ಒಲಿಂಪಿಕ್ಸ್ ಪದಕ ವಿಜೇತನಿಗೆ ಗೌರವ, ಆರ್ಮಿ ಕ್ರೀಡಾಂಗಣಕ್ಕೆ 'ನೀರಜ್ ಚೋಪ್ರ' ಹೆಸರು

ಪುಣೆ: ಆರ್ಮಿ ಕ್ರೀಡಾ ಸಂಸ್ಥೆಯಲ್ಲಿರುವ ಕ್ರೀಡಾಂಗಣಕ್ಕೆ ಒಲಿಂಪಿಕ್ಸ್ ಜಾವೆಲಿನ್ನ ಚಿನ್ನದ ಪದಕ ವಿಜೇತ ನೀರಜ್ ಚೋಪ್ರಾ ಹೆಸರಿಡುವ ಮೂಲಕ ಪದಕ ವಿಜೇತನಿಗೆ ಗೌರವ ಸಲ್ಲಿಸಿದೆ.
ಈ ಕ್ರೀಡಾಂಗಣಕ್ಕೆ 'ನೀರಜ್ ಚೋಪ್ರಾ ಆರ್ಮಿ ಸ್ಪೋರ್ಟ್ಸ್ ಇನ್‌ಸ್ಟಿಟ್ಯೂಟ್ ಪುಣೆ' ಎಂದು ಹೆಸರಿಡುವ ಸಾಧ್ಯತೆಯಿದೆ. ನಾಮಕರಣ ಸಮಾರಂಭವು ಆಗಸ್ಟ್ 23ರಂದು ನಡೆಯಲಿದ್ದು, ರಕ್ಷಣಾ ಮಂತ್ರಿ ರಾಜನಾಥ್ ಸಿಂಗ್ ಆಗಮಿಸಲಿದ್ದಾರೆ. ಈ ವೇಳೆ ಭಾರತೀಯ ಸೇನೆಯ 16 ಒಲಿಂಪಿಯನ್‌ಗಳನ್ನು ಸನ್ಮಾನಿಸಲಾಗುತ್ತದೆ.
ಇತ್ತೀಚೆಗೆ ಮುಕ್ತಾಯಗೊಂಡ ಟೋಕಿಯೊ ಒಲಿಂಪಿಕ್ಸ್‌ನಲ್ಲಿ ಜಾವೆಲಿನ್ ಸ್ಪರ್ಧೆಯಲ್ಲಿ ಚಿನ್ನ ಗೆದ್ದ ಸೇನೆಯ ಸುಬೇದಾರ್ ನೀರಜ್ ಚೋಪ್ರಾ ಸ್ವತಃ ಎಎಸ್‌ಐನಲ್ಲಿ ತರಬೇತಿ ಪಡೆದಿದ್ದರು. 2006ರಲ್ಲಿ ಆರ್ಮಿ ಕ್ರೀಡಾಂಗಣ ನಿರ್ಮಾಣವಾಗಿದ್ದು, 400 ಮೀಟರ್ ಸಿಂಥೆಟಿಕ್ ಟ್ರ್ಯಾಕ್ ಹಾಗೂ ವೀಕ್ಷಕರ ಗ್ಯಾಲರಿಯನ್ನು ಒಳಗೊಂಡಿದೆ. 23 ವರ್ಷದ ನೀರಜ್ ಚೋಪ್ರಾ ಕೂಡಾ ಸೈನ್ಯದಲ್ಲಿ ಸುಬೇದಾರ್ ಹುದ್ದೆಯನ್ನು ಹೊಂದಿದ್ದು, ಅಥ್ಲೆಟಿಕ್ಸ್ ವಿಭಾಗದಲ್ಲಿ ಒಲಿಂಪಿಕ್ಸ್ ಕ್ರೀಡಾಕೂಟದಲ್ಲಿ ದೇಶಕ್ಕೆ ಚಿನ್ನದ ಪದಕ ಗೆದ್ದುಕೊಟ್ಟ ಏಕೈಕ ಸಾಧಕ ಎನಿಸಿದ್ದಾರೆ. (ಏಜೆನ್ಸೀಸ್)