ಕಾಡುಗೊಲ್ಲರನ್ನು ಪರಿಶಿಷ್ಟ ಪಂಗಡಕ್ಕೆ ಸೇರ್ಪಡೆ ಮಾಡುವ ಜವಾಬ್ದಾರಿ ನನ್ನದು - ಸಚಿವ ಜೆ.ಸಿ ಮಾಧುಸ್ವಾಮಿ

ಕಾಡುಗೊಲ್ಲರನ್ನು ಪರಿಶಿಷ್ಟ ಪಂಗಡಕ್ಕೆ ಸೇರ್ಪಡೆ ಮಾಡುವ ಜವಾಬ್ದಾರಿ ನನ್ನದು - ಸಚಿವ ಜೆ.ಸಿ ಮಾಧುಸ್ವಾಮಿ

ಬೆಂಗಳೂರು: ರಾಜ್ಯದಲ್ಲಿರುವಂತ ಕಾಡುಗೊಲ್ಲ ಸಮುದಾಯವನ್ನು ಎಸ್ಟಿ ಪಟ್ಟಿಗೆ ಸೇರಿಸುವಂತ ಒತ್ತಾಯ ಬಹು ದಿನದ ಬೇಡಿಕೆಯಾಗಿದೆ. ಇದಕ್ಕಾಗಿ ಕುಲಶಾಸ್ತ್ರೀಯ ಅಧ್ಯಯನ ಕೂಡ ನಡೆದು, ವರದಿ ಸಲ್ಲಿಕೆಯಾಗಿದೆ. ಇಂತಹ ಕಾಡುಗೊಲ್ಲ ಸಮುದಾಯವನ್ನು ಪರಿಶಿಷ್ಟ ಪಂಗಡಕ್ಕೆ ಸೇರಿಸುವ ಜವಾಬ್ದಾರಿ ನನ್ನದು ಎಂದು ಕಾನೂನು ಸಚಿವ ಜೆ.ಸಿ ಮಾಧುಸ್ವಾಮಿ ತಿಳಿಸಿದ್ದಾರೆ.

ಕರ್ನಾಟಕ ರಾಜ್ಯ ಕಾಡುಗೊಲ್ಲ ಸಮುದಾಯದ ಸಮಸ್ಯೆಗಳ ಕುರಿತು ಇಂದು ವಿಧಾನಸೌಧದಲ್ಲಿ ಕಾನೂನು ಹಾಗೂ ಸಂಸದೀಯ ಸಚಿವರಾದ ಜೆ ಸಿ ಮಾಧುಸ್ವಾಮಿ ಅವರ ಅಧ್ಯಕ್ಷತೆಯಲ್ಲಿ ಹಾಗೂ ಅರಸೀಕೆರೆ ಶಾಸಕರಾದ ಮಾನ್ಯ ಶಿವಲಿಂಗೆಗೌಡ್ರು, ಕಾಡುಗೊಲ್ಲ ಅಭಿವೃದ್ಧಿ ನಿಗಮದ ಅಧ್ಯಕ್ಷರಾದ ಚಂಗಾವರ ಮಾರಣ್ಣ ಕರ್ನಾಟಕ ರಾಜ್ಯ ಕಾಡುಗೊಲ್ಲರ ಕ್ಷೇಮಾಭಿವೃದ್ಧಿ ಸಂಘದ ರಾಜ್ಯದ್ಯಕ್ಷರಾದ ಸಿ ಶಿವುಯಾದವ್ ಉಪಸ್ಥಿತಿಯಲ್ಲಿ ನಡೆದ ತುರ್ತು ಸಭೆಯ ನಡೆಯಿತು. ಈ ಸಭೆಯಲ್ಲಿ ಈ ಕೆಳಕಂಡ ಅಂಶಗಳನ್ನು ಕಟ್ಟುನಿಟ್ಟಾಗಿ ಆದ್ಯತೆ ಮೇರೆಗೆ ಬಗೆಹರಿಸಬೇಕೆಂದು ಸಭೆಯಲ್ಲಿ ಹಾಜರಿದ್ದ ಅಧಿಕಾರಿಗಳಿಗೆ ಸಚಿವರು ಸೂಚಿಸಿದ್ದಾರೆ.

1. ಕಾಡುಗೊಲ್ಲ ಸಮುದಾಯವನ್ನು ಪರಿಶಿಷ್ಟ ಪಂಗಡಕ್ಕೆ ಸೇರ್ಪಡೆ ಮಾಡುವ ಬಗ್ಗೆ ಮತ್ತೊಂದು ಪರಿಷ್ಕ್ರತ ವರದಿಯನ್ನು ಕೇಂದ್ರ ಸರ್ಕಾರಕ್ಕೆ ಶಿಫಾರಸು ಮಾಡುವ ಬಗ್ಗೆ ಸರ್ಕಾರದ ಕಾರ್ಯದರ್ಶಿ ಸಮಾಜ ಕಲ್ಯಾಣ ಇಲಾಖೆ ಮೇಜರ್ ಮಣ್ಣೀವಣನ್ IAS ರವರಿಗೆ ಮೌಖಿಕ ಆದೇಶ ನೀಡಿದರು.

