ಕಾಗಿಣಾ ನದಿಯಿಂದ ಬೆಣ್ಣೆತೋರಾ ಜಲಾಶಯ ತುಂಬಿಸುವ 365 ಕೋಟಿ ರೂ. ಯೋಜನೆಗೆ ಸಂಪುಟ ಅಸ್ತು : ಸಚಿವ ಮುರುಗೇಶ ನಿರಾಣಿ
ಕಲಬುರಗಿ : ಕಲಬುರಗಿ ಮಹಾನಗರಕ್ಕೆ ಕುಡಿಯುವ ನೀರು ಪೂರೈಕೆಗೆ ಭೀಮಾ ಮತ್ತು ಕಾಗಿಣಾ ನದಿಗಳ ಸಂಗಮವಾದ ಚಿತ್ತಾಪೂರ ತಾಲೂಕಿನ ಹೊನಗುಂಟಾ ಗ್ರಾಮದ ಕಾಗಿಣಾ ನದಿಯಿಂದ ನೀರೆತ್ತಿ ಬೆಣ್ಣೆತೋರಾ ಜಲಾಶಯಕ್ಕೆ ತುಂಬಿಸುವ 365 ಕೋಟಿ ರೂ. ಮೊತ್ತದ ಯೋಜನಾ ವರದಿಗೆ ಸಂಪುಟ ಅಸ್ತು ಎಂದಿದಲ್ಲದೆ ಮೊದಲನೇ ಹಂತದ ಕಾಮಗಾರಿಗೆ ಟೆಂಡರ್ ಕರೆಯಲು ಸಹ ಒಪ್ಪಿಗೆ ಸೂಚಿಸಿದೆ ಎಂದು ರಾಜ್ಯದ ಬೃಹತ್ ಮತ್ತು ಮಧ್ಯಮ ಕೈಗಾರಿಕೆ ಸಚಿವರು ಹಾಗೂ ಕಲಬುರಗಿ ಜಿಲ್ಲಾ ಉಸ್ತುವಾರಿ ಸಚಿವ ಡಾ.
ಕಲಬುರಗಿ ನಗರದ ಜಿಲ್ಲಾ ಪೊಲೀಸ್ ಪರೇಡ್ ಮೈದಾನದಲ್ಲಿ ಗುರುವಾರ 74ನೇ ಗಣರಾಜ್ಯೋತ್ಸವ ದಿನಾಚರಣೆ ಅಂಗವಾಗಿ ರಾಷ್ಟ್ರ ಧ್ವಜಾರೋಹಣ ನೆರವೇರಿಸಿದ ನಂತರ ವಿವಿಧ 11 ತುಕಡಿಗಳಿಂದ ಗೌರವ ವಂದನೆ ಸ್ವೀಕರಿಸಿ ಅವರು ಮಾತನಾಡಿದರು.
ಕಾಗಿಣಾ ನದಿಯ ಬಲದಂಡೆಯಲ್ಲಿ ಜಾಕ್ವೆಲ್-ಕಂ-ಪಂಪ್ ಹೌಸ್ ನಿರ್ಮಿಸಿ, 1.624 ಟಿ.ಎಂ.ಸಿ ನೀರನ್ನೆತ್ತಿ ಬೆಣ್ಣೆತೋರಾ ಜಲಾಶಯಕ್ಕೆ ತುಂಬಿಸುವ ಯೋಜನಾ ವರದಿಗೆ ಸಚಿವ ಸಂಪುಟ ಆಡಳಿತಾತ್ಮಕ ಅನುಮೋದನೆ ನೀಡಿದೆ. ಈ ಯೋಜನೆ ಎರಡು ಹಂತಗಳಲ್ಲಿ ಅಂದರೆ 1ನೇ ಹಂತದಲ್ಲಿ 88.69 ಕೋಟಿ ರೂ. ಹಾಗೂ 2ನೇ ಹಂತದಲ್ಲಿ 276.31 ಕೋಟಿ ರೂ.ಗಳಲ್ಲಿ ಕೈಗೊಳ್ಳಲಾಗುತ್ತಿದೆ ಎಂದರು.
