ಮದುವೆಗೆ 500 ಜನ ಮಾತ್ರ, ನೈಟ್ ಕರ್ಫ್ಯೂ ಇಲ್ಲ: ರಾಜ್ಯ ಸರ್ಕಾರದ ಹೊಸ ಮಾರ್ಗಸೂಚಿ
ಬೆಂಗಳೂರು ಡಿಸೆಂಬರ್ 3: ರಾಜ್ಯ ರಾಜಧಾನಿಯಲ್ಲಿ ಓಮಿಕ್ರಾನ್ ವೈರಸ್ ಹರಡಿದ ಬೆನ್ನಲ್ಲೆ ಇಂದು ಸಿಎಂ ನೇತೃತ್ವದಲ್ಲಿ ಉನ್ನತ ಮಟ್ಟದ ಸಭೆ ನಡೆಸಲಾಗಿದೆ. ಸಭೆ ಬಳಿಕ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಚಿವ ಆರ್, ಅಶೋಕ್ ಹೊಸ ಮಾರ್ಗಸೂಚಿಗಳ ಬಗ್ಗೆ ವಿವರಿಸಿದರು.
ಬೆಂಗಳೂರಿನಲ್ಲಿ ಸಭೆ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಆರ್ ಅಶೋಕ್, " ಸಭೆಯಲ್ಲಿ ಸಿಎಂ, ಅಧಿಕಾರಿಗಳು ಮತ್ತು ಸಚಿವರ ಜೊತೆ ಸುಧೀರ್ಘ ಚರ್ಚೆ ಮಾಡಿದ್ದಾರೆ. ಸಭೆಯಲ್ಲಿ ಕೆಲ ನಿರ್ಧಾರಗಳನ್ನು ತೆಗೆದುಕೊಳ್ಳಲಾಗಿದೆ. ವಿಶ್ವದಲ್ಲಿ ಈವರೆಗೆ 400 ಪ್ರಕರಣಗಳು ಪತ್ತೆಯಾಗಿವೆ. ರಾಜ್ಯದಲ್ಲಿ ಶಾಲಾ-ಕಾಲೇಜುಗಳಲ್ಲಿ ಹೆಚ್ಚು ಪ್ರಕರಣಗಳು ಕಂಡು ಬರುತ್ತಿರುವುದರಿಂದ ಫೋಷಕರಿಗೆ ಎರಡು ಡೋಸ್ ಆಗಿದ್ದರೆ ಮಾತ್ರ ಅವರ ಮಕ್ಕಳಿಗೆ ಶಾಲಾ-ಕಾಲೇಜುಗಳಿಗೆ ಬರಲು ಅವಕಾಶ ನೀಡಲಾಗುತ್ತದೆ. ಯಾವುದೇ ಶಾಲೆಯಲ್ಲಿ ಸಮಾರಂಭ ಮಾಡುವಂತಿಲ್ಲ. ಜೊತೆಗೆ ಮಾಲ್, ಸಿನಿಮಾ ಮಂದಿರಗಳಿಗೆ ಎರಡು ಡೋಸ್ ಹಾಕಿಸಿಕೊಂಡವರಿಗೆ ಮಾತ್ರ ಪ್ರವೇಶಕ್ಕೆ ಅವಕಾಶ ನೀಡಲು ಸೂಚಿಸಲಾಗಿದೆ" ಎಂದು ಹೇಳಿದರು.