2.ಕಾಡುಗೊಲ್ಲ ಜಾತಿ ಪ್ರಮಾಣ ಪತ್ರ ನೀಡುವ ಬಗ್ಗೆ ಈಗಾಗಲೇ 2018ರಲ್ಲಿ ಸೂಕ್ತ ಆದೇಶ ಇದ್ದು, ಅದರಲ್ಲಿ ಜಾತಿ ಪ್ರಮಾಣ ಪತ್ರವನ್ನು ಅರ್ಜಿಯನ್ನು ಸಲ್ಲಿಸಿದವರ ಬಗ್ಗೆ ಸ್ಥಳ ಪರೀಶಿಲನೆ ಮಾಡಿ ಮಹಜರ ಮಾಡಿ ಜಾತಿ ಪ್ರಮಾಣ ಪತ್ರನೀಡಬೇಕೆಂಬ ಅದೇಶ ಇರುತ್ತದೆ ಇದರ ಬಗ್ಗೆ ಮತ್ತೂಮ್ಮೆ ಎಲ್ಲಾ ಜಿಲ್ಲಾಧಿಕಾರಿಗಳಿಗೆ ವೀಡಿಯೋ ಕಾನ್ಫರೆನ್ಸ್ ಮೂಲಕ ಮಾತನಾಡಿ ಸಮಸ್ಯೆ ಬಗೆಹರಿಸುವುದಾಗಿ ಸಮಾಜ ಕಲ್ಯಾಣ ಇಲಾಖೆಯ ಆಯುಕ್ತರು ರಾಕೇಶ್ ಕುಮಾರ್ IAS ರವರು ತಿಳಿಸಿದರು.

3.ಇನ್ನಿತೆರೆ ಸಮಸ್ಯೆಗಳನ್ನು ಬಗೆಹರಿಸಲು ನಾವು ಬದ್ಧರಾಗಿದ್ದೇವೆ ಎಂದು ಕಾನೂನು ಸಚಿವರು ಹೇಳಿದರು.

ಈ ಸಭೆಯಲ್ಲಿ ತುಮಕೂರು ಜಿಲ್ಲಾ ಕಾಡುಗೊಲ್ಲ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷರಾದ ಚಂಗಾವರ ಕರಿಯಪ್ಪ, ಕರ್ನಾಟಕ ರಾಜ್ಯ ಕಾಡುಗೊಲ್ಲ ಕ್ಷೇಮಾಭಿವೃದ್ಧಿ ಸಂಘದ ರಾಜ್ಯಾಧ್ಯಕ್ಷರಾದ ಶಿವು ಯಾದವ್, ತುಮಕೂರು ಜಿಲ್ಲಾ ಕಾಡುಗೊಲ್ಲ ಕ್ಷೇಮಾಭಿವೃದ್ಧಿ ಸಂಘದ ಪ್ರಧಾನ ಕಾರ್ಯದರ್ಶಿ ಹನುಮಂತರಾಜು, ಕರ್ನಾಟಕ ರಾಜ್ಯ ಕಾಡುಗೊಲ್ಲ ಕ್ಷೇಮಾಭಿವೃದ್ಧಿ ಸಂಘದ ಪ್ರಧಾನ ಕಾರ್ಯದರ್ಶಿ ಹರ್ಷವರ್ಧನ, ಪಾವಗಡದ ಚಿತ್ತಪ್ಪ, ಚಿತ್ರದುರ್ಗ ಜಿಲ್ಲಾ ಘಟಕದ ಅಧ್ಯಕ್ಷರಾದ ಶಿವಣ್ಣ ಹಾಗೂ ಕಾರ್ಯದರ್ಶಿ ತಿಮ್ಮಯ್ಯ, ಶಿರಾ ತಾಲ್ಲೂಕು ಕಾರ್ಯದರ್ಶಿ ದೇವರಾಜ್ ಹಾಗೂ ಬಂದಕುಂಟೆ ಮಂಜಣ್ಣ, ಶಿವರಾಜು ಹಾಗೂ ಚಿತ್ರದುರ್ಗ ತಾಲ್ಲೂಕು ಅಧ್ಯಕ್ಷ ಹರೀಶ್ ಪೂಜಾರ್ ಹಾಗೂ ಸಮುದಾಯದ ಮುಖಂಡರು ಭಾಗವಹಿಸಿದ್ದರು.