ಲಕ್ಷ್ಮಿ ಹೆಬ್ಬಾಳ್ಕರ್ ಸಹೋದರನ ವಿರುದ್ಧ ಲಖನ್ ಜಾರಕಿಹೊಳಿ ಕಣಕ್ಕೆ

ಬೆಂಗಳೂರು,ನ.15-ಮಿನಿ ಮಹಾಸಮರವೆಂದೇ ರಾಜಕೀಯ ವಲಯದಲ್ಲಿ ಗುರುತಿಸಿಕೊಂಡಿರುವ 25 ಸ್ಥಾನಗಳ ವಿಧಾನಪರಿಷತ್ ಚುನಾವಣೆಗೆ ಬಿಜೆಪಿ ಬೆಳಗಾವಿಯಿಂದ ಇಬ್ಬರು ಅಭ್ಯರ್ಥಿಗಳನ್ನು ಕಣಕ್ಕಿಳಿಸಲು ಮುಂದಾಗಿದೆ.ಇದು ಮಾಜಿ ಸಚಿವ ರಮೇಶ್ ಜಾರಕಿಹೊಳಿ ಹಾಗೂ ಶಾಸಕಿ ಲಕ್ಷ್ಮಿ ಹೆಬ್ಬಾಳ್ಕರ್ ನಡುವಿನ ಜಿದ್ದಾಜಿದ್ದಿನ ರಾಜಕೀಯ ಸಮರದ ವೇದಿಕೆಯಾಗಲಿದ್ದು, ರಾಜ್ಯದ ಗಮನಸೆಳೆಯುವ ಕ್ಷೇತ್ರವಾಗಲಿದೆ.
ದ್ವಿಸದಸ್ಯ ಕ್ಷೇತ್ರವನ್ನು ಹೊಂದಿರುವ ಬೆಳಗಾವಿಯಲ್ಲಿ ಈವರೆಗೂ ಸಾಮಾನ್ಯವಾಗಿ ರಾಜಕೀಯ ಪಕ್ಷಗಳು ತಮ್ಮಗಿರುವ ಸಾಮಥ್ರ್ಯದ ಆಧಾರದ ಮೇಲೆ ಒಬ್ಬರೇ ಅಭ್ಯರ್ಥಿಗಳನ್ನು ಕಣಕ್ಕಿಳಿಸುತ್ತಿದ್ದರು. ಹೀಗಾಗಿ ಕಾಂಗ್ರೆಸ್ ಮತ್ತು ಬಿಜೆಪಿಯಿಂದ ಕ್ರಮವಾಗಿ ತಲಾ ಒಬ್ಬೊಬ್ಬರು ಗೆದ್ದು ಪರಿಷತ್‍ಗೆ ಆಯ್ಕೆಯಾಗುತ್ತಿದ್ದರು.
ಆದರೆ ಈ ಬಾರಿಯ ಪರಿಷತ್ ಚುನಾವಣೆಯಲ್ಲಿ ತಮ್ಮ ಸಹೋದರ ಲಖನ್ ಜಾರಕಿಹೊಳಿಗೆ ಟಿಕೆಟ್ ಕೊಡಿಸಲೇಬೇಕೆಂದು ಪಟ್ಟು ಹಿಡಿದಿರುವ ರಮೇಶ್ ಜಾರಕಿಹೊಳಿ ಬಿಜೆಪಿ ವರಿಷ್ಠರಿಗೆ ಗೆಲ್ಲಿಸಿಕೊಂಡು ಬರುವ ಆಶ್ವಾಸನೆಯನ್ನು ನೀಡಿದ್ದಾರೆ.ಇದಕ್ಕೆ ಕೆಎಂಎಫ್ ಅಧ್ಯಕ್ಷರೂ ಆಗಿರುವ ಬಾಲಚಂದ್ರ ಜಾರಕಿಹೊಳಿ ಸೇರಿದಂತೆ ಜಿಲ್ಲಾ ಬಿಜೆಪಿ ನಾಯಕರು ಕೂಡ ಕೈ ಜೋಡಿಸಿದ್ದು, ಈ ಬಾರಿ ಪಕ್ಷದಿಂದ ಇಬ್ಬರು ಅಭ್ಯರ್ಥಿಗಳನ್ನು ಕಣಕ್ಕಿಳಿಸುವಂತೆ ಮನವಿ ಮಾಡಿದ್ದಾರೆ.
ಈಗಾಗಲೇ ಬಿಜೆಪಿಯಿಂದ ಮಹಂತೇಶ್ ಕವಟಗಿ ಮಠ ಬಹುತೇಕ ಕಣಕ್ಕಿಳಿಯುವುದು ಖಚಿತವಾಗಿದೆ. ಇದರ ಜೊತೆಗೆ ಜಾರಕಿಹೊಳಿ ಕುಟುಂಬದ ಲಖನ್ ಜಾರಕಿಹೊಳಿ 2ನೇ ಅಭ್ಯರ್ಥಿಯಾಗುವ ಸಂಭವ ಹೆಚ್ಚಾಗಿದೆ.
