ಸಫಾರಿ ವಾಹನದ ಮೇಲೆ ದಾಳಿ ಮಾಡಿದ 13 ಅಡಿ ಎತ್ತರದ ಆನೆ: ಓಟಕ್ಕಿತ್ತ ಜನರು! ವಿಡಿಯೋ ವೈರಲ್

ಜೋಹಾನ್ಸ್ ಬರ್ಗ್: ಕೋಪಗೊಂಡ ಆನೆಯೊಂದು ಸಫಾರಿ ವಾಹನದ ಮೇಲೆ ದಾಳಿ ನಡೆಸಿದ ಘಟನೆಯೊಂದು ದಕ್ಷಿಣ ಆಫ್ರಿಕಾದ ಕ್ರೂಗರ್ ನ್ಯಾಶನಲ್ ಪಾರ್ಕ್ ನಲ್ಲಿ ಕಳೆದ ರವಿವಾರ ನಡೆದಿದೆ. ಸಲಗದ ದಾಳಿಗೆ ಬೆದರಿದ ಜನರು ಓಡುತ್ತಿರುವ ದೃಶ್ಯ ಸದ್ಯ ವೈರಲ್ ಆಗಿದೆ.
ಕ್ರೂಗರ್ ಪಾರ್ಕ್ ನ ಸೆಲಾಟಿ ಗೇಮ್ ರಿಸರ್ವ್ ನಲ್ಲಿ ಜನರು ಸಫಾರಿಗೆ ಹೊರಟಿದ್ದರು. ಗೈಡ್ ಗಳೊಂದಿಗೆ ಹೊರಟಿದ್ದ ಇವರ ವಾಹನದ ಮೇಲೆ ಆನೆಯೊಂದು ದಿಢೀರನೆ ದಾಳಿ ನಡೆಸಿದೆ.
ಸಫಾರಿ ಜೀಪನ್ನು 13 ಅಡಿ ಎತ್ತರದ ಆನೆ ಮಗುಚಿ ಹಾಕಿದ ದೃಶ್ಯವನ್ನು ಇಕೋಟ್ರೇನಿಂಗ್ ಗೈಡ್‌ಗಳು ಸೆರೆಹಿಡಿದಿದ್ದಾರೆ. ಆಕ್ರಮಣಕಾರಿ ಆನೆಯ ದಾಳಿಗೆ ಬೆದರಿದ ಗೈಡ್ ಗಳು ಮತ್ತು ಪ್ರವಾಸಿಗರು ಓಟಕ್ಕಿತ್ತಿದ್ದಾರೆ.
ಭಾನುವಾರದ ದಿನನಿತ್ಯದ ಪ್ರವಾಸದ ವೇಳೆ ಗೈಡ್ ಗಳು ಆನೆಗಳ ಹಿಂಡನ್ನು ಕಂಡಿದ್ದಾರೆ. ಆನೆ 'ಮಸ್ತ್' ನಲ್ಲಿತ್ತು ಅಂದರೆ ಇದು ಗಂಡು ಆನೆಗಳಲ್ಲಿ ಸಂಯೋಗದ ಅವಧಿಯಲ್ಲಿ ಕಂಡುಬರುವ ಲೈಂಗಿಕ ಆಕ್ರಮಣಶೀಲತೆಯ ಸ್ಥಿತಿ. ಮಸ್ತ್ ನಲ್ಲಿರುವ ಆನೆಗಳು ಮನುಷ್ಯರು ಮತ್ತು ಇತರ ಆನೆಗಳ ಕಡೆಗೆ ಅತ್ಯಂತ ಆಕ್ರಮಣಕಾರಿ ಮತ್ತು ಹಿಂಸಾತ್ಮಕವಾಗಿ ವರ್ತಿಸುತ್ತವೆ ಎಂದು ವರದಿಯಾಗಿದೆ.