ಸಿದ್ದರಾಮಯ್ಯ ಕ್ಷೇತ್ರ ಕೊನೆಗೂ ಫೈನಲ್‌ - ಬಾದಾಮಿಯಿಂದ ಕೋಲಾರಕ್ಕೆ

ಸಿದ್ದರಾಮಯ್ಯ ಕ್ಷೇತ್ರ ಕೊನೆಗೂ ಫೈನಲ್‌ - ಬಾದಾಮಿಯಿಂದ ಕೋಲಾರಕ್ಕೆ

ಕ್ಷೇತ್ರ ಗೊಂದಲಕ್ಕೆ ಮಾಜಿ ಸಿಎಂ ಸಿದ್ದರಾಮಯ್ಯ ಕೊನೆಗೂ ತೆರೆ ಎಳೆದಿದ್ದಾರೆ. ಮುಂದಿನ ಚುನಾವಣೆಯಲ್ಲಿ ಕೋಲಾರದಿಂದ ಸ್ಪರ್ಧೆ ಮಾಡುವುದಾಗಿ ಘೋಷಣೆ ಮಾಡಿದ್ದಾರೆ. ಕೋಲಾರದಲ್ಲಿ ನಡೆದ ಕಾರ್ಯಕರ್ತರ ಸಮಾವೇಶದಲ್ಲಿ ಮಾತನಾಡಿದ ಅವರು, ನಾನು ಕೋಲಾರದಲ್ಲಿ ಸ್ಪರ್ಧೆ ಮಾಡಲು ತೀರ್ಮಾನ ಮಾಡಿದ್ದೇನೆ. ಆದರೆ ಅಂತಿಮ ನಿರ್ಧಾರ ಹೈಕಮಾಂಡ್ ಮಾಡಲಿದೆ ಎಂದರು.
ಎಲ್ಲರೂ ಕೋಲಾರ ವಿಧಾನಸಭಾ ಕ್ಷೇತ್ರದಿಂದ ಸ್ಪರ್ಧೆಗೆ ಒತ್ತಾಯ ಮಾಡಿದ್ದಾರೆ. ಕೆ‌.ಎಚ್.ಮುನಿಯಪ್ಪ ಅವರ ಆದಿಯಾಗಿ ಎಲ್ಲರೂ ಒತ್ತಾಯ ಮಾಡಿದ್ದಾರೆ. ಮೊದಲು ಕ್ಷೇತ್ರದ ಮತದಾರ, ಜನರ ಆಯ್ಕೆ ಮುಖ್ಯ ಎಂದರು. ಮತದಾರರ ಆಶೀರ್ವಾದ ಇದ್ದರೆ ಮಾತ್ರ ರಾಜಕೀಯದಲ್ಲಿ ಉಳಿಯುವುದು ಸಾಧ್ಯ. ಕೆಲವು ದಿನಗಳ ಹಿಂದೆ ನಾನು ಕೋಲಾರಕ್ಕೆ ಬಂದಿದ್ದೆ. ಆಗ ಮಸೀದಿ, ಮಂದಿರ ಹಾಗೂ ಚರ್ಚ್‌ಗಳಿಗೆ ನಾನು ಹೋಗಿದ್ದೆ .ಎಲ್ಲರೂ ಕೋಲಾರದಿಂದ ಸ್ಪರ್ಧೆ ಮಾಡಬೇಕು ಎಂದಿದ್ದರು.
ನಾನು ಬಾದಾಮಿ, ವರುಣಾ, ಚಾಮುಂಡೇಶ್ವರಿ ಕ್ಷೇತ್ರದಿಂದ ಶಾಸಕನಾಗಿದ್ದೇನೆ, ಆದರೂ ಕೂಡ ಕೆಲವರು ಅಪಪ್ರಚಾರ ಮಾಡುತ್ತಿದ್ದಾರೆ. ಸಿದ್ಧರಾಮಯ್ಯರಿಗೆ ಕ್ಷೇತ್ರವಿಲ್ಲ ಎನ್ನುತ್ತಿದ್ದಾರೆ. ನನಗೆ ಹಳೆಯ ಕ್ಷೇತ್ರ ವರುಣಾದಿಂದಲೂ ಸ್ಪರ್ಧೆ ಮಾಡುವಂುತೆ ಮತದಾರರು ಒತ್ತಾಯಿಸುತ್ತಿದ್ದಾರೆ. ಜೊತೆಗೆ ದೂರ ಆಗುತ್ತದೆ ಎನ್ನೋದಾದ್ರೆ ಎಷ್ಟೇ ಖರ್ಚಾದ್ರೂ ಒಂದು ಹೆಲಿಕ್ಯಾಪ್ಟರ್‌ನ್ನೇ ಕೊಡಿಸುತ್ತೇವೆ, ವಾರಕ್ಕೊಮ್ಮೆ ಬಂದು ಹೋಗಿ ಅಷ್ಟೇ ಸಾಕು ಎಂದು ಬಾದಾಮಿ ಜನತೆ ಹೇಳುತ್ತಿದ್ದಾರೆ. ಕಾರ್ಯಕರ್ತರಾದ ನೀವು ಹೇಳುತ್ತಿದ್ದೀರಿ. ನಿಮ್ಮ ಒತ್ತಾಯವನ್ನು ತಿರಸ್ಕರಿಸುವುದು ಸಾಧ್ಯವಿಲ್ಲ, ಕೋಲಾರದಿಂದಲೇ ಕಣಕ್ಕಿಳಿಯುವುದಾಗಿ ಹೇಳಿದರು