# ಕಾರಣವೇನು?:
ಕಾಂಗ್ರೆಸ್‍ನಿಂದ ಬೆಳಗಾವಿ ಗ್ರಾಮೀಣ ವಿಧಾನಸಭಾ ಕ್ಷೇತ್ರದ ಶಾಸಕಿ ಹಾಗೂ ರಮೇಶ್ ಜಾರಕಿಹೊಳಿ ಪ್ರಬಲ ಎದುರಾಳಿಯಾಗಿರುವ ಲಕ್ಷ್ಮಿ ಹೆಬ್ಬಾಳ್ಕರ್ ಸಹೋದರ ಕಣಕ್ಕಿಳಿಯಲು ಮುಂದಾಗಿದ್ದಾರೆ.ಈ ಹಿಂದೆ ಡಿಸಿಸಿ ಬ್ಯಾಂಕ್ ಅಧ್ಯಕ್ಷರ ಚುನಾವಣೆ ಸೇರಿದಂತೆ ಲಕ್ಷ್ಮಿ ಹೆಬ್ಬಾಳ್ಕರ್ ವಿರುದ್ಧವೇ ರಾಜಕೀಯ ಸಮರ ಸಾರಿದ್ದ ರಮೇಶ್ ಜಾರಕಿಹೊಳಿ ಈಗ ಸ್ಥಳೀಯ ಸಂಸ್ಥೆ ಚುನಾವಣೆಯಲ್ಲೂ ಹಳೆಯ ಸೇಡು ತೀರಿಸಿಕೊಳ್ಳಲು ಮುಂದಾಗಿದ್ದಾರೆ.
ಜಿಲ್ಲೆಯಲ್ಲೇ ತಮ್ಮ ಸಹೋದರನನ್ನು ಗೆಲ್ಲಿಸಿ ಹೆಬ್ಬಾಳ್ಕರ್‍ಗೆ ರಾಜಕೀಯವಾಗಿ ಹಿನ್ನಡೆ ಉಂಟು ಮಾಡಬೇಕೆಂಬುದು ಜಾರಕಿಹೊಳಿ ಕುಟುಂಬದ ಲೆಕ್ಕಾಚಾರವಾಗಿದೆ. ಮೂರು ದಿನಗಳ ಹಿಂದಷ್ಟೇ ಸಿಎಂ ಬೊಮ್ಮಾಯಿ ಅವರನ್ನು ಭೇಟಿ ಮಾಡಿದ್ದ ಸಹೋದರರು ಲಖನ್‍ಗೆ ಟಿಕೆಟ್ ನೀಡಿದರೆ ಗೆಲ್ಲಿಸಿಕೊಡುವ ಜವಾಬ್ದಾರಿ ನಮ್ಮದು.
ಜಿಲ್ಲೆಯಿಂದ ಇಬ್ಬರು ಅಭ್ಯರ್ಥಿಗಳನ್ನು ಗೆಲ್ಲಿಸಿಕೊಡುತ್ತೇವೆ. ಲಖನ್‍ಗೆ ಟಿಕೆಟ್ ನೀಡಲು ವರಿಷ್ಠರಿಗೆ ಮನವಿ ಮಾಡಬೇಕೆಂದು ಹೇಳಿದ್ದರು. ಈಗ ಬಿಜೆಪಿ ಕೂಡ ಸಮ್ಮತಿಸಿದ್ದು, ಕುಂದಾನಗರಿಯಿಂದ ಇಬ್ಬರು ಅಭ್ಯರ್ಥಿಗಳನ್ನು ಕಣಕ್ಕಿಳಿಸಲು ಸಮ್ಮತಿಸಿದೆ.
ಜಿಲ್ಲೆಯಲ್ಲಿ ಹೇಗಾದರೂ ಮಾಡಿ ಹಿಡಿತ ಸಾಸಲೇಬೇಕೆಂದು ಪಣ ತೊಟ್ಟಿರುವ ಜಾರಕಿಹೊಳಿ ಸಹೋದರನನ್ನು ಕಣಕ್ಕಿಳಿಸಿ ಹೆಬ್ಬಾಳ್ಕರ್‍ಗೆ ಹಿನ್ನಡೆ ಉಂಟು ಮಾಡುವ ಲೆಕ್ಕಾಚಾರದಲ್ಲಿದ್ದಾರೆ. ಒಂದು ವೇಳೆ ಲಕ್ಷ್ಮಿ ಹೆಬ್ಬಾಳ್ಕರ್ ಸಹೋದರ ಕಣಕ್ಕಿಳಿದರೆ ಅವರ ವಿರುದ್ಧವೇ ಲಖನ್ ಸ್ರ್ಪಸುವುದು ಖಚಿತ ಎನ್ನಲಾಗುತ್ತಿದೆ. ಹೀಗಾಗಿ ಬೆಳಗಾವಿ ಮತ್ತೊಮ್ಮೆ ಸ್ಥಳೀಯ ಸಂಸ್ಥೆ ಚುನಾವಣೆಯಲ್ಲೂ ರಾಜ್ಯದ ಗಮನ ಸೆಳೆಯುವುದು ಖಚಿತವಾಗಿದೆ.