ಮೈಸೂರು ಗ್ಯಾಂಗ್‌ರೇಪ್ ಪ್ರಕರಣ; ಮತ್ತೋರ್ವ ಆರೋಪಿ ಬಂಧನ
ಮೈಸೂರು ಗ್ಯಾಂಗ್‌ರೇಪ್ ಪ್ರಕರಣ; ಮತ್ತೋರ್ವ ಆರೋಪಿ ಬಂಧನ
ನಿನ್ನೆ (ಸೋಮವಾರ) ಮಧ್ಯರಾತ್ರಿ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ. ಇಂದು ಆರೋಪಿಯನ್ನು ಪೊಲೀಸರು ಮೈಸೂರಿಗೆ ಕರೆತರಲಾಗುತ್ತಿದೆ.
ಇನ್ನೂ ಒಬ್ಬ ತಲೆಮರೆಸಿಕೊಂಡಿದ್ದಾನೆ..
ಒಟ್ಟು 6 ಜನರಿಂದ ಕೃತ್ಯದ ಬಗ್ಗೆ ಮಾಹಿತಿ ಇದ್ದು, ಆರೋಪಿಗಳ ವಿಚಾರಣೆ ವೇಳೆ 7 ಜನರಿದ್ದ ಬಗ್ಗೆ ಮಾಹಿತಿ ದೊರೆತಿದೆ. ಸದ್ಯ ತಮಿಳುನಾಡಿನಲ್ಲಿ ಬೀಡು ಬಿಟ್ಟಿರುವ ಒಂದು ತಂಡ, ಆರೋಪಿಗಳು ನೀಡಿರುವ ಸುಳಿವು ಆಧಾರಿಸಿ ಕಾರ್ಯಾಚರಣೆ ನಡೆಸುತ್ತಿದೆ. ತಪ್ಪಿಸಿಕೊಂಡಿರುವ ಆರೋಪಿ ಗಂಧದ ಮರ ಕಳ್ಳತನದಲ್ಲಿ ಭಾಗಿಯಾಗಿದ್ದ ಬಗ್ಗೆಯೂ ಮಾಹಿತಿ ಸಿಕ್ಕಿದೆ.
ಪ್ರಕರಣಕ್ಕೆ ಸಂಬಂಧಪಟ್ಟಂತೆ, ಡಿಸಿಪಿ ಪ್ರದೀಪ್ ಗುಂಟಿ ನೇತೃತ್ವದಲ್ಲಿ ಸೋಮವಾರ ಆರೋಪಿಗಳನ್ನು ಕರೆದೊಯ್ದು ಸ್ಥಳ ಮಹಜರು ಮಾಡಲಾಗಿದೆ.
ಚಾಮುಂಡಿಬೆಟ್ಟದ ತಪ್ಪಲಿನ ಪ್ರದೇಶಕ್ಕೆ ಗೂಡ್ಸ್ ಆಟೋದಲ್ಲಿ ತೆರಳಿದ್ದ ಆರೋಪಿಗಳು, ಗಂಧದ ಮರ ಹುಡುಕಾಡಿದ್ದಾರೆ. ಗಂಧದ ಮರ ಸಿಗದ ಹಿನ್ನೆಲೆ, ಅಲ್ಲಿಯೇ ಕುಳಿತು ಪಾರ್ಟಿ ಮಾಡಿದ್ದಾರೆ. ಈ ವೇಳೆ ಅಲ್ಲಿಗೆ ಬಂದಿದ್ದ ಯುವಕ, ಯುವತಿ ಇಬ್ಬರನ್ನೂ ಬೆದರಿಸಿ ದರೋಡೆ ಮಾಡಲು ಯತ್ನಿಸಿದ್ದು, ಯುವತಿ ಮೇಲೆ ಅತ್ಯಾಚಾರ ಮಾಡಿದ್ದಾರೆ. ಈ ಎಲ್ಲಾ ಮಾಹಿತಿಗಳನ್ನು ಆರೋಪಿಗಳು ಮಹಜರು ವೇಳೆ ತಿಳಿಸಿದ್ದಾರೆ.
ಮೈಸೂರಿನಲ್ಲಿ ವಿದ್ಯಾರ್ಥಿನಿ ಮೇಲೆ ಗ್ಯಾಂಗ್‌ರೇಪ್ ಪ್ರಕರಣಕ್ಕೆ ಸಂಬಂಧಿಸಿದಂತೆ ಇನ್ನೂ ಕೂಡ ಸಂತ್ರಸ್ತೆ ಆಘಾತದಿಂದ ಹೊರಬರದ ಕಾರಣ ಆರೋಪಿಗಳ ಮಂಪರು ಪರೀಕ್ಷೆಗೆ ಪೊಲೀಸರು ಚಿಂತನೆ ನಡೆಸಿದ್ದಾರೆ. ವೈಜ್ಞಾನಿಕ ಸಾಕ್ಷ್ಯ ಸಂಗ್ರಹಕ್ಕೆ ಮುಂದಾದ ಪೊಲೀಸರು, ನ್ಯಾಯಾಲಯದಿಂದ ಈ ಬಗ್ಗೆ ಅನುಮತಿ ಪಡೆಯುವ ಸಾಧ್ಯತೆ ಇದೆ.