ಪತಿಯ ಶಾಕಿಂಗ್ ಹೇಳಿಕೆ ಬೆನ್ನಲ್ಲೇ ಉದ್ದನೆಯ ಸಾಲುಗಳನ್ನು ಬರೆದ ಶಿಲ್ಪಾ; ಕೆಲವೇ ಗಂಟೆಗಳಲ್ಲಿ ಡಿಲೀಟ್
ಶಿಲ್ಪಾ ಶೆಟ್ಟಿ ಪತಿ ರಾಜ್ ಕುಂದ್ರಾ ಇತ್ತೀಚೆಗೆ ಶಾಕಿಂಗ್ ಹೇಳಿಕೆ ಒಂದನ್ನು ನೀಡಿದ್ದರು. ಮೊದಲ ಪತ್ನಿ ಕವಿತಾ ಕುಂದ್ರಾ ಹೊಂದಿದ್ದ ಅಕ್ರಮ ಸಂಬಂಧದ ಬಗ್ಗೆ ಅವರು ಹೇಳಿಕೊಂಡಿದ್ದರು. ಈ ಶಾಕಿಂಗ್ ಹೇಳಿಕೆ ಬೆನ್ನಲ್ಲೇ ಶಿಲ್ಪಾ ಶೆಟ್ಟಿ ಇನ್ಸ್ಟಾಗ್ರಾಂನಲ್ಲಿ ಉದ್ದನೆಯ ಸಾಲುಗಳನ್ನು ಬರೆದುಕೊಂಡಿದ್ದರು. ಆದರೆ, ಕೆಲವೇ ಗಂಟೆಗಳಲ್ಲಿ ಅವರು ಅದನ್ನು ಡಿಲೀಟ್ ಮಾಡಿದ್ದಾರೆ.
'ಒಳ್ಳೆಯ ಮನುಷ್ಯನಿಗೆ ಬೇಸರವಾದರೆ, ಅವನ ಜತೆ ಒಳ್ಳೆಯವರೆಲ್ಲರೂ ನೋವುಣ್ಣುತ್ತಾರೆ. ಕೆಲವೊಮ್ಮೆ ಒಳ್ಳೆಯವರಿಗೆ ಕೆಟ್ಟದ್ದಾದರೆ ನಾವು ಅದನ್ನು ನೋಡುತ್ತೇವೆ. ಆದರೆ ನಾವು ಅದಕ್ಕೆ ಏನನ್ನೂ ಮಾಡುವುದಿಲ್ಲ. ಏಕೆಂದರೆ ಘಟನೆಗಳು ನಮ್ಮಿಂದ ದೂರವಿರುತ್ತವೆ ಅಥವಾ ಅದು ನಮಗೆ ಸಂಬಂಧಿಸಿದ್ದು ಆಗಿರುವುದಿಲ್ಲ' ಎಂದು ಪೋಸ್ಟ್ ಆರಂಭಿಸಿದ್ದಾರೆ.
'ಒಂದೊಮ್ಮೆ ಒಳ್ಳೆಯ ವ್ಯಕ್ತಿ ಮೇಲೆ ದಾಳಿ ಆದರೆ, ಗಾಯವಾದರೆ, ಜೈಲಿಗೆ ಹಾಕಿದರೆ ನಮ್ಮ ಸುರಕ್ಷತೆ ಕಡಿಮೆ ಇದೆ ಎಂದರ್ಥ' ಎಂದು ಶಿಲ್ಪಾ ಬರೆದುಕೊಂಡಿದ್ದಾರೆ. ಈ ಪೋಸ್ಟ್ಅನ್ನು ಮಾಡಿದ್ದು ಏಕೆ ಎನ್ನುವ ಬಗ್ಗೆ ಅಭಿಮಾನಿಗಳು ತಲೆಕೆಡಿಸಿಕೊಳ್ಳುತ್ತಿರುವಾಗಲೇ ಅವರು ಪೋಸ್ಟ್ ಡಿಲೀಟ್ ಮಾಡಿದ್ದಾರೆ. ಶಿಲ್ಪಾ ಯಾವ ಉದ್ದೇಶಕ್ಕೆ ಈ ಪೋಸ್ಟ್ ಮಾಡಿದ್ದಾರೆ ಎನ್ನುವ ವಿಚಾರ ತಿಳಿಯಲಿಲ್ಲ.
ರಾಜ್ ಕುಂದ್ರಾ ತಂಗಿಯ ಗಂಡ ಹಾಗೂ ರಾಜ್ ಕುಂದ್ರಾ ಮೊದಲ ಪತ್ನಿ ಕವಿತಾ ನಡುವೆ ಅಕ್ರಮ ಸಂಬಂಧ ಇತ್ತು. ಇಬ್ಬರೂ ರೆಡ್ ಹ್ಯಾಂಡ್ ಆಗಿ ಸಿಕ್ಕಿ ಬಿದ್ದಿದ್ದರಂತೆ. ಈ ವಿಚಾರದ ಬಗ್ಗೆ ರಾಜ್ ಎಲ್ಲಿಯೂ ಹೇಳಿಕೊಂಡಿರಲಿಲ್ಲ. ಈ ಘಟನೆಯಿಂದ ಎರಡು ಕುಟುಂಬಗಳ ಬಾಳಲ್ಲಿ ಬಿರುಗಾಳಿ ಎದ್ದಿತ್ತು ಎಂದು ರಾಜ್ ಮರುಗಿದ್ದರು. ಈ ಶಾಕಿಂಗ್ ಹೇಳಿಕೆ ಬಗ್ಗೆ ಶಿಲ್ಪಾ ಶೆಟ್ಟಿ ಕೂಡ ಅಸಮಾಧಾನ ಹೊರ ಹಾಕಿದ್ದರು.
ನಟಿ ಶಿಲ್ಪಾ ಶೆಟ್ಟಿ ಹಾಗೂ ಉದ್ಯಮಿ ರಾಜ್ಕುಂದ್ರಾ 2009ರಲ್ಲಿ ಮದುವೆ ಆದರು. ಇಬ್ಬರೂ ಸುಖ ಸಂಸಾರ ನಡೆಸುತ್ತಿದ್ದಾರೆ. ಸದಾ ಮಕ್ಕಳು ಹಾಗೂ ಪತಿಯೊಂದಿಗೆ ಸಮಯ ಕಳೆಯುವ ಶಿಲ್ಪಾ ಶೆಟ್ಟಿ ಅದರ ಫೋಟೋ ಹಾಗೂ ವಿಡಿಯೋಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಳ್ಳುತ್ತಾ ಅಭಿಮಾನಿಗಳನ್ನು ರಂಜಿಸುತ್ತಿದ್ದಾರೆ.