ಶಾಸಕರ ಹೆಸರಲ್ಲೂ ಹಣಕ್ಕೆ ಪೀಡಿಸ್ತಿದ್ದಾರೆ. ಪ್ಲೀಸ್ ನನಗೆ ದಯಾಮರಣ ಕೊಡಿ: ಹುಬ್ಬಳ್ಳಿ ಮೂಲದ ಗುತ್ತಿಗೆದಾರ ಅಳಲು

ಹುಬ್ಬಳ್ಳಿ: ಗ್ರಾಮ ಪಂಚಾಯಿತಿಗಳಿಗೆ ಸರಬರಾಜು ಮಾಡಿದ್ದ ಕೋವಿಡ್ ಪರಿಕರಗಳ ಬಿಲ್ ಪಾವತಿಗಾಗಿ ಶಾಸಕರ ಹೆಸರಲ್ಲೂ ಹಣಕ್ಕೆ ಪೀಡಿಸ್ತಿದ್ದಾರೆ… ಅಧಿಕಾರಿಯ ಕಿರುಕುಳ ಸಹಿಸಲಾಗ್ತಿಲ್ಲ, ದಯವಿಟ್ಟು ನನಗೆ ದಯಾಮರಣಕ್ಕೆ ಅನುಮತಿ ಕೊಡಿ… ಎಂದು ಹುಬ್ಬಳ್ಳಿ ಮೂಲದ ಗುತ್ತಿಗೆದಾರನೊಬ್ಬ ರಾಷ್ಟ್ರಪತಿ, ಪ್ರಧಾನಮಂತ್ರಿ, ರಾಜ್ಯಪಾಲ ಮತ್ತು ಮುಖ್ಯಮಂತ್ರಿಗಳಿಗೆ ಪತ್ರ ಬರೆದಿದ್ದಾರೆ.
ಗುತ್ತಿಗೆದಾರ ಬಸವರಾಜ್ ಅಮರಗೋಳ ಎಂಬುವವರು ದಯಾಮರಣ ಕೋರಿ ಪತ್ರ ಬರೆದಿದ್ದಾರೆ. ಚಿಕ್ಕಮಗಳೂರು ಜಿಲ್ಲೆಯ ಕಡೂರು, ಮೂಡಿಗೆರೆ ತಾಲೂಕಿನ ಗ್ರಾಮ ಪಂಚಾಯಿತಿಗಳಿಗೆ ಕೋವಿಡ್ ಪರಿಕರಗಳನ್ನು ಸರಬರಾಜು ಮಾಡಿದ್ದರು. 2020-21ರಲ್ಲಿ ಕೇಂದ್ರ ಮತ್ತು ರಾಜ್ಯ ಸರ್ಕಾರದ ಆದೇಶ ಪತ್ರದ ಅನುಸಾರ ಒಟ್ಟು 69 ಗ್ರಾ.ಪಂ.ಗೆ ಪರಿಕರ ನೀಡಿದ್ದರು. ಮೂಡಿಗೆರೆ ತಾಲೂಕಿಗೆ 27 ಲಕ್ಷ ರೂ. ಮೌಲ್ಯದ, ಕಡೂರು ತಾಲೂಕಿಗೆ 85 ಲಕ್ಷ ರೂ. ಮೌಲ್ಯದ ಪರಿಕರಗಳನ್ನು ಪೂರೈಕೆ ಮಾಡಿದ್ದರು.
ಸರಬರಾಜು ಮಾಡಿ 2 ವರ್ಷ ಕಳೆದರೂ ತಾಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿಗಳು ಬಿಲ್ ಪಾವತಿಸಿಲ್ಲ. ಬಿಲ್ ಪಾವತಿ ಮಾಡಲು ಕಡೂರು ಇಒ ದೇವರಾಜ್ ನಾಯಕ್ ಕಮಿಷನ್ಗಾಗಿ ಪೀಡಿಸುತ್ತಿದ್ದಾರೆ. ಶಾಸಕರ ಹೆಸರು ಸೇರಿದಂತೆ ಬೇರೆ ಬೇರೆಯವರ ಹೆಸರಲ್ಲಿ ಬಿಲ್ನ ಒಟ್ಟು 40% ಹಣಕ್ಕೆ ಬೇಡಿಕೆ ಇಟ್ಟಿದ್ದಾರೆ ಎಂದು ಗುತ್ತಿಗೆದಾರ ಆರೋಪಿಸಿದ್ದಾರೆ.
ಬಿಲ್ ಪಾವತಿಸುವಂತೆ ಪ್ರದಾನ ಮಂತ್ರಿ ಕಾರ್ಯಾಲಯದಿಂದ 4 ಬಾರಿ ಸೂಚನೆ ಬಂದಿದೆ. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ಕಾರ್ಯಾಲಯದಿಂದಲೂ ಆದೇಶ ಬಂದಿದೆ. ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಅವರೂ ನಿರ್ದೇಶನ ನೀಡಿದ್ದಾರೆ. ಆದರೂ ಬಿಲ್ ಪಾವತಿಸಿಲ್ಲ. ಅತ್ತ ಸಾಲಗಾರರಿಗೆ ನಿಗಿದಿತ ಸಮಯಕ್ಕೆ ನಾನು ಹಣ ಪಾವತಿ ಮಾಡಲು ಆಗ್ತಿಲ್ಲ ಎಂದು ಗುತ್ತಿಗೆದಾರ ಬಸವರಾಜ್ ಅಳಲು ತೋಡಿಕೊಂಡಿದ್ದಾರೆ.