ಜೊತೆಗೆ ಆರೋಗ್ಯ ಇಲಾಖೆಗೆ ಸಿಎಂ ಸೂಚನೆ ಕೊಟ್ಟಿದ್ದಾರೆ. ಹಿಂದೆ ಕೊರೊನಾ ತೀವ್ರವಾಗಿದ್ದ ಸಮಯದಲ್ಲಿ ತೆಗೆದುಕೊಂಡ ಎಲ್ಲಾ ಕ್ರಮಗಳನ್ನು ತೆಗೆದುಕೊಳ್ಳಲು ಸಿದ್ಧವಾಗಿರಬೇಕು. ಐಸಿಯು, ಹೆಚ್ಚು ಬೆಡ್ ಗಳನ್ನು ಮತ್ತೆ ಸ್ಥಾಪಿಸಬೇಕು. ಹೆಚ್ಚಿನ ಆಕ್ಸಿಜನ್ ಕೂಡ ವ್ಯವಸ್ಥೆ ಮಾಡಲಾಗುತ್ತಿದೆ. ರಾಜ್ಯಾದ್ಯಂತ ಕಂಟ್ರೋಲ್ ರೂಂ ಮತ್ತೆ ಪ್ರಾರಂಭ ಮಾಡಲಾಗಿದೆ. ಅದಕ್ಕೆ ಬೇಕಾದ ಸಿಬ್ಬಂದಿ ವರ್ಗವನ್ನು ತೆಗೆದುಕೊಳ್ಳಲು ಮಾಡಲು ಸೂಚಿಸಲಾಗಿದೆ. ಅಗತ್ಯವಿರುವ ಔಷಧಿ ಖರೀದಿಗೂ ಸೂಚನೆ ಮಾಡಲಾಗಿದೆ" ಎಂದರು.
ಇನ್ನೂ ಕೆಲ ಮಾರ್ಗಸೂಚಿಗಳನ್ನು ಸೂಚಿಸಲಾಗಿದೆ. ಮದುವೆ ಸಮಾರಂಭಗಳಲ್ಲಿ ಐದು ನೂರು ಜನ ಮಾತ್ರ ಸೇರಬೇಕು. ವಿಮಾನ ನಿಲ್ದಾಣದಲ್ಲಿ ಟೆಸ್ಟಿಂಗ್ ಕಡ್ಡಾಯ ಮಾಡಲಾಗಿದೆ. ಪ್ರತಿನಿತ್ಯ ಒಂದು ಲಕ್ಷ ಪರೀಕ್ಷೆ ಮಾಡಲು ಸೂಚನೆ ನೀಡಲಾಗುತ್ತದೆ. ನೆಗೆಟಿವ್ ರಿಪೋರ್ಟ್ ಬಂದರೆ ಮಾತ್ರ ವಿಮಾನ ನಿಲ್ದಾಣದಲ್ಲಿ ಪ್ರವೇಶಕ್ಕೆ ಅವಕಾಶ ನೀಡಲಾಗುತ್ತದೆ. ಜೊತೆಗೆ ನೆಗೆಟಿವ್ ಬಂದರೆ ಮಾತ್ರ ಹೊರಗೆ ಕಳುಹಿಸಲಾಗುತ್ತದೆ.ಈವರೆಗೆ ಓಮಿಕ್ರಾನ್ ಸಾವಿನ ಪ್ರಕರಣಗಳು ಕಂಡುಬಂದಿಲ್ಲ' ಎಂದರು.
ಹೊಸ ವರ್ಷದ ಆಚರಣೆ ಬಗ್ಗೆ ಮುಂದಿನ ದಿನಗಳಲ್ಲಿ ಪರಿಸ್ಥಿತಿ ನೋಡಿ ಕ್ರಮ ಕೈಗೊಳ್ಳಲಾಗುವುದು. ಸದ್ಯಕ್ಕೆ ಯಾವುದೇ ನಿರ್ಧಾರ ಈ ಬಗ್ಗೆ ತೆಗೆದುಕೊಂಡಿಲ್ಲ. ಆಗುತ್ತಿರುವ ಬೆಳವಣಿಗೆಗಳನ್ನು ಅವಲೋಕಿಸಿ ನಂತರ ಸೂಕ್ತ ನಿರ್ಧಾರ ತೆಗೆದುಕೊಳ್ಳಲಾಗುವುದು ಎಂದು ಕಂದಾಯ ಸಚಿವ ಆರ್ ಅಶೋಕ ಹೇಳಿದ್ದಾರೆ.
