ರೈತರಿಗೆ ಗುಡ್ನ್ಯೂಸ್ : ಶೀಘ್ರವೇ ರಾಯಚೂರು ಎಪಿಎಂಸಿಯಲ್ಲಿ 'ಮೆಣಸಿನಕಾಯಿ ಹರಾಜು ಪ್ರಕ್ರಿಯೆ ಆರಂಭ'
ರಾಯಚೂರು : ಜಿಲ್ಲೆಯಲ್ಲಿ ಮೆಣಸಿನಕಾಯಿ ಬೆಳೆಯುವ ರೈತರಿಗೆ ಅನುಕೂಲವಾಗುವಂತೆ ಯೋಜನೆ ರೂಪಿಸಲು ರಾಯಚೂರು ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ ಮುಂದಾಗಿದೆ. ಎಪಿಎಂಸಿಯು ಮೆಣಸಿನಕಾಯಿ ಹರಾಜು ಪ್ರಕ್ರಿಯೆಯನ್ನು ಶೀಘ್ರದಲ್ಲೇ ಆರಂಭಿಸಲಿದ್ದು, ಇದರಿಂದ ರೈತರಿಗೆ ತುಂಬಾ ಅನುಕೂಲವಾಗಲಿದೆ.
ಆರಂಭದಲ್ಲಿ ಪ್ರತಿ ಭಾನುವಾರ ಮಾತ್ರ ಮೆಣಸಿನಕಾಯಿ ಹರಾಜು ಪ್ರಕ್ರಿಯೆ ಮಾಡಲಾಗುತ್ತಿತ್ತು. ಆದರೆ ಇದೀಗ ರೈತರ ಪ್ರತಿಕ್ರಿಯೆ ಆಧರಿಸಿ ಮಾರಾಟವನ್ನು ವಿಸ್ತರಿಸಲು ಯೋಜಿಸಿದೆ. ಸದ್ಯಕ್ಕೆ ಎಪಿಎಂಸಿ ಆವರಣದದಲ್ಲಿ ಭತ್ತ ಮಾರಾಟ ವ್ಯಾಪಕವಾಗಿದೆ. ಭತ್ತದ ಮಾರುಕಟ್ಟೆಗೆ ಯಾವುದೇ ತೊಂದರೆ ಆಗದಂತೆ ಮೆಣಸಿನಕಾಯಿ ವಹಿವಾಟು ಆರಂಭವಾಗಲಿದೆ
. ಜಿಲ್ಲೆಯಾದ್ಯಂತ ಹೆಚ್ಚಿನ ಸಂಖ್ಯೆಯಲ್ಲಿ ರೈತರು ಮುಂಗಾರು ಹಾಗೂ ಹಿಂಗಾರು ಅವಧಿಯಲ್ಲಿ ಮೆಣಸಿನಕಾಯಿ ಬೆಳೆಯುತ್ತಿದ್ದಾರೆ. ವರ್ಷದಿಂದ ವರ್ಷಕ್ಕೆ ಮೆಣಸಿನಕಾಯಿ ಬೆಳೆಯುವ ಕ್ಷೇತ್ರವು ವಿಸ್ತರಣೆ ಆಗುತ್ತಿದೆ. ಆದರೆ, ಜಿಲ್ಲೆಯಲ್ಲಿ ಮೆಣಸಿನಕಾಯಿ ಮಾರಾಟಕ್ಕೆ ಸೂಕ್ತವಾದ ಮಾರುಕಟ್ಟೆ ಇದುವರೆಗೂ ಅಭಿವೃದ್ಧಿ ಮಾಡಿಲ್ಲ. ಅನಿವಾರ್ಯವಾಗಿ ರೈತರು ದೂರದ ಹಾವೇರಿ ಹಾಗೂ ಬಳ್ಳಾರಿ ಜಿಲ್ಲೆಗಳಿಗೆ ಹೋಗಿ ಮೆಣಸಿನಕಾಯಿ ಮಾರಾಟ ಮಾಡುವ ಸ್ಥಿತಿ ನಿರ್ಮಾಣವಾಗಿದೆ.
ಪ್ರದೇಶವಾರು ಮೆಣಸಿನಕಾಯಿ ಬೆಳೆ ವಿವರ
ಪ್ರಸಕ್ತ ವರ್ಷದಲ್ಲಿ ದೇವದುರ್ಗ ತಾಲೂಕಿನಲ್ಲಿ ಅತಿಹೆಚ್ಚು ಅಂದರೆ 6,560 ಹೆಕ್ಟೇರ್ ಮೆಣಸಿನಕಾಯಿ ಬೆಳೆಯಲಾಗಿದೆ. ಮಾನ್ವಿಯಲ್ಲಿ 568 ಹೆಕ್ಟೇರ್, ರಾಯಚೂರಿನಲ್ಲಿ 495 ಹೆಕ್ಟೇರ್, ಲಿಂಗಸುಗೂರಿನಲ್ಲಿ 412 ಹೆಕ್ಟೇರ್, ಸಿಂಧನೂರಿನಲ್ಲಿ 196 ಹೆಕ್ಟೇರ್, ಸಿರವಾರದಲ್ಲಿ 172 ಹೆಕ್ಟೇರ್ ಹಾಗೂ ಮಸ್ಕಿ ತಾಲೂಕಿನಲ್ಲಿ 46 ಹೆಕ್ಟೇರ್ ಮೆಣಸಿನಕಾಯಿ ಬೆಳೆಯಲಾಗಿದೆ.
