ತಾಯಿಯನ್ನು ಕಳೆದುಕೊಳ್ಳುವುದಕ್ಕಿಂತ ದೊಡ್ಡ ನಷ್ಟ ಇನ್ನೊಂದಿಲ್ಲ: ಜಪಾನ್, ಪಾಕ್ ಪ್ರಧಾನಿ ಸೇರಿ ಗಣ್ಯರ ಸಂತಾಪ

ತಾಯಿಯನ್ನು ಕಳೆದುಕೊಳ್ಳುವುದಕ್ಕಿಂತ ದೊಡ್ಡ ನಷ್ಟ ಇನ್ನೊಂದಿಲ್ಲ: ಜಪಾನ್, ಪಾಕ್ ಪ್ರಧಾನಿ ಸೇರಿ ಗಣ್ಯರ ಸಂತಾಪ

ವದೆಹಲಿ: ಅನಾರೋಗ್ಯದಿಂದ ಆಸ್ಪತ್ರೆಗೆ ದಾಖಲಾಗಿದ್ದ ಪ್ರಧಾನಿ ನರೇಂದ್ರ ಮೋದಿ ಅವರ ತಾಯಿ, ಶತಾಯುಷಿ ಹೀರಾಬೆನ್ ಮೋದಿ ಶುಕ್ರವಾರ (ಡಿಸೆಂಬರ್ 30) ನಸುಕಿನ ವೇಳೆ ಅಹಮದಾಬಾದ್ ಮೆಹ್ತಾ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದರು.

ಹೀರಾಬೆನ್ ಮೋದಿ ಅವರ ನಿಧನಕ್ಕೆ ನೇಪಾಳ ಪ್ರಧಾನಿ ಪುಷ್ಪ ಕಮಾಲ್ ದಹಾಲ್ ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ. ಹೀರಾಬೆನ್ ಮೋದಿ ಅವರ ನಿಧನದ ಸುದ್ದಿ ತಿಳಿದು ತುಂಬಾ ದುಃಖವಾಗಿದ್ದು, ಪ್ರಧಾನಿ ನರೇಂದ್ರ ಮೋದಿ ಅವರ ಪ್ರೀತಿಯ ತಾಯಿಯ ನಿಧನಕ್ಕೆ ಹೃದಯಾಂತರಾಳದ ಸಂತಾಪ ಸಲ್ಲಿಸುವುದಾಗಿ ತಿಳಿಸಿದ್ದಾರೆ.

ಜಪಾನ್ ಪ್ರಧಾನಿ ಫ್ಯೂಮಿಯೊ ಕಿಶಿದಾ ಅವರು ಪ್ರಧಾನಿ ಮೋದಿ ಅವರ ತಾಯಿ ನಿಧನಕ್ಕೆ ಸಂತಾಪ ಸೂಚಿಸಿದ್ದಾರೆ. ಪಾಕಿಸ್ತಾನ್ ಪ್ರಧಾನಿ ಶೆಹಬಾಝ್ ಷರೀಫ್ ಸಂತಾಪ ವ್ಯಕ್ತಪಡಿಸಿದ್ದು, ತಾಯಿಯನ್ನು ಕಳೆದುಕೊಳ್ಳುವುದಕ್ಕಿಂತ ದೊಡ್ಡ ನಷ್ಟ ಇನ್ನೊಂದಿಲ್ಲ ಎಂದು ತಿಳಿಸಿದ್ದಾರೆ.

ಇಂದು ಮುಂಜಾನೆಯೇ ಗುಜರಾತ್ ನ ಗಾಂಧಿನಗರಕ್ಕೆ ಆಗಮಿಸಿದ್ದ ಪ್ರಧಾನಿ ನರೇಂದ್ರ ಮೋದಿ ಅವರು ತಾಯಿ ಹೀರಾಬೆನ್ ಮೋದಿ ಅವರ ಅಂತ್ಯಸಂಸ್ಕಾರದಲ್ಲಿ ಪಾಲ್ಗೊಂಡಿದ್ದು, ಬಳಿಕ ಕರ್ತವ್ಯಕ್ಕೆ ತೆರಳಿರುವುದಾಗಿ ಮಾಧ್ಯಮದ ವರದಿ ತಿಳಿಸಿದೆ.

ಶತಾಯುಷಿ ಹೀರಾಬೆನ್ ಮೋದಿ ಅವರು ಐವರು ಪುತ್ರರು, ಓರ್ವ ಪುತ್ರಿಯನ್ನು ಅಗಲಿದ್ದಾರೆ. ಪ್ರಧಾನಿ ಮೋದಿ ಅವರ ತಾಯಿ ಹೀರಾಬೆನ್ ನಿಧನಕ್ಕೆ ಗಣ್ಯರು ಸಂತಾಪ ಸೂಚಿಸಿದ್ದಾರೆ.