ಬೆಳಗಾವಿ ಅಧಿವೇಶನ ನಡೆಯುತ್ತದೆ ಅದನ್ನು ಯಾವುದೇ ಕಾರಣಕ್ಕೂ ನಿಲ್ಲಿಸಲು ಸಾಧ್ಯವಿಲ್ಲ ಎಂದು ಸಿಎಂ ಹೇಳಿದ್ದಾರೆ ಎಂದರು. ಎರಡು ವರ್ಷದಿಂದ ಬೆಳಗಾವಿ ಅಧಿವೇಶನ ಮಾಡಿಲ್ಲ. ನಾವು ಮುಂಜಾಗೃತ ಕ್ರಮ ತೆಗೆದುಕೊಂಡು ಅಧಿವೇಶ ಮಾಡುತ್ತೇವೆ. ಬೇರೆ ಬೇರೆ ದೇಶಗಳಲ್ಲಿ ಬಂದಿದೆ. ಅವರೊಂದಿಗೆ ಸಂಪರ್ಕ ಮಾಡಿ ಯಾವ ರೀತಿ ಕ್ರಮ ಕೈಗೊಂಡಿದ್ದಾರೆಂದು ನೋಡಿ ನಂತರ ನಾವು ಕ್ರಮ ಕೈಗೊಳ್ಳುತ್ತೇವೆ. ಮುಖ್ಯಮಂತ್ರಿಗಳು ಕೇಂದ್ರ ಆರೋಗ್ಯ ಸಚಿವರ ಜೊತೆ ನಿರಂತರ ಸಂಪರ್ಕದಲ್ಲಿದ್ದಾರೆ. ಆರ್ಟಿಪಿಸಿಆರ್‌ಗೆ 500 ರೂ. ಇದೆ. ಆದರೆ, ಶೀಘ್ರ ವರದಿಗಾಗಿ 3000 ರೂ. ನೀಡಬೇಕು. ಸದ್ಯಕ್ಕೆ ಯಾವುದೇ ನೈಟ್ ಕರ್ಫ್ಯೂ ಇಲ್ಲ. ಇದರ ಬಗ್ಗೆ ಮುಂದಿನ ದಿನಗಳಲ್ಲಿ ಪರಿಸ್ಥಿತಿ ನೋಡಿ ನಿರ್ಧಾರ ಕೂಗೊಳ್ಳಲಾಗುತ್ತದೆ. ಸೋಂಕಿನ ಕುರಿತು ಅಧ್ಯಯನ ಬಂದಿಲ್ಲ. ಈ ಸೋಂಕು ತೀವ್ರತೆ ಇಲ್ಲ ಎಂದರು.
ಸರ್ಕಾರ ಹೊಸ ನಿಯಮಗಳನ್ನು ಬಗ್ಗೆ ಜನ ತೀವ್ರ ವಿರೋಧ ವ್ಯಕ್ತಪಡಿಸಿದ್ದಾರೆ. ರಾಜಕೀಯ ಕಾರ್ಯಕ್ರಮದಲ್ಲಿ ಹಾಗಾದ್ರೆ ಕೊರೊನಾ ಹರಡೋದಿಲ್ವಾ ಎನ್ನುವ ಪ್ರಶ್ನೆ ಉದ್ಭವಿಸಿದೆ. ಆದರೆ ಸರ್ಕಾರಿ ಕಾರ್ಯಕ್ರಮಗಳಿಗೆ, ಜನಪ್ರತಿನಿಧಿಗಳು ಮಾಡುವ ಕಾರ್ಯಕ್ರಮಗಳಿಗೆ ಯಾವುದೇ ನಿರ್ಬಂಧನೆ ಇಲ್ಲ ಎಂದು ಕೆಲ ಜನ ಪ್ರಶ್ನೆ ಮಾಡಿದ್ದಾರೆ. ವಿಧಾನ ಪರಿಷತ್ ಚುನಾವಣೆಗೆ ಕಾರ್ಯಕ್ರಮಗಳಿಗೆ ಈ ನಿಯಮ ಅನ್ವಯಿಸುವುದಿಲ್ಲವಾ ಎನ್ನುವ ಪ್ರಶ್ನೆಗಳು ಜನಸಾಮಾಜ್ಯರಲ್ಲಿ ಹುಟ್ಟಿಕೊಂಡಿವೆ.