ಕೇಂದ್ರ ಸರ್ಕಾರದ 'ಒಂದು ಜಿಲ್ಲೆ ಒಂದು ಬೆಳೆ' ಯೋಜನೆಯಡಿ ರಾಯಚೂರು ಜಿಲ್ಲೆಯು ಮೆಣಸಿನಕಾಯಿ ಬೆಳೆಗೆ ಆಯ್ಕೆಯಾಗಿದೆ. ಹೀಗಾಗಿ ಮೆಣಸಿನಕಾಯಿ ಬೆಳೆಯುವುದಕ್ಕೆ, ಮೌಲ್ಯವರ್ಧನೆಗೆ ಹಾಗೂ ಸಂಗ್ರಹಣೆಗೆ ಸರ್ಕಾರದಿಂದ ನೆರವು ನೀಡಲಾಗುತ್ತಿದೆ. ಸರ್ಕಾರವು ಪ್ರೋತ್ಸಾಹ ನೀಡುತ್ತಿರುವುದರಿಂದ ಮುಂಬರುವ ವರ್ಷಗಳಲ್ಲಿ ಮೆಣಸಿನಕಾಯಿ ಬೆಳೆಯುವ ಕ್ಷೇತ್ರವು ಮತ್ತಷ್ಟು ವಿಸ್ತರಣೆ ಆಗಲಿದೆ ಎಂದು ಅಲ್ಲಿನ ಸಿಬ್ಬಂದಿಗಳು ಹೇಳುತ್ತಿದ್ದಾರೆ.
ಮೆಣಸಿನಕಾಯಿ ಬೆಳೆಯುವವರ ಸಂಖ್ಯೆ ಹೆಚ್ಚಳ
2019 ರಲ್ಲಿ ಒಟ್ಟು 6,295 ಹೆಕ್ಟೇರ್ನಷ್ಟಿದ್ದ ಮೆಣಸಿನಕಾಯಿ ಬೆಳೆಯುವ ಕ್ಷೇತ್ರವು, 2022ರಲ್ಲಿ ಶೇಕಡಾ 13ರಷ್ಟು ಹೆಚ್ಚಳವಾಗಿದೆ. ಪ್ರತಿ ಕ್ವಿಂಟಲ್ ಒಣಮೆಣಸಿನಕಾಯಿ ದರವು 16 ಸಾವಿರ ರೂಪಾಯಿಯಿಂದ 25 ಸಾವಿರದವರೆಗೂ ಇದೆ. ಅದರಲ್ಲಿಯೂ ಖಾರ ಒಣ ಮೆಣಸಿನಕಾಯಿ, ಬ್ಯಾಡಗಿ ಒಣ ಮೆಣಸಿನಕಾಯಿಗೆ ಬೇಡಿಕೆ ಹೆಚ್ಚಾಗಿದೆ. ಇನ್ನು ಜಿಲ್ಲೆಯಲ್ಲಿ ಒಂದು ಹೆಕ್ಟೇರ್ ಭೂಮಿಯಲ್ಲಿ ಗರಿಷ್ಠ 30 ಕ್ವಿಂಟಲ್ವರೆಗೂ ಮೆಣಸಿನಕಾಯಿ ಬೆಳೆಯಲಾಗುತ್ತದೆ. ಆದ್ದರಿಂದ ರಾಯಚೂರಿನಲ್ಲಿಯೇ ಮೆಣಸಿನಕಾಯಿ ಮಾರಾಟ ಮಾಡಿದರೆ, ಸಾಗಿಸುವ ಖರ್ಚು ಉಳಿಯುತ್ತದೆ. ಖರೀದಿದಾರರನ್ನು ಹೆಚ್ಚಿನ ಸಂಖ್ಯೆಯಲ್ಲಿ ರಾಯಚೂರು ಮಾರುಕಟ್ಟೆಗೆ ಕರೆಸಿದರೆ ರೈತರಿಗೆ ಅನುಕೂಲವಾಗುತ್ತದೆ ಎಂದು ಮೆಣಸಿನಕಾಯಿ ಬೆಳೆಗಾರ ನಿಂಗಪ್ಪ ಜಕ್ಕಲದಿನ್ನಿ ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸಿದರು.