ಲೈಂಗಿಕವಾಗಿ ಹಿಂಸಿಸುತ್ತಿದ್ದ ಗಂಡನನ್ನೇ ಕೊಂದ ಕೇಸ್ಗೆ ಸ್ಫೋಟಕ ತಿರುವು: ಇವಳ ಆ ಮಾತು ಕೇಳಿದ್ರೆ ಬೆಚ್ಚಿಬೀಳ್ತೀರಿ
ನೆಲಮಂಗಲ: ನನ್ನ ಗಂಡ ನಿತ್ಯ ಲೈಂಗಿಕ ಕಿರುಕುಳ ಕೊಡುತ್ತಿದ್ದ. ಆ ಹಿಂಸೆ ಸಹಿಸಲಾಗದೆ ಕೋಪ ಬಂದು ಆತನನ್ನು ಮುಗಿಸಿಬಿಟ್ಟೆ ಎಂದು ತಡರಾತ್ರಿ ಮಾದನಾಯಕನಹಳ್ಳಿ ಪೊಲೀಸ್ ಠಾಣೆಗೆ ಬಂದು ಶರಣಾಗಿದ್ದ ಮಹಿಳೆ ಕೇಸ್ಗೆ ಸ್ಫೋಟಕ ತಿರುವು ಸಿಕ್ಕಿದೆ.
ಬೆಂಗಳೂರು ಉತ್ತರ ತಾಲೂಕು ದಾಸನಪುರ ಹೋಬಳಿಯ ಹಾರೋಕ್ಯಾತನಹಳ್ಳಿ ನಿವಾಸಿ, ರಿಯಲ್ ಎಸ್ಟೆಟ್ ಉದ್ಯಮಿ ಸ್ವಾಮಿರಾಜ್(46) ನ.6 ರ ರಾತ್ರಿ ತನ್ನ ಪ್ರೇಯಸಿ ನೇತ್ರಾವತಿ ಎಂಬಾಕೆಯಿಂದಲೇ ಕೊಲೆಯಾಗಿದ್ದ. ಆಂಧ್ರಪ್ರದೇಶ ಮೂಲದ ಸ್ವಾಮಿರಾಜ್ಗೆ 18 ವರ್ಷಗಳ ಹಿಂದೆ ಬೇರೊಬ್ಬಳೊಂದಿಗೆ ಮದುವೆ ಆಗಿತ್ತು. ದಂಪತಿಗೆ 2 ಮಕ್ಕಳಿವೆ. ಆದರೂ ಬ್ಯೂಟಿಷಿಯನ್ ಕೆಲಸ ಮಾಡುತ್ತಿದ್ದ ನೇತ್ರಾವತಿ ಜತೆ 15 ವರ್ಷಗಳಿಂದ ಸ್ವಾಮಿರಾಜ್ ಅಕ್ರಮ ಸಂಬಂಧ ಹೊಂದಿದ್ದ. 3 ವರ್ಷದ ಹಿಂದೆ ಮೊದಲ ಪತ್ನಿಗೆ ಗಂಡನ ಅಕ್ರಮ ವಿಚಾರ ತಿಳಿದು ಮನೆಯಲ್ಲಿ ಜಗಳವಾಗಿತ್ತು. ಈ ವೇಳೆ ಸ್ವಾಮಿರಾಜ್ ಕುಟುಂಬ ತೊರೆದು ನೇತ್ರಾವತಿಗೆ ತಾಳಿ ಕಟ್ಟಿ ಆಕೆ ಜತೆ ಹಾರೋಕ್ಯಾತನಹಳ್ಳಿಯಲ್ಲೇ ವಾಸವಿದ್ದ. ಸ್ವಾಮಿರಾಜ್ನ ಮೊದಲ ಪತ್ನಿ ಹಾಗೂ ಇಬ್ಬರು ಮಕ್ಕಳು ತುಮಕೂರಿನಲ್ಲಿ ವಾಸವಿದ್ದರು. ಸ್ವಾಮಿರಾಜ್, ನೇತ್ರಾವತಿಗೆ ಕೋಟ್ಯಂತರ ಮೌಲ್ಯದ ಬಂಗಲೆ, ಕಾರು, ನಿವೇಶನ, ಚಿನ್ನಾಭರಣವನ್ನೂ ಕೊಡಿಸಿದ್ದ.
