ಬೆಳಗಾವಿಗರ ಪ್ರೀತಿ ಬಡ್ಡಿ ಸಮೇತ ವಾಪಸ್ : ಪ್ರಧಾನಿ ನರೇಂದ್ರ ಮೋದಿ

ಬೆಳಗಾವಿ: 'ಬೆಳಗಾವಿ ಜನ ತೋರಿದ ಪ್ರೀತಿ, ಮಾಡಿದ ಆಶೀರ್ವಾದ ನನಗೆ ಸ್ಫೂರ್ತಿ ನೀಡಿದೆ. ಬೆಳಗಾವಿ ಕುಂದಾ, ಬೆಳಗಾವಿ ಮಂದಿ ಎರಡೂ ಬಹಳ ಸಿಹಿ. ನಿಮ್ಮ ಈ ಪ್ರೀತಿಯನ್ನು ಬಡ್ಡಿ ಸಮೇತ ವಾಪಸ್ ಕೊಡುತ್ತೇನೆ' ಎಂದು ಪ್ರಧಾನಿ ನರೇಂದ್ರ ಮೋದಿ ವಾಗ್ದಾನ ಮಾಡಿದರು.
ನಗರದಲ್ಲಿ ಸೋಮವಾರ ₹2,240 ಕೋಟಿ ವೆಚ್ಚದ ರೈಲ್ವೆ ಕಾಮಗಾರಿ, ಜಲಜೀವನ್ ಮಿಷನ್ ಯೋಜನೆಗಳ ಉದ್ಘಾಟನೆ- ಶಂಕುಸ್ಥಾಪನೆ ನೆರವೇರಿಸಿ, ಪ್ರಧಾನಮಂತ್ರಿ ಕಿಸಾನ್ ಸಮ್ಮಾನ್ ಯೋಜನೆಯ ₹16 ಸಾವಿರ ಕೋಟಿಯನ್ನು ರೈತರ ಖಾತೆಗಳಿಗೆ ನೇರ ನಗದು ವರ್ಗಾವಣೆ ಮಾಡಿ ಅವರು ಮಾತನಾಡಿದರು.
'ನಿರೀಕ್ಷಿತ ಅಭಿವೃದ್ಧಿ ಮೂಲಕವೇ ನಿಮ್ಮ ಋಣ ತೀರಿಸುತ್ತೇನೆ. ಕೊಟ್ಟ ಮಾತಿಗೆ ಕಟಿಬದ್ಧನಾಗಿದ್ದೇನೆ. ಕರ್ನಾಟಕದಲ್ಲಿ ಬಸವರಾಜ ಬೊಮ್ಮಾಯಿ ಅವರ ನೇತೃತ್ವದ ಸರ್ಕಾರ, ಹಿರಿಯ ನಾಯಕ ಬಿ.ಎಸ್. ಯಡಿಯೂರಪ್ಪ ಅವರ ಚಿಂತನೆಗಳು ರಾಜ್ಯವನ್ನು ಅಭಿವೃದ್ಧಿಯತ್ತ ಸಾಗಿಸಿವೆ' ಎಂದರು.
ಕೃಷಿಗೆ ಆಧುನಿಕ ಸ್ಪರ್ಶ: 'ಒಂದು ಬಟನ್ ಒತ್ತಿದರೆ ₹16 ಸಾವಿರ ಕೋಟಿ ರೈತರಿಗೆ ಹೋಗುತ್ತದೆ. ಇಷ್ಟೊಂದು ದೊಡ್ಡ ಮೊತ್ತ ಒಂದು ಕ್ಷಣದಲ್ಲಿ ನೇರವಾಗಿ ರೈತರ ಖಾತೆಗೆ ಜಮೆಯಾಗುತ್ತಿರುವುದನ್ನು ಜಗತ್ತು ಸೋಜಿಗದಿಂದ ನೋಡುತ್ತಿದೆ. ಸೋರಿಕೆ ಇಲ್ಲದೇ ಇದು ಸಾಧ್ಯ ಎಂದು ತೋರಿಸಿದ್ದೇವೆ. ತಲಾ ಎರಡೂವರೆ ಲಕ್ಷ ರೂಪಾಯಿ ಈಗಾಗಲೇ ರೈತರ ಖಾತೆಗೆ ಜಮಾ ಆಗಿದೆ. ಕೃಷಿ ಅಗತ್ಯತೆಗಳಿಗಾಗಿ ಸಾಲಕ್ಕಾಗಿ ರೈತರು ಇತರರ ಬಳಿ ಕೈ ಒಡ್ಡದಂತೆ ಸ್ವಾವಲಂಬಿಯಾಗಿಸಿದೆ' ಎಂದರು.