ಚಿಂಚೋಳಿ ತಾಲ್ಲೂಕಿನ ಐನಾಪುರ ಮತ್ತು ಇತರೆ 17 ಗ್ರಾಮಗಳ ಸುಮಾರು 3,710 ಹೆಕ್ಟೇರ್ ಪ್ರದೇಶಕ್ಕೆ ನೀರಾವರಿ ಸೌಲಭ್ಯ ಕಲ್ಪಿಸುವ ಎರಡು ಹಂತಗಳ ಯೋಜನೆಯ ಒಟ್ಟು 204.10 ಕೋಟಿ ರೂ. ಮೊತ್ತದ ಐನಾಪೂರ ಏತ ನೀರಾವರಿ ಯೋಜನೆಯ ವಿವರವಾದ ಯೋಜನಾ ವರದಿಗೆ ಸಚಿವ ಸಂಪುಟ ಆಡಳಿತಾತ್ಮಕ ಅನುಮೋದನೆ ನೀಡಿದಲ್ಲದೆ ಮೊದಲನೇ ಹಂತದ 125.25 ಕೋಟಿ ರೂ. ಕಾಮಗಾರಿಗಳಿಗೆ ಟೆಂಡರ್ ಪ್ರಕ್ರಿಯೆ ಪ್ರಾರಂಭಿಸಲು ಮತ್ತು ಭೋರಿ ನದಿಯಿಂದ ಆಳಂದ ತಾಲೂಕಿನ 8 ಕೆರಗಳಿಗೆ ಪೈಪ್‍ಲೈನ್ ಮೂಲಕ ನೀರು ತುಂಬಿಸುವ 49.50 ಕೋಟಿ ರೂ. ಮೊತ್ತದ ವಿವರವಾದ ಯೋಜನಾ ಡಿ.ಪಿ.ಆರ್.ಗೂ ಸಹ ಸಚಿವ ಸಂಪುಟವು ಆಡಳಿತಾತ್ಮಕ ಅನುಮೋದನೆ ನೀಡುವ ಮೂಲಕ ಈ ಭಾಗದಲ್ಲಿ ನೀರಾವರಿ ಯೋಜನೆಗಳಿಗೆ ಹೆಚ್ಚಿನ ಆದ್ಯತೆ ನೀಡಲಾಗಿದೆ ಎಂದರು.
1947ರಲ್ಲಿ ಸ್ವಾತಂತ್ರ್ಯ ಪಡೆದಾಗ ನಮ್ಮದೆಯಾದ ಸಂವಿಧಾನ ಇರಲಿಲ್ಲ. ಅಪಾರ ಪಾಂಡಿತ್ಯ ಮತ್ತು ಹಲವಾರು ದೇಶಗಳ ಸಂವಿಧಾನಗಳನ್ನು ಆಳವಾಗಿ ಅಧ್ಯಯನ ಮಾಡಿದ್ದ ಡಾ. ಬಿ.ಆರ್.ಅಂಬೇಡ್ಕರ್ ಅವರು ಭಾರತೀಯ ಸಮಾಜಕ್ಕೆ ಪೂರಕವಾಗುವ ಉತ್ತಮ ಅಂಶಗಳನ್ನು ಸಂವಿಧಾನ ರೂಪದಲ್ಲಿ ನೀಡಿದ್ದಾರೆ. ಭಿನ್ನತೆಯಲ್ಲಿ ಏಕತೆ, ನಮ್ಮ ಸಂವಿಧಾನ ಅತ್ಯಂತ ವಿಭಿನ್ನವಾದುದು. ನಮ್ಮ ಸಂವಿಧಾನ, ಪ್ರಜಾತಂತ್ರ ವ್ಯವಸ್ಥೆ ವಿಶ್ವಕ್ಕೆ ಮಾದರಿಯಾಗಿದೆ. ಸಾರ್ವಭೌಮ ರಾಷ್ಟ್ರ ಘೋಷಿಸಿದ ಸುದಿನ ಇದಾಗಿದೆ. ಇದರ ಶ್ರೇಯಸ್ಸು ಸಂವಿಧಾನ ಶಿಲ್ಪಿಗೆ ಸಲ್ಲುತ್ತದೆ ಎಂದು ಸಂವಿಧಾನ ಪಿತಾಮಹನ ಕೊಡುಗೆಯನ್ನು ಸ್ಮರಿಸಿದ ಸಚಿವ ಡಾ.ಮುರುಗೇಶ ನಿರಾಣಿ ಅವರು ಸಂವಿಧಾನದ ಪೀಠಿಕೆಯಲ್ಲಿ ತಿಳಿಸಿರುವಂತೆ ಸಮಾನತೆ, ಸಾಮಾಜಿಕ ನ್ಯಾಯ, ಭಾತೃತ್ವ ಭಾವನೆ, ಸಹಬಾಳ್ವೆಯೊಂದಿಗೆ ಮುನ್ನಡೆಯೋಣ. ನವ ಭಾರತ ನಿರ್ಮಾಣಕ್ಕೆ ಸ್ವಾವಲಂಬಿ ನವ ಕರ್ನಾಟಕ ರಾಜ್ಯವನ್ನು ನಿರ್ಮಿಸೋಣ ಎಂದು ಕರೆ ನೀಡಿದರು.