ಇಯಾನ್ ಮಾರ್ಗನ್ ಇಂಗ್ಲೆಂಡ್‌ನ ಸರ್ವಶ್ರೇಷ್ಠ ನಾಯಕ ಎಂದ ನಾಸಿರ್ ಹುಸೇನ್

ಇಂಗ್ಲೆಂಡ್ ತಂಡದ ಮಾಜಿ ನಾಯಕ ನಾಸಿರ್ ಹುಸೇನ್ ಮತ್ತೋರ್ವ ಮಾಜಿ ನಾಯಕ ಇಯಾನ್ ಮಾರ್ಗನ್ ಅವರನ್ನು ಇಂಗ್ಲೆಂಡ್ ತಂಡದ ಸಾರ್ವಕಾಲಿಕ ಶ್ರೇಷ್ಠ ನಾಯಕ ಎಂದು ಬಣ್ಣಿಸಿದ್ದಾರೆ. ಇಯಾನ್ ಮಾರ್ಗನ್ ಸೋಮವಾರ ಎಲ್ಲಾ ಮಾದರಿಯ ಕ್ರಿಕೆಟ್‌ಗೆ ನಿವೃತ್ತಿ ಘೋಷಿಸಿದ್ದಾರೆ. ಆ ಬಳಿಕ ನಾಸಿರ್ ಹುಸೇನ್ ಮಾರ್ಗನ್ ಅವರನ್ನು ವಿಶೇಷವಾಗಿ ಪ್ರಶಂಸಿಸಿದ್ದಾರೆ.
ಸ್ಕೈ ಸ್ಪೋರ್ಟ್ಸ್‌ಗೆ ಬರೆದಿರುವ ಅಂಕಣದಲ್ಲಿ ನಾಸಿರ್ ಹುಸೇನ್, ಇಯಾನ್ ಮಾರ್ಗನ್ ಅವರನ್ನು ಇಂಗ್ಲೆಂಡ್‌ನ ಶ್ರೇಷ್ಠ ವೈಟ್-ಬಾಲ್ ನಾಯಕ ಎಂದು ಬಣ್ಣಿಸಿದ್ದಾರೆ. ಮಾರ್ಗನ್ ಇಂಗ್ಲೆಂಡ್‌ನ ವೈಟ್-ಬಾಲ್ ಆಟದ ಸಂಸ್ಕೃತಿಯನ್ನು ಬದಲಾಯಿಸಿದ್ದಾರೆ ಎಂದಿದ್ದಾರೆ.
"ಇಯಾನ್ ಇಂಗ್ಲೆಂಡ್‌ನ ಶ್ರೇಷ್ಠ ವೈಟ್-ಬಾಲ್ ನಾಯಕ ಎನ್ನದೆ ಇರಲು ಸಾಧ್ಯವೇ ಇಲ್ಲ. ಅವರು ಇಂಗ್ಲಿಷ್ ವೈಟ್-ಬಾಲ್ ಕ್ರಿಕೆಟ್ ಸಂಸ್ಕೃತಿಯನ್ನು ಬದಲಾಯಿಸಿದರು. ಆಸ್ಟ್ರೇಲಿಯಾದಲ್ಲಿ ನಡೆದ 2015ರ ವಿಶ್ವಕಪ್‌ನಲ್ಲಿ ನಾವು ಬಾಂಗ್ಲಾದೇಶದ ವಿರುದ್ಧ ಸೋತಾಗ ನಾವು ಎಲ್ಲಿದ್ದೇವೆ ಗಮನಿಸಬೇಕು. ಆದರೆ ಈಗ ನಾವು ಇರುವ ಸ್ಥಾನದಲ್ಲಿ ಗಮನಾರ್ಹ ಬದಲಾವಣೆಯಾಗಿದೆ" ಎಂದಿದ್ದಾರೆ ನಾಸಿರ್ ಹುಸೇನ್.