'ದೇಶದಲ್ಲಿ ಶೇ 60ರಷ್ಟು ಸಣ್ಣ ರೈತರೇ ಇದ್ದಾರೆ. ಕಿಸಾನ್ ಸಮ್ಮಾನ್ ಅವರಿಗಾಗಿಯೇ ಮಾಡಿದ ಯೋಜನೆ. ಕೃಷಿಗೆ ಆಧುನಿಕ ಸ್ಪರ್ಶ ನೀಡುವ ಮೂಲಕ ಉತ್ಪಾದನಾ ಸಾಮರ್ಥ್ಯ ಹೆಚ್ಚಳ ಮಾಡುವುದು ನಮ್ಮ ಉದ್ದೇಶವಾಗಿತ್ತು. ಅದರಲ್ಲಿ ಯಶಸ್ಸು ಕಂಡಿದ್ದೇವೆ. 2014 ರಲ್ಲಿ ಕೃಷಿಗೆ ಮೀಸಲಿಟ್ಟ ಬಜೆಟ್ ಕೇವಲ ₹25 ಸಾವಿರ ಕೋಟಿ ಇತ್ತು. ಈ ವರ್ಷ ನಮ್ಮ ಸರ್ಕಾರದ ಬಜೆಟ್‌ನಲ್ಲಿ ₹1.25 ಲಕ್ಷ ಕೋಟಿ ಮೀಸಲಿಡಲಾಗಿದೆ' ಎಂದು ತಿಳಿಸಿದರು.
ಕೇಂದ್ರ ಕೃಷಿ ಹಾಗೂ ಕಿಸಾನ್ ಕಲ್ಯಾಣ ಮಂತ್ರಿ ನರೇಂದ್ರಸಿಂಗ್ ತೋಮರ್ ಮಾತನಾಡಿ, 'ರೈತರ ಆದಾಯ ಹೆಚ್ಚಿಸಲು ಪಿಎಂ ಕಿಸಾನ್ ಸಮ್ಮಾನ್ ಯೋಜನೆ ಜಾರಿಯಾಗಿದೆ. ರೈತ ಸಮೃದ್ಧವಾಗಿ ಬೆಳೆದರೆ, ದೇಶ ಸಮೃದ್ಧವಾಗಿರಲು ಸಾಧ್ಯ ರೈತನ ಹಿತ ಕಾಪಾಡುವ ಕಾರ್ಯವನ್ನು ಸರ್ಕಾರ ನಿರ್ವಹಿಸುತ್ತಿದೆ. ಸಿರಿಧಾನ್ಯಗಳ ಉತ್ಪಾದನೆ ಮತ್ತು ಬಳಕೆಯ ಜಾಗೃತಿ ಮೂಡಿಸಲು ಮಾರ್ಚ್ 18 ರಂದು ಪ್ರಧಾನಿಯವರು ಅಂತಾರಾಷ್ಟ್ರೀಯ ಸಿರಿಧಾನ್ಯ ಮೇಳ ಉದ್ದೇಶಿಸಿ ಮಾತನಾಡಲಿದ್ದಾರೆ' ಎಂದರು.
