ಭಾರತದಲ್ಲಿ ಕೋವಿಡ್‌ ನಿಯಂತ್ರಣವಾದ ಬಳಿಕ ಇತರ ದೇಶಕ್ಕೆ ಲಸಿಕೆ ನೀಡಬೇಕು: WHO

ನ್ಯೂಯಾರ್ಕ್‌: 'ಭಾರತದಲ್ಲಿ ಕೋವಿಡ್‌-19 ಪ್ರಕರಣಗಳ ಸಂಖ್ಯೆ ಕಡಿಮೆಯಾದ ನಂತರ, ಸೀರಂ ಇನ್ಸ್‌ಟಿಟ್ಯೂಟ್‌ ಆಫ್‌ ಇಂಡಿಯಾ (ಎಸ್‌ಐಐ) ಜಗತ್ತಿನ ಇತರ ರಾಷ್ಟ್ರಗಳಿಗೆ ಹಂಚಿಕೆ ಮಾಡುವ ಸಲುವಾಗಿ ಕೋವಿಡ್‌ ಲಸಿಕೆಯ ಉತ್ಪಾದನೆ ಆರಂಭಿಸಬೇಕು' ಎಂದು ವಿಶ್ವ ಆರೋಗ್ಯ ಸಂಸ್ಥೆ ಹೇಳಿದೆ. ಭಾರತದಲ್ಲಿ ಸೋಂಕಿನ ಪ್ರಕರಣಗಳು ಹೆಚ್ಚುತ್ತಿರುವ ಕಾರಣ, ಕೋವಿಡ್‌ ವಿರುದ್ಧದ ಲಸಿಕೆಗೆ ಭಾರಿ ಬೇಡಿಕೆ ಇದೆ. ಬೇಡಿಕೆಯಂತೆ ಪೂರೈಕೆ ಮಾಡಿದ ಮೇಲೆ 'ಕೋವ್ಯಾಕ್ಸ್‌'ಗಾಗಿ ಕೋವಿಡ್‌ ಲಸಿಕೆಯನ್ನು ಎಸ್‌ಐಐ ಉತ್ಪಾದಿಸಲು ಆರಂಭಿಸಬೇಕು ಎಂದು ವಿಶ್ವ ಆರೋಗ್ಯ ಸಂಸ್ಥೆಯ ಮುಖ್ಯಸ್ಥ ಟೆಡ್ರೋಸ್‌ ಅಧನೋಮ್‌ ಗೆಬ್ರೆಯೇಸೆಸ್‌ ಅವರು ಎಸ್‌ಐಐಗೆ ನೆನಪಿಸಿದರು. ಈ ಕಾರ್ಯಕ್ರಮದಡಿ ಈ ವರೆಗೆ 124 ದೇಶಗಳಿಗೆ 6.5 ಕೋಟಿ ಡೋಸ್‌ಗಳಷ್ಟು ಲಸಿಕೆಯನ್ನು ಪೂರೈಕೆ ಮಾಡಲಾಗಿದೆ ಎಂದು ವರ್ಚುವಲ್‌ ಪತ್ರಿಕಾಗೋಷ್ಠಿಯಲ್ಲಿ ಅವರು ತಿಳಿಸಿದರು. ವಿವಿಧ ರಾಷ್ಟ್ರಗಳಿಗೆ ಕೋವಿಡ್‌ ಲಸಿಕೆಯನ್ನು ಪೂರೈಕೆ ಮಾಡುವ ಸಲುವಾಗಿ ಆರಂಭಿಸಿರುವ ಜಾಗತಿಕ ಕಾರ್ಯಕ್ರಮಕ್ಕೆ 'ಕೋವ್ಯಾಕ್ಸ್‌' ಎಂದು ಹೆಸರು. 'ಕಡಿಮೆ ಹಾಗೂ ಮಧ್ಯಮ ಆದಾಯವಿರುವ ದೇಶಗಳಿಗೆ ಮೇ ಅಂತ್ಯದ ವೇಳೆಗೆ ಕೋವಿಡ್‌ ಲಸಿಕೆಯ 14 ಕೋಟಿ ಡೋಸ್‌ಗಳನ್ನು ವಿತರಿಸುವ ಉದ್ದೇಶ ಹೊಂದಲಾಗಿದೆ. ಇಷ್ಟು ಲಸಿಕೆಗಳು ಕೋವ್ಯಾಕ್ಸ್‌ಗೆ ಲಭಿಸುವ ಸಾಧ್ಯತೆಗಳಿಲ್ಲ. ಜೂನ್‌ ವೇಳೆಗೆ ಅಗತ್ಯವಿರುವ 5 ಡೋಸ್‌ಗಳು ಕೈತಪ್ಪುವ ಸಾಧ್ಯತೆ ಇದೆ' ಎಂದು ವಿಶ್ವಸಂಸ್ಥೆಯ ಮತ್ತೊಂದು ಅಂಗಸಂಸ್ಥೆಯಾದ ಯುನಿಸೆಫ್‌ನ ಕಾರ್ಯಕಾರಿ ನಿರ್ದೇಶಕ ಹನ್ರೀಟಾ ಫೋರ್‌ ಹೇಳಿದ್ದಾರೆ.

ಭಾರತದಲ್ಲಿ ಕೋವಿಡ್‌ ನಿಯಂತ್ರಣವಾದ ಬಳಿಕ ಇತರ ದೇಶಕ್ಕೆ ಲಸಿಕೆ ನೀಡಬೇಕು: WHO