ಮೇಜರ್ ಜನರಲ್ ಕ್ರಿಸ್ ಡೊನಾಹು – ಅಫ್ಘಾನಿಸ್ತಾನ ತೊರೆದ ಕಟ್ಟಕಡೆ ಅಮೆರಿಕನ್ ಸೈನಿಕ..!

ಮೇಜರ್ ಜನರಲ್ ಕ್ರಿಸ್ ಡೊನಾಹು – ಅಫ್ಘಾನಿಸ್ತಾನ ತೊರೆದ ಕಟ್ಟಕಡೆ ಅಮೆರಿಕನ್ ಸೈನಿಕ..!
ಕಾಬೂಲ್: ಅಫ್ಘಾನಿಸ್ತಾನದಿಂದ ಅಮೆರಿಕ ಸೇನೆ (US Army)ಸಂಪೂರ್ಣವಾಗಿ ಹೊರನಡೆದಿದೆ.
ಕಳೆದ 20ವರ್ಷಗಳಿಂದ ಅಫ್ಘಾನಿಸ್ತಾನದಲ್ಲಿದ್ದ ಅಮೆರಿಕ ಯೋಧರು ಈಗ ಒಬ್ಬರೂ ಇಲ್ಲ. ತಾಲಿಬಾನ್ (Taliban) ನೀಡಿದ್ದ ಗಡುವಿಗೂ 24ಗಂಟೆಗೂ ಮೊದಲೇ, ಅಂದರೆ ಸೋಮವಾರ ರಾತ್ರಿ ಮೂರು ವಿಮಾನಗಳ ಮೂಲಕ ಅಮೆರಿಕ ಯೋಧರು ವಾಪಸ್ ತೆರಳಿದ್ದಾರೆ. ತನ್ಮೂಲಕ ಕಾಬೂಲ್ ವಿಮಾನ ನಿಲ್ದಾಣ ಕೂಡ ಸಂಪೂರ್ಣವಾಗಿ ತಾಲಿಬಾನ್ ಕೈವಶವಾಗಿದೆ.
ಈ ಮಧ್ಯೆ ಅಫ್ಘಾನಿಸ್ತಾನದಿಂದ ಕೊನೆಯವರಾಗಿ ಹೊರಬಿದ್ದ ಯೋಧನ ಫೋಟೋವನ್ನು ಅಮೆರಿಕ ರಕ್ಷಣಾ ಇಲಾಖೆ ಶೇರ್ ಮಾಡಿದೆ. ಅಫ್ಘಾನಿಸ್ತಾನದಿಂದ ಕೊನೆಯವರಾಗಿ ಹೊರನಡೆದ ಅಮೆರಿಕ ಯೋಧ ಮೇಜರ್ ಜನರಲ್ ಕ್ರಿಸ್ ಡೊನಾಹು. ಅವರು ಅಲ್ಲಿಂದ ವಿಮಾನ ಹತ್ತುವ ಮೂಲಕ ಕಾಬೂಲ್ನಲ್ಲಿ 20ವರ್ಷಗಳ ಅಮೆರಿಕ ಮಿಷನ್ ಮುಕ್ತಾಯವಾಯಿತು. ನಮ್ಮ ಸಂಪೂರ್ಣ ಸೇನೆ ವಾಪಸ್ ಬಂತು ಎಂದು ಟ್ವೀಟ್ ಮಾಡಿದೆ.
ಆಗಸ್ಟ್ 15ರಂದು ಕಾಬೂಲ್ ಅನ್ನು ತಾಲಿಬಾನ್ ಸ್ವಾಧೀನಕ್ಕೆ ಪಡೆದುಕೊಂಡ ನಂತರ ಅಲ್ಲಿದ್ದ ಅಮೆರಿಕ ನಾಗರಿಕರು, ಅಮೆರಿಕಕ್ಕೆ ಹೋಗಲು ಇಚ್ಛಿಸುವ ನಾಗರಿಕರನ್ನು ಸ್ಥಳಾಂತರ ಮಾಡುವ ಕಾರ್ಯದಲ್ಲಿ ಅಮೆರಿಕ ಸೇನೆ ತೊಡಗಿಕೊಂಡಿತ್ತು. ಅಮೆರಿಕ ಆಗಸ್ಟ್ 31ರೊಳಗೆ ಎಲ್ಲ ನಾಗರಿಕರನ್ನೂ ವಾಪಸ್ ಕರೆಸಿಕೊಳ್ಳುವುದಾಗಿ ಹೇಳಿತ್ತು. ಆದರೆ ಅದಕ್ಕೂ ಒಂದು ದಿನ ಮೊದಲೇ ಅಂದರೆ, ಆಗಸ್ಟ್ 30ರ ರಾತ್ರಿಯೇ ಸ್ಥಳಾಂತರ ಕಾರ್ಯ ಮುಕ್ತಾಯಗೊಂಡಿದೆ. ಅಮೆರಿಕ ಸೇನೆ ವಾಪಸ್ ಹೋಗುತ್ತಿದ್ದಂತೆ ಇತ್ತ ಕಾಬೂಲ್ನ್ನು ವಶಪಡಿಸಿಕೊಂಡ ತಾಲಿಬಾನಿಗಳು ಗುಂಡು ಹಾರಿಸಿ ಸಂಭ್ರಮ ವ್ಯಕ್ತಪಡಿಸಿದ್ದಾರೆ.
ಅಫ್ಘಾನಿಸ್ತಾನದಲ್ಲಿರುವ ಅಮೆರಿಕ ಜನರನ್ನು ಬಹುತೇಕ ಸ್ಥಳಾಂತರ ಮಾಡಿದ್ದೇವೆ. ಆದರೆ ಇನ್ನು 200ಕ್ಕಿಂತಲೂ ಕಡಿಮೆ ಅಮೆರಿಕನ್ನರು ಅಲ್ಲಿಯೇ ಉಳಿದಿದ್ದಾರೆ. ಅವರು ಸ್ವ ಇಚ್ಛೆಯಿಂದ ಅಲ್ಲಿಯೇ ಇದ್ದಾರೆ. ಅವರನ್ನೂ ವಾಪಸ್ ಕರೆತರಲು ಎಲ್ಲ ರೀತಿಯಲ್ಲೂ ಪ್ರಯತ್ನಿಸಲಾಯಿತು. ಆದರೆ ಅಲ್ಲಿಯೇ ಇರುತ್ತೇವೆ ಎಂದಿದ್ದಾರೆ ಎಂದು ಅಮೆರಿಕ ಕಾರ್ಯದರ್ಶಿ ಅಂಟೋನಿ ಬ್ಲಿಂಕನ್ ತಿಳಿಸಿದ್ದಾರೆ.