೈಬಿಡುವಂತೆ ವಿಶ್ವವಿದ್ಯಾಲಯದ ಅಧಿಕಾರಿಗಳಿಗೆ ಸೂಚಿಸಿತ್ತು ಎಂದು ಹೇಳಲಾಗಿದೆ.
ತುಮಕೂರಿನಿಂದ (Tumakuru) ಬಂದಿದ್ದ ವಿಶೇಷ ತಳಿಯ ಮೇಕೆ ಎಲ್ಲರ ಚಿತ್ತವನ್ನ ತನ್ನತ್ತ ಸೆಳೆದುಕೊಂಡಿತ್ತು. ಕೃಷಿ ಮೇಳಕ್ಕೆ ಬಂದವರೆಲ್ಲ ಮೇಕೆ ಬೆಲೆ ಕೇಳಿ ಆಶ್ಚರ್ಯ ವ್ಯಕ್ತಪಡಿಸಿ, ವಿಶೇಷ ತಳಿಯ ಮಾಹಿತಿ ಪಡೆದುಕೊಂಡರು. ಚಿಕ್ಕನಾಯಕನಹಳ್ಳಿ ಬಳಿಯ ತರಬೇನಹಳ್ಳಿ ಗ್ರಾಮದ ರೈತ ಈ ವಿಶೇಷ ತಳಿಯ ಮೇಕೆಗಳನ್ನು ಕೃಷಿ ಮೇಳಕ್ಕೆ ತಂದಿದ್ದರು. ಈ ಬೋಯರ್ ತಳಿಯ ಮೇಕೆಗಳು ಅತ್ಯಂತ ವೇಗವಾಗಿ ಬೆಳವಣಿಗೆ ಆಗುತ್ತವೆ ಮತ್ತು ಅಷ್ಟೇ ಬೇಗ ಸಂತಾನೋತ್ಪತ್ತಿಗೆ ಸಜ್ಜಾಗುತ್ತವೆ. ಕೆಲ ವರ್ಷಗಳ ಹಿಂದೆ ಉಮೇಶ್, ಮಹಾರಾಷ್ಟ್ರದ ಪುಣೆಯಿಂದ ಬೋಯರ್ ತಳಿಯ ಒಂದು ಗಂಡು ಮತ್ತು ಒಂದು ಹೆಣ್ಣು ಮೇಕೆಯನ್ನು ಎರಡೂವರೆ ಲಕ್ಷ ರೂಪಾಯಿ ನೀಡಿ ತಂದಿದ್ದರು. ಇದೀಗ ಈ ಮೇಕೆಗಳ ಸಂಖ್ಯೆ 15ಕ್ಕೆ ಏರಿಕೆಯಾಗಿದೆ.