ಕೇಂದ್ರ ಸಚಿವರಾದ ಪ್ರಲ್ಹಾದ ಜೋಶಿ, ಶೋಭಾ ಕರಂದ್ಲಾಜೆ ಮಾತನಾಡಿದರು. ರಾಜ್ಯದ ಸಚಿವರಾದ ಗೋವಿಂದ ಕಾರಜೋಳ, ಬಿ.ಸಿ.ಪಾಟೀಲ, ಶಶಿಕಲಾ ಜೊಲ್ಲೆ, ಸಂಸದರಾದ ಮಂಗಳಾ ಸುರೇಶ ಅಂಗಡಿ, ಅಣ್ಣಾಸಾಹೇಬ ಜೊಲ್ಲೆ, ಈರಣ್ಣ ಕಡಾಡಿ, ಶಾಸಕರಾದ ಮಹೇಶ ಕುಮಠಳ್ಳಿ, ಪಿ.ರಾಜೀವ, ದುರ್ಯೋಧನ ಐಹೊಳೆ, ಬಾಲಚಂದ್ರ ಜಾರಕಿಹೊಳಿ, ರಮೇಶ ಜಾರಕಿಹೊಳಿ, ಅಭಯ ಪಾಟೀಲ, ಮಹದೇವಪ್ಪ ಯಾದವಾಡ, ಅನಿಲ ಬೆನಕೆ, ಮಹಾಂತೇಶ ದೊಡ್ಡಗೌಡರ, ವಿಧಾನ ಪರಿಷತ್ ಸದಸ್ಯರಾದ ಲಕ್ಷ್ಮಣ ಸವದಿ, ಹನುಮಂತ ನಿರಾಣಿ, ಡಾ.ಸಾಬಣ್ಣ ತಳವಾರ ವೇದಿಕೆ ಮೇಲಿದ್ದರು.
*
ಮಹಾತ್ಮರ ನೆನೆದ ಮೋದಿ
ಕನ್ನಡದಲ್ಲೇ ಮಾತು ಆರಂಭಿಸಿದ ಪ್ರಧಾನಿ, 'ಸಬ್ ಕಾ ಸಾಥ್- ಸಬ್ ಕಾ ವಿಕಾಸ್' ಮಂತ್ರಕ್ಕೆ ಸ್ಫೂರ್ತಿಯಾದ ಬಸವಣ್ಣನವರಿಗೆ ನನ್ನ ನಮಸ್ಕಾರಗಳು. ಬೆಳಗಾವಿಗೆ ಬರುವುದು ತೀರ್ಥಕ್ಷೇತ್ರಕ್ಕೆ ಬಂದಷ್ಟೇ ಶ್ರೇಷ್ಠ. ಇದು ರಾಣಿ ಚನ್ನಮ್ಮ, ಸಂಗೊಳ್ಳಿ ರಾಯಣ್ಣ ಹುಟ್ಟಿದ ನೆಲ. ಗುಲಾಮಗಿರಿ ವಿರುದ್ಧ ಹೋರಾಟ ಹಾಗೂ ನವಭಾರತ ನಿರ್ಮಾಣದಲ್ಲಿ ಮುಖ್ಯ ಪಾತ್ರ ವಹಿಸಿದ ನೆಲ' ಎಂದಾಗ ಜನರಿಂದ ಹರ್ಷೋದ್ಘಾರ ಕೇಳಿಬಂತು.
'ನಾವು ಈಗ ಸ್ಟಾರ್ಟ್ ಅಪ್'ಗಳನ್ನು ಮಾಡಿದ್ದೇವೆ. ಆದರೆ, ಬೆಳಗಾವಿಯಲ್ಲಿ ಶತಮಾನಗಳ ಹಿಂದೆಯೇ ನೀರಾವರಿಗೆ ಸಂಬಂಧಿಸಿದ ಪರಿಕರಗಳನ್ನು ಸಿದ್ಧಪಡಿಸುವ BEMCO ಸ್ಥಾಪಿಸಿ, ಬಾಬುರಾವ್ ಪುಸಾಳ್ಕರ್ ಅವರು ನೂರು ವರ್ಷಗಳ ಹಿಂದೆಯೇ ಸ್ಟಾರ್ಟ್ ಅಪ್ ಮಾಡಿದ್ದಾರೆ. ಇಂಥ ಊರಿಗೆ ಇನ್ನು ಮುಂದೆ ಹೊಸ ದಿಕ್ಕು ಸಿಗಲಿದೆ' ಎಂದರು.
