ಗುಂಡು ಹಾರಿಸಿದ ಪಿಎಸ್‌ಐ ವಿರುದ್ಧ ಕ್ರಮಕ್ಕೆ ಒತ್ತಾಯ
ಕಲಬುರಗಿ: ನಗರದ ಸೂಪರ್ ಮಾರ್ಕೆಟ್‌ನಲ್ಲಿ ಇತ್ತೀಚೆಗೆ ಮಾನಸಿಕ ಅಸ್ವಸ್ಥ ವ್ಯಕ್ತಿ ಮೊಹ್ಮದ್ ಫಜಲ್ ಎಂಬಾತನ ಮೇಲೆ ಪೊಲೀಸರು ಅನವಶ್ಯಕವಾಗಿ ಗುಂಡು ಹಾರಿಸಿ ಕಾಲು ಊನ ಮಾಡಿದ್ದಾರೆ. ಈ ಬಗ್ಗೆ ಇಲ್ಲದ ಕಥೆಗಳನ್ನು ಹೇಳುತ್ತಿದ್ದಾರೆ. ಆದ್ದರಿಂದ ಗುಂಡು ಹಾರಿಸಿದ ಪಿಎಸ್‌ಐ ವಾಹಿದ್ ಕೊತ್ವಾಲ್ ಮೇಲೆ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿ ಬಹಿಷ್ಕೃತ ವೆಲ್ಫೇರ್ ಫೌಂಡೇಶನ್ ಇಂಡಿಯಾ ಕಾರ್ಯಕರ್ತರು ನಗರದಲ್ಲಿ ಸೋಮವಾರ ಪ್ರತಿಭಟನಾ ಮೆರವಣಿಗೆ ನಡೆಸಿದರು.
ಮೊಹ್ಮದ್ ಫಜಲ್ ಕಡುಬಡವನಾಗಿದ್ದು, ಮಾನಸಿಕ ಅಸ್ವಸ್ಥತೆಗಾಗಿ ಚಿಕಿತ್ಸೆ ಪಡೆದು ಇತ್ತೀಚೆಗೆ ಆಸ್ಪತ್ರೆಯಿಂದ ಬಿಡುಗಡೆ ಹೊಂದಿದ್ದ. ಸೂಪರ್ ಮಾರ್ಕೆಟ್‌ನಲ್ಲಿ ಗೆಳೆಯನ ಹಣ್ಣಿನ ಅಂಗಡಿಗೆ ಬಂದಾಗ ಕಲ್ಲಂಗಡಿ ಹಣ್ಣು ಕೊಯ್ದು ತಿನ್ನುತ್ತಿರುವಾಗ ಚಾಕು ಹಿಡಿದಿದ್ದ. ಅದನ್ನು ಆತನ ಗೆಳೆಯ ಗಮನಿಸದೇ ಹೋಗಿದ್ದಾರೆ. ಆತ ಚಾಕು ಹಿಡಿದಿದ್ದನ್ನು ಗಮನಿಸಿದ ಸಾರ್ವಜನಿಕರು ಕರೆ ಮಾಡಿ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಸ್ಥಳಕ್ಕೆ ಬಂದ ಪೊಲೀಸರು ಚಾಕುವನ್ನು ಬೇರೆ ತಂತ್ರ ಬಳಸಿ ಕಸಿದುಕೊಳ್ಳುವ ಅಥವಾ ಕೆಳಗೆ ಬೀಳಿಸುವ ಅವಕಾಶವಿದ್ದರೂ ಅದನ್ನು ಮಾಡದೇ ಪಿಎಸ್‌ಐ ವಾಹಿದ್ ಕೊತ್ವಾಲ್ ಅನಗತ್ಯವಾಗಿ ಗುಂಡು ಹಾರಿಸಿದ್ದಾರೆ. ಇದರಿಂದ ಕಾಲು ಕಳೆದುಕೊಂಡಿದ್ದಾನೆ. ಇದರಿಂದಾಗಿ ಸಾರ್ವಜನಿಕರಲ್ಲಿ ಪೊಲೀಸರ ಬಗ್ಗೆ ರಕ್ಷಣೆಯ ಬದಲು ಭಯವನ್ನು ಹುಟ್ಟಿಸಿದಂತಾಗಿದೆ ಎಂದು ಪ್ರತಿಭಟನಾಕಾರರು ದೂರಿದರು.
ಪ್ರತಿಭಟನೆಯಲ್ಲಿ ಸಂಘಟನೆಯ ರಾಜ್ಯ ಘಟಕದ ಅಧ್ಯಕ್ಷ ಮಲ್ಲಿಕಾರ್ಜುನ ಎಸ್. ಕೋಡ್ಲಿ, ಉತ್ತರ ಕರ್ನಾಟಕ ಅಧ್ಯಕ್ಷ ಮಹ್ಮದ್ ಶಾಬುದ್ದೀನ್, ಮುಖಂಡರಾದ ಮಹಾಂತೇಶ ತಳವಾರ, ರಾಹುಲ ಪರೀಟ, ರುಕ್ಮಿಣಿ ಕಮಠಾಣಕರ್, ಮಹಮ್ಮದ್ ಹಮೀದ್ ಶೇಖ್, ಲತಾ ಡಿ. ಶಾಸ್ತ್ರಿ, ರೇಷ್ಮಾ, ಅಂಜನಾ ವಾಡೇಕರ್, ಮಹ್ಮದ್ ಹಿಸಾಮುದ್ದೀನ್, ಪಂಚಶೀಲಾ, ಲಕ್ಷ್ಮಿ, ಅನಿತಾ, ಮಹ್ಮದ್ ಆರೀಫ್, ಮಹ್ಮದ್ ಅಬ್ರಾರ್, ಮಹ್ಮದ್ ಅಜರ್, ಅಣ್ಣೆಮ್ಮ ಇತರರು ಇದ್ದರು.