ದಂಡ ಕಟ್ಟಿದ ಮೈಸೂರಿನ ಶಾಸಕ ಎಲ್.ನಾಗೇಂದ್ರ
ಮೈಸೂರು: ರಾಜ್ಯ ಸಾರಿಗೆ ಇಲಾಖೆ, ಬಾಕಿ ಇರುವ ಸಂಚಾರ ನಿಯಮ ಉಲ್ಲಂಘನೆ ದಂಡದ ಮೊತ್ತವನ್ನು ಫೆ.11೧ರ ಒಳಗೆ ಪಾವತಿಸಿದರೆ ಶೇ.50 ವಿನಾಯಿತಿ ನೀಡುವುದಾಗಿ ಗುರುವಾರ ಆದೇಶ ಹೊರಡಿಸಿದೆ. ಬಹುತೇಕ ವಾಹನ ಸವಾರರು ಈ ಆದೇಶ ಸದುಪಯೋಗಪಡಿಸಿಕೊಳ್ಳುತ್ತಿದ್ದು, ಬಾಕಿ ಇರಿಸಿಕೊಂಡಿದ್ದ ದಂಡ ಕಟ್ಟುತ್ತಿದ್ದಾರೆ.
ವೇಗದ ಕಾರು ಚಾಲನೆಗೆ ಶಾಸಕ ಎಲ್.ನಾಗೇಂದ್ರ 7ಸಾವಿರ ರೂ. ದಂಡ ಕಟ್ಟಬೇಕಾಗಿತ್ತು. ಶೇ.50ರಷ್ಟು ರಿಯಾಯಿತಿಯೊಂದಿಗೆ ಮೈಸೂರಿನ ಮೆಟ್ರೋಪೋಲ್ ವೃತ್ತದಲ್ಲಿ ದಂಡ ಪಾವತಿಸಿದ್ದಾರೆ. ಹೈಕೋರ್ಟ್ ನ್ಯಾಯಾಧೀಶ ಮತ್ತು ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರ ಅಧ್ಯಕ್ಷ ನ್ಯಾ.ಬಿ.ವೀರಪ್ಪ ಅವರ ಅಧ್ಯಕ್ಷತೆಯಲ್ಲಿ ಜ.27ರಂದು ನಡೆದ ಸಭೆಯಲ್ಲಿ ರಾಜ್ಯ ಸಾರಿಗೆ ಇಲಾಖೆ ಅಧಿಕಾರಿಗಳೊಂದಿಗೆ ಚರ್ಚೆ ನಡೆಸಿದ್ದರು.
ಎಲ್ಲರಿಗೂ ನ್ಯಾಯ ಒದಗಿಸುವ ಸಲುವಾಗಿ ಬಾಕಿ ಇರುವ ಟ್ರಾಫಿಕ್ ಫೈನ್ ಪಾವತಿಗೆ ವಿನಾಯಿತಿ ನೀಡುವಂತೆ ಚರ್ಚೆ ನಡೆಸಿದ್ದರು. ಇದಕ್ಕೆ ರಾಜ್ಯ ಸಾರಿಗೆ ಮತ್ತು ರಸ್ತೆ ಸುರಕ್ಷತೆ ಆಯುಕ್ತರು ಗ್ರೀನ್ ಸಿಗ್ನಲ್ ತೋರಿದ್ದರು. ಇದರ ಮೇರೆಗೆ ಕಾನೂನು ಸೇವೆಗಳ ಪ್ರಾಧಿಕಾರ, ರಾಜ್ಯಾದ್ಯಂತ ಸಂಚಾರ ಪೊಲೀಸರು ದಾಖಲಿಸಿರುವ ಸಂಚಾರ ಉಲ್ಲಂಘನೆ ಪ್ರಕರಣಗಳ ದಂಡದ ಮೊತ್ತದಲ್ಲಿ ಶೇ.50 ವಿನಾಯಿತಿ ನೀಡುವಂತೆ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಿದ್ದರು.