*
ಕಬ್ಬು ಬೆಳೆಗಾರರಿಗೆ ತೆರಿಗೆ ವಿನಾಯಿತಿ
'ಕಬ್ಬು ಬೆಳೆಗಾರರ ಹಿತರಕ್ಷಣೆಗಾಗಿ ಸರ್ಕಾರ ಈ ಬಜೆಟ್ ನಲ್ಲಿ 2016-17ಗಿಂತ ಮುಂಚಿನ ಬಾಕಿ ಬಿಲ್‌ಗಳ ಮೇಲೆ ತೆರಿಗೆ ವಿನಾಯಿತಿ ನೀಡಿದೆ. ಇದರಿಂದ ಕಬ್ಬು ಬೆಳೆಗಾರರ ಸಹಕಾರಿ ಸಂಘಕ್ಕೆ ಸಹಕಾರಿಯಾಗಲಿದೆ' ಎಂದು ಪ್ರಧಾನಿ ತಿಳಿಸಿದರು.
'ಕೃಷಿ, ಕೈಗಾರಿಕೆ, ಶಿಕ್ಷಣ, ಆರೋಗ್ಯ ಕ್ಷೇತ್ರದ ಪರಸ್ಪರ ಸಂಪರ್ಕದಿಂದ ಅಭಿವೃದ್ಧಿ ಸಾಧ್ಯ. ಆದ್ದರಿಂದ ಕರ್ನಾಟಕ ರಾಜ್ಯದಲ್ಲಿ ಈ ಕ್ಷೇತ್ರಗಳ ಬೆಳವಣಿಗೆಗೆ ಆದ್ಯತೆ ನೀಡಲಾಗುತ್ತಿದೆ. ಕರ್ನಾಟಕದಲ್ಲಿ ಅನೇಕ ರೈಲ್ವೆ ಯೋಜನೆಗಳನ್ನು ಕೈಗೆತ್ತಿಕೊಳ್ಳಲಾಗಿದೆ. ರೈಲುಸಂಪರ್ಕ ಯೋಜನೆಗಳಿಂದ ರಾಜ್ಯದ ಪ್ರಗತಿಗೆ ವೇಗ ದೊರಕಲಿದೆ' ಎಂದರು.
'ಗ್ರಾಮೀಣ ಪ್ರದೇಶದ ಶೇ 65 ಕ್ಕೂ ಅಧಿಕ ಪ್ರದೇಶಗಳಲ್ಲಿ ಜಲಜೀವನ್ ಮಿಷನ್ ಯೋಜನೆ ಮೂಲಕ ಮನೆಮನೆಗೆ ಕುಡಿಯುವ ನೀರು ಒದಗಿಸಲಾಗುತ್ತಿದೆ. ಇದರಿಂದ ನಮ್ಮ ತಾಯಿ, ತಂಗಿಯರು ಕೊಡ ಹೊತ್ತು ಅಲೆಯುವುದು ತಪ್ಪಿದೆ' ಎಂದೂ ಹೇಳಿದರು.
*
'ಸಿರಿಧಾನ್ಯ ಬೆಳೆಗೆ ಪ್ರೋತ್ಸಾಹ'
'ಕೇಂದ್ರದಿಂದ ಸಾವಯವ ಕೃಷಿಗೆ ಒತ್ತ ನೀಡಲಾಗುತ್ತಿದೆ. ಇದಲ್ಲದೇ 'ಪಿಎಂ- ಪ್ರಣಾಮ್' ಯೋಜನೆ ಅಡಿ ರಾಸಾಯನಿಕ ಮುಕ್ತ ಕೃಷಿಗೆ ಪ್ರೋತ್ಸಾಹ ನೀಡಲಾಗುತ್ತಿದೆ' ಎಂದು ಮೋದಿ ಹೇಳಿದರು.
