ಡೈರೆಕ್ಟರ್ ಪ್ರೊಡ್ಯೂಸರ್ ಸಿಕ್ಕೇಬಿಟ್ರು 400 ಕೋಟಿ ಬಜೆಟ್ ಸಿನಿಮಾ ಬರ್ತ್‌ಡೇಗೆ ಘೋಷಣೆ
ರಾಕಿಂಗ್ ಸ್ಟಾರ್ ಯಶ್ ಮುಂದಿನ ಸಿನಿಮಾ ಯಾವುದು ಎನ್ನುವ ಮಿಲಿಯನ್ ಡಾಲರ್ ಪ್ರಶ್ನೆಗೆ ಇನ್ನು ಉತ್ತರ ಸಿಕ್ಕಿಲ್ಲ. ಬಾಲಿವುಡ್ ಮಂದಿ ಕೂಡ ಈ ಬಿಗ್ ಅನೌನ್ಸ್‌ಮೆಂಟ್‌ಗಾಗಿ ವೇಯ್ಟ್ ಮಾಡ್ತಿದೆ. ರಾಕಿಂಗ್ ಸ್ಟಾರ್ ಹುಟ್ಟುಹಬ್ಬದ ಸಂಭ್ರಮದಲ್ಲೇ ಯಶ್19 ಅನೌನ್ಸ್ ಆಗುತ್ತದೆ ಎನ್ನಲಾಗ್ತಿದೆ.
KGF ಚಾಪ್ಟರ್- 2 ನಂತರ ಯಶ್ ಯಾವುದೇ ಸಿನಿಮಾ ಒಪ್ಪಿಕೊಂಡಿಲ್ಲ. ಯಾವ ಚಿತ್ರಕ್ಕೆ ಗ್ರೀನ್ ಸಿಗ್ನಲ್ ಕೊಡ್ತಾರೆ ಎನ್ನುವ ಕುತೂಹಲ ಭಾರತೀಯ ಸಿನಿರಸಿಕರಲ್ಲಿದೆ. ಹಾಲಿವುಡ್ ರೇಂಜ್‌ನಲ್ಲಿ ಮುಂದಿನ ಸಿನಿಮಾ ಮಾಡುವುದಾಗಿ ಯಶ್ ಸುಳಿವು ಕೊಟ್ಟಿದ್ದಾರೆ. ನನ್ನ ಸಿನಿಮಾ ಬಗ್ಗೆ ನಾನೇ ಹೇಳುವವರೆಗೂ ಊಹಾಪೋಹಗಳನ್ನು ನಂಬಬೇಡಿ ಎಂದು ಕೂಡ ಹೇಳಿದ್ದಾರೆ. ಯಶ್ ಹುಟ್ಟುಹಬ್ಬ ಹತ್ತಿರ ಬರುತ್ತಿದ್ದಂತೆ ಯಶ್ 19 ಸಿನಿಮಾ ಬಗ್ಗೆ ಮತ್ತೆ ಚರ್ಚೆ ಶುರುವಾಗಿದೆ. 400 ಕೋಟಿ ಬಜೆಟ್‌ನಲ್ಲಿ ಈ ಸಿನಿಮಾ ಸಿದ್ಧವಾಗುತ್ತೆ ಎನ್ನಲಾಗ್ತಿದೆ.
ಬಹಳ ದಿನಗಳಿಂದ ಕೆವಿಎನ್ ಪ್ರೊಡಕ್ಷನ್ ಬ್ಯಾನರ್‌ನಲ್ಲಿ ಯಶ್ ಸಿನಿಮಾ ಮಾಡುತ್ತಾರೆ ಎನ್ನುವ ಮಾತುಗಳು ಕೇಳಿಬರ್ತಿತ್ತು. 'ಮಫ್ತಿ' ನರ್ತನ್ ಕಥೆ ಬರೀತಿದ್ದಾರೆ ಎನ್ನುವ ಮಾಹಿತಿ ಕೂಡ ಇತ್ತು. ಆದರೆ ತಮಿಳು ನಿರ್ದೇಶಕರೊಬ್ಬರು ಯಶ್ ಮುಂದಿನ ಚಿತ್ರಕ್ಕೆ ಆಕ್ಷನ್ ಕಟ್ ಹೇಳ್ತಾರೆ ಎನ್ನುವ ಮಾತುಗಳು ಈಗ ಕೇಳಿಬರ್ತಿದೆ. ಕೆವಿಎನ್ ಸಂಸ್ಥೆ ಬರೋಬ್ಬರಿ 400 ಕೋಟಿ ವೆಚ್ಚದಲ್ಲಿ ಈ ಸಿನಿಮಾ ನಿರ್ಮಾಣ ಮಾಡಲಿದೆ ಎನ್ನಲಾಗ್ತಿದೆ.
KGF ಸರಣಿ ಸಿನಿಮಾಗಳ ಸಕ್ಸಸ್ ನಂತರ ಯಶ್ ಮುಂದಿನ ಸಿನಿಮಾ ಬಗ್ಗೆ ಭಾರೀ ನಿರೀಕ್ಷೆ ಇದೆ. ಅದೇ ಕಾರಣಕ್ಕೆ ಯಶ್ ಕಥೆ ಆಯ್ಕೆಯಲ್ಲಿ ಒತ್ತಡಕ್ಕೆ ಸಿಲುಕಿದಂತೆ ಕಾಣುತ್ತಿದೆ. ಅಳೆದು ತೂಗಿ ಮತ್ತೆ ಪ್ಯಾನ್ ಇಂಡಿಯಾ ಲೆವೆಲ್‌ಗೆ ಹೊಂದಿಕೆಯಾಗುವಂತಹ ಸಿನಿಮಾ ಮಾಡಲು ಮುಂದಾಗಿದ್ದಾರೆ. ಸೈಫೈ ಥ್ರಿಲ್ಲರ್ ಸಿನಿಮಾ ಮಾಡುವ ಬಗ್ಗೆ ಯಶ್ ಉತ್ಸುಕರಾಗಿದ್ದರೆ. ಜನವರಿ 8ಕ್ಕೆ ಯಶ್ 37ನೇ ವಸಂತಕ್ಕೆ ಕಾಲಿಡುತ್ತಿದ್ದಾರೆ. ಅಭಿಮಾನಿಗಳು ಕೂಡ ನೆಚ್ಚಿನ ನಟನ ಹುಟ್ಟುಹಬ್ಬ ಆಚರಿಸಲು ಕಾಯುತ್ತಿದ್ದಾರೆ. ಹುಟ್ಟುಹಬ್ಬದ ಸಂಭ್ರಮದಲ್ಲೇ ಯಶ್19 ಸಿನಿಮಾ ಘೋಷಣೆ ಆಗುವ ಸಾಧ್ಯತೆಯಿದೆ.