ಇಸ್ರೇಲ್-ಗಾಜಾದಲ್ಲಿ ಮತ್ತೆ ಕದನದ ಕಿಡಿ: 273 ಮಂದಿ ಸಾವಿನ ಬಳಿಕ ಪುನಃ ವೈಮಾನಿಕ ದಾಳಿ
ಜೆರುಸಲೇಂ: ಇಸ್ರೇಲ್ ಮತ್ತು ಗಾಜಾದ ನಡುವೆ ಮತ್ತೆ ಬೆಂಕಿಯ ಕಿಡಿ ಹೊತ್ತಿಕೊಂಡಿದೆ. ಮೇ 21ರಂದು ನಡೆದ ಕದನ ವಿರಾಮ ಒಪ್ಪಂದ ಬಳಿಕ ನಡೆದ ಮೊದಲ ದೊಡ್ಡ ದಾಳಿ ಇದಾಗಿದೆ.
ಕದನ ವಿರಾಮದಿಂದ ಈ ಎರಡೂ ದೇಶಗಳು ಸ್ವಲ್ಪ ಸಮಯ ಶಾಂತವಾಗಿದ್ದವು. ಆದರೆ ಇದೀಗ ಮತ್ತೆ ಕದನ ಶುರುವಾಗಿದೆ. ಗಾಜಾದಲ್ಲಿನ ಪ್ಯಾಲೆಸ್ತೀನಿಯರು ಬೆಂಕಿ ಹಚ್ಚುವ ಬಲೂನುಗಳನ್ನು ಹಾರಿಸಿದ ಬಳಿಕ ಇಸ್ರೇಲ್ ಕೂಡ ಗಾಜಾ ಪಟ್ಟಿಯ ಮೇಲೆ ವೈಮಾನಿಕ ದಾಳಿ ನಡೆಸಿದೆ. ಇದಾಗಲೇ ನಡೆದ 11 ದಿನಗಳ ಕಾಳಗದಲ್ಲಿ 260 ಪ್ಯಾಲೆಸ್ತೀನಿಯರು ಸಾವನ್ನಪ್ಪಿದ್ದರೆ, 13 ಮಂದಿ ಇಸ್ರೇಲ್ ಜನರು ಮೃತಪಟ್ಟಿದ್ದು, ಪುನಃ ಕಾಳಗ ಶುರುವಾಗಿದೆ.
ಇಸ್ರೇಲ್‌ನ ವಾಯುಪಡೆಯು ದಕ್ಷಿಣ ಗಾಜಾ ನಗರವಾದ ಖಾನ್ ಯೂನಸ್ ತಾಣವನ್ನು ಗುರಿಯಾಗಿಸಿಕೊಂಡು ದಾಳಿ ಮಾಡಿದೆ ಎಂದು ಪ್ಯಾಲೇಸ್ತೀನಿಯನ್ ಮೂಲಗಳು ಹೇಳಿವೆ. ಆದರೆ ಇಸ್ರೇಲ್ ಪ್ರಕಾರ, ಗಾಜಾ ಪಟ್ಟಿಯಿಂದ ಸ್ಫೋಟಕಗಳಿರುವ ಬಲೂನ್ ಹಾರಾಡಿದ ಪರಿಣಾಮ ಪ್ರತಿಯಾಗಿ, ಹೀಗೆ ಮಾಡಲಾಗಿದೆ ಎಂದಿದೆ.
ಇಸ್ರೇಲ್‌ನಲ್ಲಿ 12 ವರ್ಷಗಳ ಬೆಂಜಮಿನ ನೆತನ್ಯಾಹು ಸರ್ಕಾರ ಉರುಳಿ ಹೊಸ ಸರ್ಕಾರ ಬಂದ ಕೂಡಲೇ ಈ ದಾಳಿಯಾಗಿದೆ. ಸದ್ಯ ಬಹುಮೈತ್ರಿ ಕೂಟ ಸರ್ಕಾರ ಅಸ್ತಿತ್ವದಲ್ಲಿದ್ದು, ನೆಫ್ಟಾಲಿ ಬೆನ್ನೆಟ್ ನೇತೃತ್ವದಲ್ಲಿದೆ.