ಕದನ ವಿರಾಮ ಬಳಿಕ ಮತ್ತೆ ಗಾಜಾ ಪಟ್ಟಿ ಮೇಲೆ ಇಸ್ರೇಲ್ ವೈಮಾನಿಕ ದಾಳಿ!
ಜೆರುಸಲೆಂ: ಪ್ಯಾಲೆಸ್ತೀನ್ ಕಡೆಯಿಂದ ಸ್ಫೋಟಕಗಳಿರುವ ಬಲೂನುಗಳು ಹಾರಿದ ಬೆನ್ನಲ್ಲೇ ಇಸ್ರೇಲ್ ಮತ್ತೇ ಗಾಜಾಪಟ್ಟಿ ಮೇಲೆ ವೈಮಾನಿಕ ದಾಳಿ ನಡೆಸಿದ್ದು ಇದು ಕದನ ವಿರಾಮ ನಂತರ ಮೊದಲ ದಾಳಿಯಾಗಿದೆ.
11 ದಿನಗಳ ಕಾಲ ಪ್ಯಾಲೆಸ್ತಿನ್ ಮತ್ತು ಇಸ್ರೇಲ್ ನಡುವೆ ಯುದ್ಧಕ್ಕೆ ಕಾರಣವಾಗಿತ್ತು. ನಂತರ ಮೇ 21ರಂದು ಉಭಯ ದೇಶದವರು ಕದನ ವಿರಾಮ ಘೋಷಿಸಿದ್ದರು. ಆದರೆ ಇದೀಗ ಮತ್ತೆ ಯುದ್ಧ ವಿಮಾನಗಳು ಹಾರಾಡಿವೆ. ಬೆಂಕಿಯ ಬಲೂನ್ ಗಳು ದಕ್ಷಿಣ ಇಸ್ರೇಲ್‌ನ ಸುಮಾರು 20 ಕಡೆ ಬೆಂಕಿ ಬೀಳಲು ಕಾರಣವಾಗಿವೆ ಎಂದು ಸ್ಥಳೀಯ ಅಗ್ನಿಶಾಮಕ ದಳದ ಸಿಬ್ಬಂದಿ ತಿಳಿಸಿದ್ದಾರೆ.
ಇಸ್ರೇಲ್ ನಲ್ಲಿ ಬೆಂಜಮಿನ್ ನೆತನ್ಯಾಹು ಸರ್ಕಾರ ಉರುಳಿ ನೆಫ್ಟಾಲಿ ಬೆನ್ನೆಟ್ ನೇತೃತ್ವದ ಹೊಸ ಸರ್ಕಾರ ಅಧಿಕಾರಕ್ಕೆ ಬಂದ ಕೂಡಲೇ ಈ ದಾಳಿಯಾಗಿದೆ.
ದಕ್ಷಿಣ ಗಾಜಾನಗರದ ಖಾನ್ ಯೂನೆಸ್ ನ ಪೂರ್ವಭಾಗವನ್ನು ಗುರಿಯಾಗಿಸಿಕೊಂಡು ಇಸ್ರೇಲ್ ವಾಯುಪಡೆಗಳು ದಾಳಿ ನಡೆಸಿವೆ ಎಂದು ಪ್ಯಾಲೇಸ್ತಿನ್ ಮೂಲಗಳು ತಿಳಿಸಿವೆ.
ಇನ್ನು ದಾಳಿ ಬಗ್ಗೆ ಪ್ರತಿಕ್ರಿಯಿಸಿರುವ ಇಸ್ರೇಲ್, ಗಾಜಾ ಪಟ್ಟಿಯಿಂದ ಸ್ಫೋಟಕಗಳಿರುವ ಬಲೂನ್ ಹಾರಾಡಿದ ಪರಿಣಾಮ ಇದಕ್ಕೆ ಪ್ರತಿಯಾಗಿ ಖಾನ್ ಯೂನೆಸ್ ನಲ್ಲಿನ ಭಯೋತ್ಪಾದಕರಿಗೆ ಸೌಲಭ್ಯಗಳು ಒದಗಿಸುವ ಮತ್ತು ಸಭೆಗಳನ್ನು ನಡೆಸುವ ಸ್ಥಳಗಳನ್ನು ಗುರಿಯಾಗಿಸಿ ದಾಳಿ ನಡೆಸಲಾಗಿದೆ ಎಂದು ತಿಳಿಸಿದೆ.
11 ದಿನಗಳ ಕಾಲ ನಡೆದ ಯುದ್ಧದಲ್ಲಿ 260 ಪ್ಯಾಲೆಸ್ತೀನಿಯರು ಮೃತಪಟ್ಟಿದ್ದರೆ ಇಸ್ರೇಲ್‌ನಲ್ಲಿ 13 ಮಂದಿ ಮೃತಪಟ್ಟಿದ್ದರು.