ಭಾರತದಲ್ಲಿ ಉತ್ಪಾದನೆ ನಿಲ್ಲಿಸಿದ ಫೋರ್ಡ್: ಚೆನ್ನೈ ನಲ್ಲಿ 3.3 ಸಾವಿರ ಮಂದಿಯ ಜೀವನ ಅತಂತ್ರ
ಚೆನ್ನೈ: ಅಮೆರಿಕದ ಆಟೋಮೊಬೈಲ್ ಸಂಸ್ಥೆ ಫೋರ್ಡ್ ಭಾರತದಲ್ಲಿನ ತನ್ನ ಎರಡು ಉತ್ಪದನಾ ಘಟಕಗಳನ್ನು ಸ್ಥಗಿತಗೊಳಿಸಲು ನಿರ್ಧರಿಸಿರುವುದು ಚೆನ್ನೈ ನಲ್ಲಿರುವ 3,300 ಮಂದಿ ಉದ್ಯೋಗಿಗಳ ಜೀವನವನ್ನು ಡೋಲಾಯಮಾನ ಸ್ಥಿತಿಗೆ ದೂಡಿದೆ.
ಮರಿಮಲೈ ನಗರ್ ನಲ್ಲಿ ಫೋರ್ಡ್ ನ ಉತ್ಪದನಾ ಘಟಕವಿದ್ದು ಈ ಘಟಕ ಮುಂದಿನ ವರ್ಷದ ವೇಳೆಗೆ ಕಾರ್ಯಾಚರಣೆಯನ್ನು ಸ್ಥಗಿತಗೊಳಿಸಿದೆ.
"ಸೆಮಿ ಕಂಡ್ಕ್ಟರ್ ಕೊರತೆಯ ಕಾರಣ ನೀಡಿ ಈ ವಾರ ಕಾರ್ಯಾಚರಣೆಗಳನ್ನು ಸ್ಥಗಿತಗೊಳಿಸಿದ್ದರು. ಆದರೆ ಈಗ ಏಕಾಏಕಿ 2022 ರ ಎರಡನೇ ತ್ರೈಮಾಸಿಕದಲ್ಲಿ ಘಟಕವನ್ನೇ ಮುಚ್ಚುವುದಾಗಿ ಸಂಸ್ಥೆ ಘೋಷಿಸಿದೆ" ಎಂದು ಮೆಟೀರಿಯಲ್ ಹಾಗೂ ಪ್ಲಾನಿಂಗ್ ವಿಭಾಗದಲ್ಲಿರುವ ಪ್ರೊಡಕ್ಷನ್ ಅಸೋಸಿಯೇಟ್ ಸೆಲ್ವಾ ಹೇಳುತ್ತಾರೆ.
"ಈ ಘೋಷಣೆಯ ಬಗ್ಗೆ ಸಂಸ್ಥೆಯವರಿಗೆ ಈ ಹಿಂದೆಯೇ ಮಾಹಿತಿ ಇತ್ತು. ಆದ್ದರಿಂದ ಒಂದು ದಿನ ರಜೆಯನ್ನು ಘೋಷಿಸಿ ನಂತರ ಸ್ಥಗಿತಗೊಳಿಸುವ ಘೋಷಣೆಯನ್ನು ಮಾಡಿದ್ದಾರೆ. ನಮಗೆ ಪ್ರತಿಭಟನೆ ನಡೆಸುವುದಕ್ಕೂ ಅವಕಾಶವಿರಲಿಲ್ಲ. ವಾರದ ಹಿಂದೆಯಷ್ಟೇ ನಮಗೆ ವೇತನವನ್ನು ಹೆಚ್ಚಿಸಿದ್ದರು" ಎಂದು ಸೆಲ್ವಾ ಮಾಹಿತಿ ನೀಡಿದ್ದಾರೆ.
ಪ್ರತಿ ಬಾರಿ ಮೂರು ವರ್ಷಗಳ ಕಾಂಟ್ರಾಕ್ಟ್ ನಮಗೆ ಸಿಗುತ್ತಿತ್ತು. ಆದರೆ ಈ ಬಾರಿ ಕಾಂಟ್ರಾಕ್ಟ್ ನ್ನು ಒಂದು ವರ್ಷಕ್ಕೆ ಮಾತ್ರ ಸೀಮಿತಗೊಳಿಸಿದ್ದರು. ಆಗಲೇ ನಮಗೆ ಏನೋ ಆಗಲಿದೆ ಎಂಬ ಮುನ್ಸೂಚನೆ ಇತ್ತು. ಉದ್ಯೋಗಿಗಳ ವಲಯದಲ್ಲಿ "ಉತ್ಪಾದನಾ ಘಟಕವನ್ನು ಮಾರಾಟ ಮಾಡಲಿದ್ದಾರೆ ಅಥವಾ ಮತ್ತೊಂದು ಸಂಸ್ಥೆಯ ಸಹಯೋಗದಲ್ಲಿ ಉತ್ಪದನಾ ಘಟಕ ನಡೆಯಲಿದೆ ಎಂಬ ಊಹಾಪೋಹಗಳು, ವದಂತಿಗಳಿದ್ದವು. ಆದರೆ ನಾವು ಎಂದಿಗೂ ಉತ್ಪದನಾ ಘಟಕ ಮುಚ್ಚಲ್ಪಡುತ್ತದೆ ಎಂದು ಊಹಿಸಿರಲಿಲ್ಲ. ನೌಕರರನ್ನು, ಉದ್ಯೋಗಿಗಳನ್ನು ವಿಶ್ವಾಸಕ್ಕೆ ತೆಗೆದುಕೊಳ್ಳದೇ ಇಂತಹ ನಿರ್ಧಾರ ಕೈಗೊಳ್ಳಲು ಹೇಗೆ ಸಾಧ್ಯ ಎಂದು ಉದ್ಯೋಗಿಯೊಬ್ಬರು ಪ್ರಶ್ನಿಸಿದ್ದಾರೆ.
ಫೋರ್ಡ್ ನ ಈ ನಿರ್ಧಾರದಿಂದ 2,700 ಉದ್ಯೋಗಿಗಳು, ತಾಂತ್ರಿಕ ವರ್ಗದವರು ಹಾಗೂ 600 ಮಂದಿ ಇತರ ಸಿಬ್ಬಂದಿಗಳ ಭವಿಷ್ಯ ಅತಂತ್ರವಾಗಿದೆ.