'ಪಾರಂಪರಿಕ ಕೃಷಿ ಪದ್ಧತಿಯನ್ನು ನಾವು ಮತ್ತೆ ಅಳವಡಿಸಿಕೊಳ್ಳಬೇಕಿದೆ. ಸಿರಿಧಾನ್ಯ ಬೆಳೆಗಳಿಗೆ 'ಸಿರಿಅನ್ನ ಯೋಜನೆ' ಮೂಲಕ ಪ್ರೋತ್ಸಾಹ ನೀಡಲಾಗುತ್ತಿದೆ. ಕರ್ನಾಟಕವು ಸಿರಿಧಾನ್ಯಗಳ ತವರು. ಯಡಿಯೂರಪ್ಪ ಅವರು ಸಿರಿಧಾನ್ಯ ಹಾಗೂ ಸಾವಯವ ಕೃಷಿಗೆ ಪ್ರೋತ್ಸಾಹ ನೀಡಿದ್ದರು' ಎಂದೂ ಸ್ಮರಿಸಿದರು.
*
ಪ್ರಧಾನಿ ಆರ್ಥಿಕ ಸಂಕಲ್ಪಕ್ಕೆ ಕೊಡುಗೆ: ಸಿ.ಎಂ
'ಪ್ರಧಾನಿಯವರು ತೆಗೆದುಕೊಳ್ಳುತ್ತಿರುವ ಕ್ರಮಗಳು ದೇಶವನ್ನು ಅನಿಶ್ಚಿತತೆಯಿಂದ ನಿಶ್ಚಿತತೆ ಕಡೆಗೆ ತೆಗೆದುಕೊಂಡು ಹೋಗುತ್ತಿದೆ. ದೇಶದ ಪ್ರತಿ ಮನೆ ಮನೆಗೂ ನೀರು ಕೊಡುವ ಕಾರ್ಯವನ್ನು ಜಲಜೀವನ ಮಿಷನ್ ಮೂಲಕ ನನಸು ಮಾಡಿದ್ದಾರೆ. ಮೋದಿ ಅವರ ಕನಸಿನ ನವಭಾರತಕ್ಕಾಗಿ ನಾವು ನವಕರ್ನಾಟಕ ನಿರ್ಮಿಸುತ್ತೇವೆ. 5 ಟ್ರಿಲಿಯನ್ ಡಲರ್ ಆರ್ಥಿಕತೆಯ ಸಂಕಲ್ಪಕ್ಕೆ ರಾಜ್ಯವೂ ಒಂದು ಟ್ರಿಲಿಯನ್ ಡಾಲರ್ ಆರ್ಥಿಕತೆಯ ಕೊಡುಗೆ ನೀಡಲಿದೆ' ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು.
'ಬೆಳಗಾವಿಯ ಜನ ಇಂದು ಪ್ರಧಾನಿಯವರಿಗೆ ಅಭೂತಪೂರ್ವ ಸ್ವಾಗತ ನೀಡಿ ಹೊಸ ಇತಿಹಾಸ ಬರೆದಿದ್ದಾರೆ. ಪ್ರಧಾನಿಯವರ ಕೃಷಿ ಕ್ಷೇತ್ರದ ಕಾಳಜಿಯಿಂದ ಪ್ರೇರಣೆ ಪಡೆದು ರಾಜ್ಯದಲ್ಲಿ ರೈತವಿದ್ಯಾನಿಧಿ ಯೋಜನೆ ಜಾರಿಗೊಳಿಸಲಾಗಿದೆ. ಕಳೆದ ಹಲವಾರು ವರ್ಷಗಳಿಂದ ನನೆಗುದಿಗೆ ಬಿದ್ದಿದ್ದ ಕನಿಷ್ಠ ಬೆಂಬಲ ಯೋಜನೆಯಡಿಯ ಕೃಷಿ ಉತ್ಪನ್ನಗಳ ದರಗಳನ್ನು ಪ್ರಧಾನಿಯವರು ಪರಿಷ್ಕರಣ ಮಾಡಿರುವುದು ರೈತರಿಗೆ ನೆರವಾಗಿದೆ' ಎಂದರು.