ಮೊದಲ ಪತ್ನಿ ಮತ್ತು ಇಬ್ಬರು ಮಕ್ಕಳಿದ್ದರೂ ಅವರನ್ನೆಲ್ಲ ತೊರೆದು ನೇತ್ರಾವತಿ ಜತೆ ಸ್ವಾಮಿರಾಜ್ ವಾಸವಿದ್ದ. ಪ್ರೇಯಸಿಗೆ ಐಷಾರಾಮಿ ಜೀವನ ಕೊಟ್ಟಿದ್ದ. ಆದಾಗ್ಯೂ ನೇತ್ರಾವತಿಗೆ ಬೇರೊಬ್ಬನ ಮೇಲೆ ಮನಸ್ಸಾಗಿತ್ತು. ಬೆಂಗಳೂರಿನ ಕೆ.ಆರ್.ಪುರದ ಬಿದರಹಳ್ಳಿ ನಿವಾಸಿ ಭರತ್ಗೆ ನೇತ್ರಾವತಿ ವರ್ಷದ ಹಿಂದೆ ಟಿಕ್ಟಾಕ್ನಿಂದ ಪರಿಚಯವಾಗಿದ್ದಳು. ಪರಿಚಯ ಪ್ರೀತಿಗೆ ತಿರುಗಿತ್ತು. ಸ್ವಾಮಿರಾಜ್ನ ಕಣ್ತಪ್ಪಿಸಿ ಇಬ್ಬರೂ ಭೇಟಿಯಾಗುತ್ತಿದ್ದರು. ಇಬ್ಬರ ಅಕ್ರಮ ಸಂಬಂಧ ವಿಷಯ ತಿಳಿದ ಸ್ವಾಮಿರಾಜ್, ನೇತ್ರಾವತಿಗೆ ಬುದ್ದಿ ಹೇಳಿದ್ದ. ಇದನ್ನು ಕೇಳದ ಆಕೆ ಚಾಳಿ ಮುಂದುವರಿಸಿದ್ದಳು. ಇದೇ ವಿಚಾರವಾಗಿ ನ.6ರಂದು ನೇತ್ರಾವತಿ ಮತ್ತು ಸ್ವಾಮಿರಾಜ್ ನಡುವೆ ಗಲಾಟೆ ನಡೆದಿದ್ದು, ಭರತ್ ಜತೆಗಿನ ಅಕ್ರಮ ಸಂಬಂಧಕ್ಕೆ ಅಡ್ಡಿಯಾದ ಸ್ವಾಮಿರಾಜ್ನ ತಲೆಗೆ ಹೊಡೆದು ಕೊಲೆ ಮಾಡಿ ಪೊಲೀಸ್ ಠಾಣೆಗೆ ಬಂದು ಶರಣಾಗಿದ್ದಳು. ಆದರೆ, 'ನನ್ನ ಗಂಡನ ಲೈಂಗಿಕ ಕಿರುಕುಳ ಕೊಡುತ್ತಿದ್ದ. ಹಾಗಾಗಿ ಕೊಂದು ಬಿಟ್ಟೆ' ಎಂದು ನೇತ್ರಾವತಿ ಸುಳ್ಳು ಕಥೆ ಕಟ್ಟಿದ್ದಳು. ತನಿಖೆ ಕೈಗೊಂಡ ವೃತ್ತ ನಿರೀಕ್ಷಕ ಬಿ.ಎಸ್. ಮಂಜುನಾಥ್ ನೇತೃತ್ವದ ತಂಡ, ನೇತ್ರಾವತಿಯ ಪ್ರಿಯಕರ ಭರತ್(32) ಮತ್ತು ಆತನ ಸಹಚರ ಸುಂಕದಕಟ್ಟೆ ನಿವಾಸಿ ವಿಜಯ್ (25) ಎಂಬುವರನ್ನ ಬಂಧಿಸಿದೆ. ಇದಾದ ಬಳಿಕ ನೇತ್ರಾವತಿ, ಹೇಳಿದ್ದ ಕಥೆಯೇ ಬೇರೆ. ನನ್ನ ಗಂಡ ಸಾಕು ಮಗಳ ಮೇಲೆಯೇ ಕಣ್ಣು ಹಾಕಿದ್ದ. ಅದಕ್ಕೆ ಕೊಂದು ಬಿಟ್ಟೆ ಎಂದಿದ್ದಾಳೆ.
ನನ್ನ ಸಾಕು ಮಗಳ ಮೇಲೆ ಸ್ವಾಮಿರಾಜ್ ಕಣ್ಣು ಹಾಕಿದ್ದ. ಭರತ್ ಮತ್ತು ಆತನ ಸಂಬಂಧಿ ವಿಜಯ್ ಜತೆ ಸೇರಿ ಕೊಲೆಗೆ ಸಂಚು ರೂಪಿಸಿದೆವು. ನ.6ರಂದು ಮನೆಯ ಮುಂಭಾಗದಲ್ಲಿ ವಿಜಯ್ನನ್ನು ಕಾವಲಿಗೆ ನಿಲ್ಲಿಸಿ, ಸ್ವಾಮಿರಾಜ್ ಮಲಗಿದ್ದ ವೇಳೆ ಕಬ್ಬಿಣದ ರಿಂಚ್ನಿಂದ ಹಲ್ಲೆ ಮಾಡಿ ಕೊಲೆ ಮಾಡಿದೆ. ಬಳಿಕ ವಿಜಯ್ಗೆ 50 ಸಾವಿರ ರೂ. ನೀಡಿ ವಕೀಲರನ್ನು ಭೇಟಿಯಾಗಿ ಜಾಮೀನು ಪಡೆದುಕೊಳ್ಳುವಂತೆ ಹೇಳಿದೆ. ಭರತ್ ಹಾಗೂ ವಿಜಯ್ನನ್ನು ಪೊಲೀಸರಿಂದ ತಪ್ಪಿಸಬೇಕೆಂಬ ಕಾರಣಕ್ಕೆ ಠಾಣೆಗೆ ಬಂದು ತಾನೇ ಶರಣಾಗಿದ್ದಾಗಿ ತನಿಖೆ ವೇಳೆ ನೇತ್ರಾವತಿ ಒಪ್ಪಿಕೊಂಡಿದ್ದಾಳೆ.