ತುಂಗಾ ನದಿಗೆ ಹಾರಿ ಆತ್ಮಹತ್ಯೆಗೆ ಯತ್ನಿಸಿದ ಜೋಡಿ; ರಕ್ಷಣೆ ಮಾಡಿದ ಸಂಚಾರ ಪೊಲೀಸರು,ಸ್ಥಳೀಯರು

ತುಂಗಾ ನದಿಗೆ ಹಾರಿ ಆತ್ಮಹತ್ಯೆಗೆ ಯತ್ನಿಸಿದ ಜೋಡಿ; ರಕ್ಷಣೆ ಮಾಡಿದ ಸಂಚಾರ ಪೊಲೀಸರು,ಸ್ಥಳೀಯರು

ಶಿವಮೊಗ್ಗ: ತುಂಗಾ ನದಿಗೆ ಹಾರಿ ಆತ್ಮಹತ್ಯೆಗೆ ಯತ್ನಿಸಿದ ಜೋಡಿಯನ್ನು ಸಂಚಾರ ಠಾಣೆ ಪೊಲೀಸರು ಮತ್ತು ಸ್ಥಳೀಯರು ರಕ್ಷಣೆ ಮಾಡಿದ್ದಾರೆ. ಯುವಕನಿಗೆ ಗಂಭೀರ ಗಾಯವಾಗಿದ್ದು, ಆತನನ್ನು ಮೆಗ್ಗಾನ್ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಯುವತಿಯನ್ನು ರಕ್ಷಿಸಲಾಗಿದೆ ಎಂದು ತಿಳಿದು ಬಂದಿದೆ.

ಶಿವಮೊಗ್ಗದ ತುಂಗಾ ನದಿ ಹಳೆ ಸೇತುವೆ ಬಳಿ ಘಟನೆ ಸಂಭವಿಸಿದೆ. ರಾಜು ಎಂಬಾತ ಯುವತಿ ಜೊತೆಗೆ ಸೇತುವೆ ಬಳಿ ಬಂದಿದ್ದಾನೆ. ಇಬ್ಬರು ಸೇತುವೆಯಿಂದ ತುಂಗಾ ಹೊಳೆಗೆ ಜಿಗಿಯಲು ಮುಂದಾಗಿದ್ದಾರೆ. ಈ ವೇಳೆ ಯುವಕ ಹೊಳೆಗೆ ಹಾರಿದ್ದಾನೆ. ಯುವತಿಯನ್ನು ಸ್ಥಳೀಯರು ರಕ್ಷಿಸಿದ್ದಾರೆ ಎಂದು ತಿಳಿದು ಬಂದಿದೆ.

ಹೊಳೆಯಲ್ಲಿ ನೀರು ಕಡಿಮೆ ಇದ್ದು, ಯುವಕ ಬಂಡೆಗಳ ಮೇಲೆ ಬಿದ್ದಿದ್ದಾನೆ. ಆತನಿಗೆ ಗಂಭೀರ ಗಾಯವಾಗಿದೆ. ಕೂಡಲೆ ಸ್ಥಳೀಯರು ಮತ್ತು ಸಂಚಾರ ಠಾಣೆ ಪೊಲೀಸರು ಹೊಳೆಗೆ ಇಳಿದು ಆತನನ್ನು ರಕ್ಷಣೆ ಮಾಡಿದ್ದಾರೆ. ಗಂಭೀರ ಗಾಯಗೊಂಡಿದ್ದ ಯುವಕನನ್ನು ಆಂಬುಲೆನ್ಸ್ ನಲ್ಲಿ ಮೆಗ್ಗಾನ್ ಆಸ್ಪತ್ರೆಗೆ ರವಾನಿಸಲಾಗಿದೆ.

ಯುವಕ ಮತ್ತು ಯುವತಿ ಆತ್ಮಹತ್ಯೆಗೆ ಯತ್ನಿಸಲು ನಿಖರ ಕಾರಣ ತಿಳಿದು ಬಂದಿಲ್ಲ. ಘಟನೆ ಹಿನ್ನೆಲೆ ತುಂಗಾ ನದಿ ಹಳೆ ಸೇತುವೆ ಬಳಿ ಜನ ಜಮಾಯಿಸಿದ್ದರು.