ದೀಪಾವಳಿ ನೆಪದಲ್ಲಿ ಸುಲಿಗೆಗಿಳಿದ ಖಾಸಗಿ ಬಸ್‌ಗಳು

ಬೆಂಗಳೂರು : ರಾಜ್ಯಾದ್ಯಂತ ದೀಪಾವಳಿ ರಜೆಗಳ ಹಿನ್ನೆಲೆಯಲ್ಲಿ ಊರುಗಳಿಗೆ ಹೊರಟ ಜನರನ್ನೇ ಗುರಿಯಾಗಿಸಿಕೊಂಡು ಕೆಲ ಖಾಸಗಿ ಬಸ್ ಟ್ರಾವೆಲ್ಸ್‌ಗಳು ಬಸ್ ಟಿಕೆಟ್ ದರವನ್ನು ವಿಮಾನದ ಟಿಕೆಟ್‌ಗಿಂತಲೂ ಹೆಚ್ಚಿನ ದರಕ್ಕೆ ಏರಿಕೆ ಮಾಡಿ ಜನರನ್ನು ಸುಲಿಗೆ ಮಾಡುತ್ತಿವೆ.
ದೀಪಾವಳಿ ರಜೆ ಹಿನ್ನೆಲೆಯಲ್ಲಿ ಊರಿಗೆ ಹೊರಟ ಜನರನ್ನು ಗುರಿಯಾಗಿಸಿಕೊಂಡು ಕೆಲ ಖಾಸಗಿ ಬಸ್ ಮಾಲೀಕರು ಸುಲಿಗೆಗೆ ಇಳಿದಿದ್ದಾರೆ. ಪರಿಣಾಮ ಹಲವು ಮಾರ್ಗಗಳಲ್ಲಿ ವಿಮಾನದ ಟಿಕೆಟ್‌ಗಿಂತಲೂ ಬಸ್ ದರ ಹೆಚ್ಚಿಗೆ ಇದೆ.
ಬೆಂಗಳೂರು-ಹುಬ್ಬಳ್ಳಿ ನಡುವೆ ವಿಮಾನಯಾನಕ್ಕೆ 3,694 ರೂ. ಪ್ರಯಾಣ ದರವಿದೆ. ಇದೇ ಮಾರ್ಗದಲ್ಲಿ ಸಾಮಾನ್ಯವಾಗಿ 500 ರಿಂದ 800 ರೂ. ಇರುತ್ತಿದ್ದ ಖಾಸಗಿ ಬಸ್ ಟಿಕೆಟ್ ದರ ಹಬ್ಬದ ನೆಪದಲ್ಲಿ 5 ಸಾವಿರಕ್ಕೇರಿದೆ. ಬೆಂಗಳೂರು- ಕಾರವಾರ ನಡುವೆ ಸ್ಲೀಪರ್ ಕೋಚ್ ಬಸ್‌ಗೆ 4,099 ರೂ. ದರವಿದ್ದರೆ, ಬೆಂಗಳೂರು- ಮಂಗಳೂರು ನಡುವೆ 3,400 ರೂ. ಹಾಗೂ ಹೊರ ರಾಜ್ಯಗಳಾದ ಬೆಂಗಳೂರು- ಗೋವಾ ನಡುವೆ 4 ಸಾವಿರ ರೂ. ಮತ್ತು ಬೆಂಗಳೂರು-ಹೈದರಾಬಾದ್ ನಡುವೆ 3,999 ರೂ. ದರವಿದೆ