ಏಕದಿನ ಕ್ರಿಕೆಟ್ನಲ್ಲಿ ಬೃಹತ್ ಮೈಲುಗಲ್ಲು ತಲುಪಿದ ಶಕೀಬ್ ಅಲ್ ಹಸನ್; ಈ ಸಾಧನೆ ಮಾಡಿದ 3ನೇ ಕ್ರಿಕೆಟಿಗ
ಶನಿವಾರ, ಮಾರ್ಚ್ 18ರಂದು ಸಿಲ್ಹೆಟ್ ಅಂತಾರಾಷ್ಟ್ರೀಯ ಕ್ರಿಕೆಟ್ ಸ್ಟೇಡಿಯಂನಲ್ಲಿ ಐರ್ಲೆಂಡ್ ವಿರುದ್ಧ ನಡೆದ ಮೊದಲ ಏಕದಿನ ಪಂದ್ಯದಲ್ಲಿ ಬಾಂಗ್ಲಾದೇಶ ಕ್ರಿಕೆಟ್ ತಂಡದ ಆಲ್ರೌಂಡರ್ ಶಕೀಬ್ ಅಲ್ ಹಸನ್ ಅವರು ಏಕದಿನ ಕ್ರಿಕೆಟ್ನಲ್ಲಿ ಬೃಹತ್ ಮೈಲುಗಲ್ಲು ಸ್ಥಾಪಿಸಿದರು.
ಶಕೀಬ್ ಅಲ್ ಹಸನ್ ಅವರು ಏಕದಿನ ಅಂತಾರಾಷ್ಟ್ರೀಯ ಪಂದ್ಯಗಳಲ್ಲಿ 7000 ರನ್ ಮತ್ತು 300 ವಿಕೆಟ್ಗಳ ಸಾಧನೆ ಮಾಡಿದ ವಿಶ್ವದ ಮೂರನೇ ಕ್ರಿಕೆಟಿಗ ಎನಿಸಿಕೊಂಡರು. ಬಾಂಗ್ಲಾದೇಶ ತಂಡದ ಬ್ಯಾಟಿಂಗ್ ಇನಿಂಗ್ಸ್ನ 20ನೇ ಓವರ್ನಲ್ಲಿ ಶಕೀಬ್ ಅಲ್ ಹಸನ್ 24 ರನ್ಗಳನ್ನು ಗಳಿಸುತ್ತಿದ್ದಂತೆಯೇ ಈ ಸಾಧನೆ ತಲುಪಿದರು.
ಶಕೀಬ್ ಅಲ್ ಹಸನ್ ಹೊರತಾಗಿ ಈ ಸಾಧನೆ ಮಾಡಿದ ಮೊದಲ ಇಬ್ಬರು ಆಟಗಾರೆಂದರೆ, ಶ್ರೀಲಂಕಾದ ಲೆಜೆಂಡ್ ಸನತ್ ಜಯಸೂರ್ಯ ಮತ್ತು ಪಾಕಿಸ್ತಾನದ ಮಾಜಿ ನಾಯಕ ಶಾಹಿದ್ ಅಫ್ರಿದಿ.
ಮತ್ತೊಂದು ವಿಶೇಷವೆಂದರೆ, ಶಕೀಬ್ ಅಲ್ ಹಸನ್ ಏಕದಿನ ಕ್ರಿಕೆಟ್ನಲ್ಲಿ ಬಾಂಗ್ಲಾದೇಶದ ನಾಯಕ ತಮೀಮ್ ಇಕ್ಬಾಲ್ ನಂತರ ಎರಡನೇ ಅತಿ ಹೆಚ್ಚು ರನ್ ಗಳಿಸಿದ ಆಟಗಾರರೆನಿಸಿದರು. ತಮೀಮ್ ಇಕ್ಬಾಲ್ 50 ಓವರ್ಗಳ ಮಾದರಿಯಲ್ಲಿ ಇದುವರೆಗೆ 8146 ರನ್ ಗಳಿಸಿದ್ದಾರೆ.
ಇಂಗ್ಲೆಂಡ್ ವಿರುದ್ಧ ಬಾಂಗ್ಲಾದೇಶದ ಹಿಂದಿನ ಏಕದಿನ ಸರಣಿ ವೇಳೆ 35 ವರ್ಷದ ಆಲ್ರೌಂಡರ್ ಶಕೀಬ್ ಅಲ್ ಹಸನ್ ಅವರು 300 ವಿಕೆಟ್ಗಳ ಸಾಧನೆ ಮಾಡಿದ್ದರು.
ಇಂಗ್ಲೆಂಡ್ ವಿರುದ್ಧ ಚಟ್ಟೋಗ್ರಾಮ್ನಲ್ಲಿ ನಡೆದ ಮೂರನೇ ಏಕದಿನ ಪಂದ್ಯದಲ್ಲಿ ರೆಹಾನ್ ಅಹ್ಮದ್ರನ್ನು ಔಟ್ ಮಾಡುವ ಮೂಲಕ ತಮ್ಮ 4 ವಿಕೆಟ್ಗಳೊಂದಿಗೆ 300 ವಿಕೆಟ್ಗಳ ಸಾಧನೆ ಮಾಡಿದರು. ಈ ಮೂಲಕ ಶ್ರೀಲಂಕಾದ ಸನತ್ ಜಯಸೂರ್ಯ ಮತ್ತು ನ್ಯೂಜಿಲೆಂಡ್ನ ಡೇನಿಯಲ್ ವೆಟ್ಟೋರಿ ನಂತರ ಈ ಸಾಧನೆ ಮಾಡಿದ ಮೂರನೇ ಎಡಗೈ ಸ್ಪಿನ್ನರ್ ಎನಿಸಿಕೊಂಡರು.