"ಅವರು ಶಾಂತಚಿತ್ತದ ಅತ್ಯಂತ ಗೌರವಾನ್ವಿತ ನಾಯಕನಾಗಿದ್ದರು. ಅವರ ಆಲೋಚನಾ ಪ್ರಕ್ರಿಯೆಯಲ್ಲಿ ಅವರು ಬಹಳ ಸ್ಪಷ್ಟವಾಗಿದ್ದರು. ಲಾರ್ಡ್ಸ್‌ನಲ್ಲಿ ವಿಶ್ವಕಪ್ ಗೆಲ್ಲುವುದರೊಂದಿಗೆ ಮೋರ್ಗನ್ ಇಂಗ್ಲೆಂಡ್‌ಗೆ ಇಂಗ್ಲಿಷ್ ಕ್ರಿಕೆಟ್‌ಗೆ ಅತ್ಯಂತ ವಿಶೇಷ ಕ್ಷಣಗಳನ್ನು ನೀಡಿದರು" ಎಂದು ನಾಸಿರ್ ಹುಸೇನ್ ಮೆಚ್ಚುಗೆ ಸೂಚಿಸಿದ್ದಾರೆ.
ಇನ್ನು ಆಟಗಾರನಾಗಿಯೂ ಮಾರ್ಗನ್ ಇಂಗ್ಲೆಂಡ್ ತಂಡಕ್ಕೆ ನೀಡಿದ ಕೊಡುಗೆಯನ್ನು ಹುಸೇನ್ ಸ್ಮರಿಸಿದ್ದಾರೆ. "ನೀವು ಮೋರ್ಗನ್ ಆಟಗಾರನನ್ನಾಗಿಯೂ ನೆನಪಿಸಿಕೊಳ್ಳಬೇಕು. ಅವರುಪ್ರಭಾವಶಾಲಿ ಆಟಗಾರ. ನಾವು ಈಗ ನೋಡುತ್ತಿರುವ ಎಲ್ಲಾ ಹೊಡೆತಗಳನ್ನು ಅವರು ಬಹಳ ಮೊದಲೇ ಆಡಿದ್ದಾರೆ. ರಿವರ್ಸ್-ಸ್ವೀಪಿಂಗ್, ರಿವರ್ಸ್-ಸ್ಕೂಪಿಂಗ್ ಜೊತೆಗೆ ದಿಡ್ಡತನದ ಆಟಗಾರನಾಗಿದ್ದರು. ಅವರ ಅತ್ಯುತ್ತಮ ಫಾರ್ಮ್‌ನಲ್ಲಿದ್ದಾಗ ಅಕ್ಷರಶಃ ವಿಶ್ವಂಸಕ ಆಟಗಾರ" ಎಂದಿದ್ದಾರೆ ನಾಸಿರ್ ಹುಸೇನ್.
ಮಾರ್ಗನ್ ದಾಖಲೆಯ 126 ಅಂತಾರಾಷ್ಟ್ರೀಯ ಏಕದಿನ ಪಂದ್ಯಗಳಲ್ಲಿ ಮತ್ತು 72 ಟಿ20 ಪಂದ್ಯಗಳಲ್ಲಿ ಇಂಗ್ಲೆಂಡ್ ತಂಡದ ನಾಯಕತ್ವ ವಹಿಸಿದ್ದರು. ಎರಡೂ ಮಾದರಿಗಳಲ್ಲಿ ನಾಯಕನಾಗಿ 118 ಗೆಲುವು ಕೂಡ ದಾಖಲೆಯಾಗಿದೆ. ಇಂಗ್ಲೆಂಡ್ ಪರವಾಗಿ ಅತಿ ಹೆಚ್ಚು ಏಕದಿನ ರನ್(6,957) ಇಂಗ್ಲೆಂಡ್ ಪರವಾಗಿ ಅತಿ ಹೆಚ್ಚು ಟಿ20 ರನ್‌ಗಳು (2,458), ಮತ್ತು ಎರಡೂ ಸ್ವರೂಪಗಳಲ್ಲಿ ಇಂಗ್ಲೆಂಡ್‌ಗಾಗಿ ಅತಿ ಹೆಚ್ಚು ಸಿಕ್ಸರ್‌ಗಳು ಸೇರಿದಂತೆ ಹಲವಾರು ದಾಖಲೆಗಳನ್ನು ತಮ್ಮ ಹೆಸರಿನಲ್ಲಿ ಹೊಂದಿದ್ದಾರೆ ಮಾರ್ಗನ್.