ಪ.ಪಂ ಚುನಾವಣೆಯಲ್ಲಿ ಸ್ಪರ್ಧಿಸಲು ರೆಡಿಯಾಗಿದ್ದ ಭೀಮಾತೀರದ ರೌಡಿಶೀಟರ್‌ ಬರ್ಬರ ಹತ್ಯೆ

ಪ.ಪಂ ಚುನಾವಣೆಯಲ್ಲಿ ಸ್ಪರ್ಧಿಸಲು ರೆಡಿಯಾಗಿದ್ದ ಭೀಮಾತೀರದ ರೌಡಿಶೀಟರ್‌ ಬರ್ಬರ ಹತ್ಯೆ

ವಿಜಯಪುರ: ಭೀಮಾತೀರದ ರೌಡಿಶೀಟರ್‌ನ್ನು ದುಷ್ಕರ್ಮಿಗಳು ಭೀಕರವಾಗಿ ಹತ್ಯೆಗೈದು ಪರಾರಿಯಾಗಿರುವ ಘಟನೆ ವಿಜಯಪುರ ಜಿಲ್ಲೆಯ ಆಲಮೇಲ ಪಟ್ಟಣದಲ್ಲಿ ನಡೆದಿದೆ.

ಆಲಮೇಲ ಪಟ್ಟಣ ಪಂಚಾಯತಿ‌ ಮಾಜಿ ಸದಸ್ಯ ಪ್ರದೀಪ ಎಂಟಮಾನನ್ನು ನಾಲ್ಕೈದು ದುಷ್ಕರ್ಮಿಗಳು ಕಲ್ಲು ಹಾಗೂ ಬಡಿಗೆಯಿಂದು ಹೊಡೆದು ಕೊಲೆಗೈದು ಪರಾರಿಯಾಗಿದ್ದಾರೆ.

ಕಾರ್ಯಕ್ರಮವೊಂದರಲ್ಲಿ ಭಾಗಿಯಾಗಲು ಸ್ನೇಹಿತರೊಂದಿಗೆ ತೆರಳಿದ್ದ ವೇಳೆಯಲ್ಲಿ ದುಷ್ಕರ್ಮಿಗಳು ಹೊಡೆದು ಪರಾರಿಯಾಗಿದ್ದಾರೆ. ಸ್ಥಳಕ್ಕೆ ಆಲಮೇಲ ಪೊಲೀಸರ ಭೇಟಿ ನೀಡಿ ಪರಿಶೀಲನೆ ನಡೆಸಿ, ದುಷ್ಕರ್ಮಿಗಳ‌ ಬಂಧನಕ್ಕೆ ಜಾಲ ಬೀಸಿದ್ದಾರೆ.

ಭೀಮಾತೀರದ ಕೆಲ ಕೊಲೆ ಪ್ರಕರಣಗಳಲ್ಲಿ ಪ್ರದೀಪ್​ ಎಂಟಮಾನ್​ ಆರೋಪಿಯಾಗಿದ್ದ. ಪ.ಪಂ ಚುನಾವಣೆ ಹೊಸ್ತಿಲಲ್ಲೇ ಹತ್ಯೆ ನಡೆದಿದೆ. ಎಂಟಮಾನ್​ 17ನೇ ವಾರ್ಡ್​ನಿಂದ ಸ್ಪರ್ಧೆಗೆ ರೆಡಿಯಾಗಿದ್ದ. ಕಳೆದ ಬಾರಿ 13ನೇ ವಾರ್ಡ್​ನಿಂದ ಆಯ್ಕೆಯಾಗಿದ್ದ. ದಿನಾಂಕ 8 ರಂದು ನಾಮಪತ್ರ ಸಲ್ಲಿಸಲು ಎಂಟಮಾನ್​ ರೆಡಿಯಾಗಿದ್ದ. ಅಷ್ಟರಲ್ಲೇ ಬರ್ಬರ ಹತ್ಯೆ ನಡೆದಿದೆ.

ಎಂಟಮಾನ್​ ಒಟ್ಟು 22 ಕ್ರಿಮಿನಲ್ ಪ್ರಕರಣಗಳಲ್ಲಿ ಆರೋಪಿಯಾಗಿದ್ದ. 2008ರಲ್ಲಿ ಬಾಗಪ್ಪ ಹರಿಜನ್ ಅಳಿಯನ ಹತ್ಯೆ ಪ್ರಕರಣ, 2009ರ ಸಂಜು ಡಾಕ್ಟರ್ ಮೇಲೆ ಫೈರಿಂಗ್ ಪ್ರಕರಣ, 2008ರಲ್ಲಿ ಪರಶುರಾಮ್ ಮೇಸ್ತ್ರಿ ಹತ್ಯೆ ಪ್ರಕರಣ ಸೇರಿದಂತೆ ಹಲವು ಪ್ರಕರಣದಲ್ಲಿ ಆರೋಪಿಯಾಗಿದ್ದ. 2016ರಲ್ಲಿ ಆಲಮೇಲ ಠಾಣಾ ಪೊಲೀಸರು ಪ್ರದೀಪ್ ಎಂಟಮಾನ್ ಮೇಲೆ ರೌಡಿಶೀಟರ್​ ಓಪನ್ ಮಾಡಿದ್ದರು.