ಸಂಪುಟದಲ್ಲಿ ಉನ್ನತ ಹುದ್ದೆಗಾಗಿ ಶ್ರೀರಾಮುಲು ಕಸರತ್ತು

ಸಂಪುಟದಲ್ಲಿ ಉನ್ನತ ಹುದ್ದೆಗಾಗಿ ಶ್ರೀರಾಮುಲು ಕಸರತ್ತು

ಬೆಂಗಳೂರು,ಜು.17- ರಾಜ್ಯದಲ್ಲಿ ಯಾವುದೇ ಸಂದರ್ಭದಲ್ಲಿ ಸಚಿವ ಸಂಪುಟ ಪುನಾರಚನೆ ಸಾಧ್ಯತೆ ಇರುವುದರಿಂದ ಸಂಪುಟದಲ್ಲಿ ಉನ್ನತ ಹುದ್ದೆ ಗಿಟ್ಟಿಸಲು ಸಮಾಜ ಕಲ್ಯಾಣ ಇಲಾಖೆಯ ಸಚಿವ ಬಿ.ಶ್ರೀರಾಮುಲು ಕಸರತ್ತು ನಡೆಸುತ್ತಿದ್ದಾರೆ. ನಿನ್ನೆ ಮುಖ್ಯಮಂತ್ರಿ ಯಡಿಯೂರಪ್ಪ ಅವರು ವಿಶೇಷ ವಿಮಾನದಲ್ಲಿ ದೆಹಲಿಗೆ ಪ್ರಯಾಣ ಬೆಳೆಸುತ್ತಿದ್ದಂತೆ, ಸಚಿವರು ತಮ್ಮ ಟೆಂಪಲ್ ರನ್ ಆರಂಭಿಸಿದ್ದಾರೆ.

ಉಪಮುಖ್ಯಮಂತ್ರಿ ಹುದ್ದೆಯ ಆಕಾಂಕ್ಷಿಯಾಗಿರುವ ಶ್ರೀರಾಮುಲು ಇದಕ್ಕಾಗಿ ತಮ್ಮ ಪ್ರಯತ್ನಗಳನ್ನು ಮಾಡುತ್ತಲೇ ಇದ್ದಾರೆ. ಇದಕ್ಕಾಗಿ ದೇವಾಲಯಗಳ ಸುತ್ತಾಟವೂ ಒಂದಾಗಿದೆ. ನಿನ್ನೆ ಕೇರಳದ ಶಬರಿಮಲೈ ದೇವಾಲಯಕ್ಕೆ ಭೇಟಿ ನೀಡಿರುವ ಶ್ರೀರಾಮುಲು, ಸ್ವಾಮಿಯೇ ಶರಣಂ ಅಯ್ಯಪ್ಪ ಎಂದು ಅಯ್ಯಪ್ಪನಿಗೆ ವಿಶೇಷ ಪೂಜೆ ಸಲ್ಲಿಸಿದ್ದಾರೆ.

ಅಯ್ಯಪ್ಪನ ದರ್ಶನ ಪಡೆದ ಬಳಿಕ ಸ್ಥಳೀಯ ಬಿಜೆಪಿ ಮುಖಂಡರನ್ನು ಭೇಟಿ ಮಾಡಿದ್ದು, ಉಪ-ಮುಖ್ಯಮಂತ್ರಿ ಹುದ್ದೆಗಾಗಿ ಶ್ರೀರಾಮುಲು ಹಲವರ ಎಡತಾಕುತ್ತಿದ್ದಾರೆಯೇ ಎಂಬ ಮಾತುಗಳು ಕೇಳಿಬರುತ್ತಿವೆ. ಅಯ್ಯಪ್ಪ ದರ್ಶನ ಪಡೆದರೇ, ತಮ್ಮ ಇಷ್ಟಾರ್ಥಗಳು ಈಡೇರುತ್ತದೆ ಎಂಬ ನಂಬಿಕೆಯಿಂದ ಶಬರಿಮಲೈ ದೇವಸ್ಥಾನಕ್ಕೆ ಶ್ರೀರಾಮುಲು ಭೇಟಿ ನೀಡಿದ್ದಾರೆ ಎಂದು ಹೇಳಲಾಗುತ್ತಿದೆ.