ಕಲ್ಯಾಣ ಕರ್ನಾಟಕ ಅಭಿವೃದ್ಧಿಗೆ ಹೆಚ್ಚಿನ ಅನುದಾನ ನೀಡಲು ಬದ್ಧ: ಮುಖ್ಯಮಂತ್ರಿ ಯಡಿಯೂರಪ್ಪ

ಕಲಬುರಗಿ: ಹೈದರಾಬಾದ್ ಕರ್ನಾಟಕ ಭಾಗಕ್ಕೆ ಕಲ್ಯಾಣ ಕರ್ನಾಟಕ ಎಂದು ಮರು ನಾಮಕರಣ ಮಾಡಿದ ತೃಪ್ತಿ ಭಾವನೆ ಮಾತ್ರ ಹೊಂದಿಲ್ಲ. ಇದಕ್ಕೆ ತಕ್ಕಂತೆ ಅಭಿವೃದ್ಧಿಗೂ ನಮ್ಮ ಸರ್ಕಾರ ಬದ್ಧವಾಗಿದೆ ಎಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಹೇಳಿದರು.
ನಗರದಲ್ಲಿ ಶನಿವಾರ ಲೋಕೋಪಯೋಗಿ ಇಲಾಖೆಯ ಭವನ, ಮೇಲ್ಸೇತುವೆಗಳು, ವಿವಿಧ ವಸತಿ ಶಾಲೆಗಳನ್ನು ಲೋಕಾರ್ಪಣೆಗೊಳಿಸಿ ಮಾತನಾಡಿದ ಅವರು, ಕಲ್ಯಾಣ ಕರ್ನಾಟಕ ಭಾಗದ ಹೆಚ್ಚಿನ ಅಭಿವೃದ್ಧಿಗೆ ಕ್ರಮ ವಹಿಸಲಾಗುವುದು. ಇದಕ್ಕಾಗಿ ಅಧಿಕ ಅನುದಾನವನ್ನೂ ನೀಡಲಾಗುವುದು ಎಂದು ಭರವಸೆ ನೀಡಿದರು.
ಈಗಾಗಲೇ ಹೆಚ್ಚಿನ ಅಭಿವೃದ್ಧಿ ಕಾರ್ಯಕ್ರಮಗಳನ್ನು ನಮ್ಮ ಸರ್ಕಾರ ಮಾಡುತ್ತಿದೆ. ಕೋವಿಡ್ ಹಾವಳಿ ಇರದೇ ಇದ್ದರೆ ನಿರಂತರವಾಗಿ ಪ್ರಗತಿ ಕಾರ್ಯಗಳು ಮಾಡಲು ಸಾಧ್ಯವಾಗುತ್ತಿತ್ತು. ಅದರಲ್ಲೂ, ಕಲ್ಯಾಣ ಕರ್ನಾಟಕಕ್ಕೆ ಇನ್ನೂ ಹೆಚ್ಚಿನ ಒತ್ತು ಕೊಟ್ಟು, ಈ ಭಾಗದ ಪ್ರಾದೇಶಿಕ ಅಸಮತೋಲನ ನಿವಾರಣೆಗೆ ಶ್ರಮಿಸಲಾಗುವುದು ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಇದುವರೆಗೆ ಇಡೀ ಕಲ್ಯಾಣ ಕರ್ನಾಟಕ ಭಾಗಕ್ಕೆ ನಮ್ಮ ಸರ್ಕಾರ 26 ಸಾವಿರ ಕೋಟಿಗಳನ್ನು ನೀಡಿದೆ. ಇದರಲ್ಲಿ ಲೋಕೋಪಯೋಗಿ ಇಲಾಖೆಯ ಅಭಿವೃದ್ಧಿ ಕಾರ್ಯಗಳಿಗೆಂದೇ 5 ಸಾವಿರ ಕೋಟಿ ಕೊಡಲಾಗಿದೆ. ಈ ವರ್ಷ ಕಲ್ಯಾಣ ಕರ್ನಾಟಕ ಪ್ರದೇಶ ಅಭಿವೃದ್ಧಿ ಮಂಡಳಿ ಅಡಿ 1,500 ಕೋಟಿ ರೂ. ಕ್ರಿಯಾ ಯೋಜನೆಗೆ ಅನುಮೋದನೆ ನೀಡಲಾಗಿದೆ ಎಂದು ತಿಳಿಸಿದರು.
ಉಪ ಮುಖ್ಯಮಂತ್ರಿ, ಲೋಕೋಪಯೋಗಿ ಸಚಿವ ಗೋವಿಂದ ಕಾರಜೋಳ ಮಾತನಾಡಿ, ಯಡಿಯೂರಪ್ಪನವರು ಅಧಿಕಾರ ಸ್ವೀಕರಿದ ಆರಂಭದಲ್ಲೇ ಭೀಕರ ಪ್ರಹಾವವನ್ನು ಎದುರಿಸಿದರು. ಪ್ರವಾಹದಿಂದ 35 ಸಾವಿರ ಕೋಟಿಯಷ್ಟು ನಷ್ಟ ಉಂಟಾಯಿತು. ಇದರಿಂದ ಹೊರ ಬರುವ ಮೊದಲೇ ಕೋವಿಡ್ ಸೋಂಕು ಆವರಿಸಿತು. ಇದರ ನಡುವೆ ಮತ್ತೆ ಪ್ರವಾಹ ಪರಿಸ್ಥಿತಿ ಎದುರಾಯಿತು. ಎರಡನೇ ಪ್ರವಾಹ ಸಂದರ್ಭದಲ್ಲಿ 25 ಸಾವಿರ ಕೋಟಿಯಷ್ಟು ಹಾನಿ ಸಂಭವಿಸಿತು. ಈ ಎರಡೂ ಪ್ರವಾಹಗಳಿಂದ 60 ಕೋಟಿಯಷ್ಟು ನಷ್ಟ ಅನುಭವಿಸಬೇಕಾಯಿತು. ಆದರೂ, ಯಡಿಯೂರಪ್ಪನವರು ಎದೆಗುಂದದೆ ಅಭಿವೃದ್ಧಿಗೆ ಶ್ರಮಿಸುತ್ತಿದ್ದಾರೆ ಎಂದರು.