ಕನಕಪುರ: ಸಾರ್ವಜನಿಕ ರಸ್ತೆಗೆ ಬೇಲಿ ಹಾಕಿದ ವ್ಯಕ್ತಿ!

ಕನಕಪುರ: ಸಾರ್ವಜನಿಕ ರಸ್ತೆಗೆ ಬೇಲಿ ಹಾಕಿದ ವ್ಯಕ್ತಿ!

ನಕಪುರ: ತಾಲ್ಲೂಕಿನ ಮತ್ತಿಕುಂಟೆ ಗ್ರಾಮದಲ್ಲಿ ಸಾರ್ವಜನಿಕರು ಓಡಾಡುವ ಡಾಂಬರ್‌ ರಸ್ತೆಯನ್ನೇ ತನ್ನದು ಎಂದು ಹೇಳಿಕೊಳ್ಳುತ್ತಿರುವ ವ್ಯಕ್ತಿಯೊಬ್ಬರು ವಾಹನ ಸಂಚಾರಕ್ಕೆ ಅಡ್ಡಿಪಡಿಸಿದ್ದಾರೆ.

'ನನಗೆ ಸೇರಿದ ಜಾಗದಲ್ಲಿ ರಸ್ತೆಯಿದೆ.

ನಮ್ಮ ಜಾಗದಲ್ಲಿ ಅಕ್ರಮವಾಗಿ ರಸ್ತೆ ನಿರ್ಮಿಸಲಾಗಿದೆ. ಈ ಹಿನ್ನೆಲೆಯಲ್ಲಿ ಯಾವುದೇ ವಾಹನಗಳಿಗೆ ಓಡಾಡಲು ಬಿಡುವುದಿಲ್ಲ' ಎಂದು ಹಾರೋಹಳ್ಳಿಯ ದೊಡ್ಡ ಮುದವಾಡಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಮತ್ತಿಕುಂಟೆ ಗ್ರಾಮದ ನಿವಾಸಿ ವೆಂಕಟೇಶ್ ವಾದಿಸುತ್ತಿದ್ದಾರೆ.

ಅಲ್ಲದೆ, ಸರ್ಕಾರಿ ಬಸ್, ದ್ವಿಚಕ್ರ ವಾಹನಗಳ ಓಡಾಟಕ್ಕೆ ಅಡ್ಡಿಪಡಿಸಿದ್ದಾರೆ. ದೊಡ್ಡ ಮುದವಾಡಿ ಗ್ರಾಮದಿಂದ ರಾಮನಗರ ಜಿಲ್ಲಾ ಕೇಂದ್ರಕ್ಕೆ ಸಂಪರ್ಕ ಕಲ್ಪಿಸುವ ಈ ಮುಖ್ಯ ರಸ್ತೆಯಲ್ಲಿ ನಡೆದ ಈ ಘಟನೆಯಿಂದ ಜನರು ಗಂಟೆಗಟ್ಟಲೇ ಕಾಲ ಪರದಾಡುವಂತಾಯಿತು.

ಈ ಕುರಿತು ಮಾಹಿತಿ ತಿಳಿದು ಸ್ಥಳಕ್ಕೆ ಬಂದ ಕನಕಪುರ ಗ್ರಾಮಾಂತರ ಪೊಲೀಸರು, ರಸ್ತೆಯಲ್ಲಿ ಹಾಕಿದ್ದ ಕಲ್ಲು, ಮುಳ್ಳು ತೆರವುಗೊಳಿಸಿ ವಾಹನಗಳ ಸಂಚಾರಕ್ಕೆ ಅವಕಾಶ ಮಾಡಿಕೊಟ್ಟರು. ವೆಂಕಟೇಶ್ ಅವರನ್ನು ಠಾಣೆಗೆ ಕರೆದೊಯ್ದು ಬುದ್ಧಿ ಹೇಳಿ ಕಳಿಸಿದ್ದಾರೆ ಎನ್ನಲಾಗಿದೆ.