ಬಾಂಗ್ಲಾದೇಶದ ಆಲ್ರೌಂಡರ್ ಶಕೀಬ್ ಅಲ್ ಹಸನ್ ಅವರು ಟೆಸ್ಟ್ ಕ್ರಿಕೆಟ್ನಲ್ಲಿ 231 ವಿಕೆಟ್ ಮತ್ತು ಟಿ20 ಪಂದ್ಯಗಳಲ್ಲಿ 128 ವಿಕೆಟ್ಗಳನ್ನು ಪಡೆಯುವ ಮೂಲಕ ಬಾಂಗ್ಲಾದೇಶ ಅತಿ ಹೆಚ್ಚು ವಿಕೆಟ್ ಪಡೆದ ಬೌಲರ್ ಆಗಿದ್ದಾರೆ.
ಏಕದಿನ ಕ್ರಿಕೆಟ್ನಲ್ಲಿ ಬಾಂಗ್ಲಾದೇಶ ತಂಡದ ದಾಖಲೆ ಮೊತ್ತ
ಬಾಂಗ್ಲಾದೇಶ ಮತ್ತು ಐರ್ಲೆಂಡ್ ಪಂದ್ಯದ ಕುರಿತು ಹೇಳುವುದಾದರೆ, ಟಾಸ್ ಗೆದ್ದ ಐರ್ಲೆಂಡ್ ನಾಯಕ ಆಂಡ್ರ್ಯೂ ಬಲ್ಬಿರ್ನಿ ಮೊದಲು ಬಾಂಗ್ಲಾದೇಶವನ್ನು ಬ್ಯಾಟಿಂಗ್ಗೆ ಆಹ್ವಾನಿಸಿದರು.
ಶಕೀಬ್ ಅಲ್ ಹಸನ್ ಮತ್ತು ತೌಹಿದ್ ಹೃದೋಯ್ ಅವರ ಅದ್ಭುತ ಜೊತೆಯಾಟದ ನೆರವಿನಿಂದ ಆತಿಥೇಯ ಬಾಂಗ್ಲಾದೇಶ ತಂಡ 50 ಓವರ್ಗಳಲ್ಲಿ 8 ವಿಕೆಟ್ಗೆ 338 ರನ್ ದಾಖಲಿಸಿತು.
ಶಕೀಬ್ ಅಲ್ ಹಸನ್ ಮತ್ತು ತೌಹಿದ್ ಹೃದೋಯ್ ಅವರ 135 ರನ್ಗಳ ಶತಕದ ಜೊತೆಯಾಟ ತಮ್ಮ ತಂಡ ಏಕದಿನ ಕ್ರಿಕೆಟ್ ಇತಿಹಾಸದಲ್ಲಿ ಅತ್ಯಧಿಕ ರನ್ ಗಳಿಸಲು ನೆರವಾಯಿತು.
ಈ ಹಿಂದೆ 2019ರಲ್ಲಿ ನಡೆದ ಐಸಿಸಿ ಏಕದಿನ ವಿಶ್ವಕಪ್ನಲ್ಲಿ ಬಾಂಗ್ಲಾದೇಶ ತಂಡವು ಆಸ್ಟ್ರೇಲಿಯಾ ವಿರುದ್ಧ 8 ವಿಕೆಟ್ಗೆ 333 ರನ್ ಗಳಿಸಿದ್ದು ಈವರೆಗಿನ ಅತ್ಯಧಿಕ ಮೊತ್ತವಾಗಿತ್ತು.
ಶಕೀಬ್ ಅಲ್ ಹಸನ್ 89 ಎಸೆತಗಳಲ್ಲಿ 93 ರನ್ ಬಾರಿಸಿದರೆ, ತೌಹಿದ್ ಹೃದೋಯ್ 85 ಎಸೆತಗಳಲ್ಲಿ 92 ರನ್ ಗಳಿಸಿದರು. ಇದು ಶಕೀಬ್ ಅಲ್ ಹಸನ್ ಅವರ 53ನೇ ಏಕದಿನ ಅರ್ಧಶತಕ ಮತ್ತು ತವರಿನಲ್ಲಿ 25ನೇ ಅರ್ಧಶತಕವಾಗಿದೆ.
ಐರ್ಲೆಂಡ್ ಪರ ಗ್ರಹಾಂ ಹ್ಯೂಮ್ ನಾಲ್ಕು ವಿಕೆಟ್ ಕಬಳಿಸಿದರೆ, ಮಾರ್ಕ್ ಅಡೈರ್, ಆಂಡಿ ಮೆಕ್ಬ್ರೈನ್ ಮತ್ತು ಕರ್ಟಿಸ್ ಕ್ಯಾಂಫರ್ ತಲಾ ಒಂದೊಂದು ವಿಕೆಟ್ ಪಡೆದರು.